ಇಂದಿನಿಂದ ಮೈಸೂರಲ್ಲಿ ಕೆಪಿಎಲ್ ಪಂದ್ಯಾವಳಿ
ಮೈಸೂರು

ಇಂದಿನಿಂದ ಮೈಸೂರಲ್ಲಿ ಕೆಪಿಎಲ್ ಪಂದ್ಯಾವಳಿ

August 25, 2018
  •  ಗಂಗೋತ್ರಿ ಶ್ರೀಕಂಠದತ್ತ ನರಸಿಂಹರಾಜ ಸ್ಟೇಡಿಯಂನಲ್ಲಿ ಪಂದ್ಯ
  •  ಹುಬ್ಬಳ್ಳಿ ಪಂದ್ಯಗಳು ಸೇರಿ ಒಟ್ಟು 16 ಪಂದ್ಯಗಳು ಮೈಸೂರಲ್ಲಿ

ಮೈಸೂರು: ಕೆಪಿಎಲ್ ಪಂದ್ಯಾವಳಿಯ ಫೈನಲ್ ಹಾಗೂ ಸೆಮಿ ಫೈನಲ್ ಸೇರಿದಂತೆ 16 ಪಂದ್ಯಗಳು ಮೈಸೂರಿನ ಮಾನಸಗಂಗೋತ್ರಿಯ ಶ್ರೀ ಕಂಠದತ್ತನರಸಿಂಹ ರಾಜ ಒಡೆಯರ್(ಗ್ಲೇಡ್ಸ್) ಮೈದಾನದಲ್ಲಿ ನಡೆಯಲಿದ್ದು, ಇದಕ್ಕಾಗಿ ಮೈದಾನದಲ್ಲಿ 10 ಸಾವಿರ ಆಸನದ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಕಾರ್ಬನ್ ಸ್ಮಾರ್ಟ್‍ಫೋನ್ ಕೆಪಿಎಲ್ ಪಂದ್ಯಾವಳಿಯ ಏಳನೇ ಆವೃತ್ತಿಯ ಮೊದಲ ಪಂದ್ಯ ನಾಳೆ(ಆ.25) ಮಧ್ಯಾಹ್ನ 2ಗಂಟೆಗೆ ಬೆಳಗಾವಿ ಫ್ಯಾಂಥರ್ಸ್ ಹಾಗೂ ಬಳ್ಳಾರಿ ಟಸ್ಕರ್ ನಡುವೆ ನಡೆಯಲಿದೆ. ಸಂಜೆ 6.30ಕ್ಕೆ ಮತ್ತೊಂದು ಪಂದ್ಯ ಶಿವಮೊಗ್ಗ ಲಯನ್ಸ್ ಮತ್ತು ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಡುವೆ ನಡೆಯಲಿದೆ.

ಸಜ್ಜಾಗಿದೆ ಮೈದಾನ: ಕೆಪಿಎಲ್ ಪಂದ್ಯಾವಳಿಯ ಫೈನಲ್ ಹಾಗೂ ಸೆಮಿ ಫೈನಲ್ ಸೇರಿದಂತೆ ಒಟ್ಟು 16 ಪಂದ್ಯಗಳು ಮೈಸೂರಿನ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹ ರಾಜ ಮೈದಾನದಲ್ಲಿ ನಡೆಯಲಿವೆ. ಈ ಹಿಂದೆ ಮೈಸೂರಿನಲ್ಲಿ 10 ಪಂದ್ಯಗಳಿಗೆ ವೇಳಾಪಟ್ಟಿ ನಿಗಧಿ ಮಾಡಲಾಗಿತ್ತು. ಆದರೆ ಹುಬ್ಬಳ್ಳಿಯಲ್ಲಿ ಮಳೆಯ ಮುನ್ಸೂಚನೆಯಿಂದಾಗಿ ಅಲ್ಲಿ ನಡೆಯಬೇಕಾಗಿದ್ದ ಆರು ಪಂದ್ಯಗಳು ಮೈಸೂರಿಗೆ ವರ್ಗವಾಗಿವೆ. ಹಾಗಾಗಿ ಮೈಸೂರಿನ ಕ್ರಿಕೆಟ್ ಪ್ರೇಮಿಗಳು 16 ಪಂದ್ಯ ವೀಕ್ಷಿಸುವ ಅವಕಾಶ ಲಭಿಸಿದೆ. ಈಗಾಗಲೇ ಮೈದಾನದಲ್ಲಿ ಒಟ್ಟು ನಾಲ್ಕು ಪಿಚ್‍ಗಳನ್ನು ನಿರ್ಮಿಸಲಾಗಿದೆ. ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಪಿಚ್ ಸಿದ್ಧಪಡಿಸಲಾಗಿದೆ.

ಅಲ್ಲದೆ ಮೈದಾನದ ಸುತ್ತಲೂ ಪ್ರೇಕ್ಷಕರಿಗಾಗಿ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಪಂದ್ಯ ನಡೆಯುವ ವೇಳೆ ಪ್ರೇಕ್ಷಕರು ಮೈದಾನದೊಳಗೆ ಪ್ರವೇಶಿಸುವುದನ್ನು ತಡೆಗಟ್ಟಲು ಗ್ರಿಲ್ ವ್ಯವಸ್ಥೆ ಮಾಡಲಾಗಿದೆ. ಪ್ರೇಕ್ಷಕರು ಹಾಗೂ ಗಣ್ಯರಿಗಾಗಿ ಪ್ರತ್ಯೇಕ ಸ್ಥಳಗಳಲ್ಲಿ ವಾಹನ ನಿಲುಗಡೆ ಹಾಗೂ ಪ್ರವೇಶ ದ್ವಾರಗಳನ್ನು ತೆರೆಯಲಾಗಿದೆ. ಶುಕ್ರವಾರ ಪಿಚ್‍ಗೆ ಅಂತಿಮ ರೂಪ ನೀಡುವ ಹಾಗೂ ಮೈದಾನದಲ್ಲಿ ಬೆಳೆದಿರುವ ಹುಲ್ಲಿನ ಮೇಲೆ ರೋಲರ್ ಹರಿಸಿ, ಸಮತಟ್ಟು ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

Translate »