ಕೆ.ಆರ್.ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳು ಕೆಟ್ಟು ಬಡ ರೋಗಿಗಳ ಪರದಾಟ
ಮೈಸೂರು

ಕೆ.ಆರ್.ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳು ಕೆಟ್ಟು ಬಡ ರೋಗಿಗಳ ಪರದಾಟ

August 25, 2018

ಮೈಸೂರು: ಮೈಸೂರಿನ ಕೆ.ಆರ್.ಆಸ್ಪತ್ರೆ ಕಿಡ್ನಿ ರೋಗಿಗಳ ವಿಭಾಗದ ಡಯಾಲಿಸಿಸ್ ಯಂತ್ರಗಳು ಕೆಟ್ಟು, ರೋಗಿಗಳು ಪರದಾಡುವಂತಾಗಿದೆ.

ಕೆ.ಆರ್.ಆಸ್ಪತ್ರೆ ಕಿಡ್ನಿ(ಮೂತ್ರಪಿಂಡ) ವಿಭಾಗದಲ್ಲಿ 9 ಡಯಾಲಿಸಿಸ್ ಯಂತ್ರಗಳಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಬಡ ಕುಟುಂಬದ ಕಿಡ್ನಿ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಡಯಾಲಿಸಿಸ್ ಮೂಲಕ ಚೈತನ್ಯ ತುಂಬಲಾಗುತ್ತಿತ್ತು. ಈ ಹಿಂದೆ ಜಯದೇವ ಹೃದ್ರೋಗ ಆಸ್ಪತ್ರೆಯಿದ್ದ ಕಟ್ಟಡದಲ್ಲಿಯೇ ಕಿಡ್ನಿ ವಿಭಾಗವಿದ್ದು, ಡಯಾಲಿಸಿಸ್ ಸೇರಿದಂತೆ ಇನ್ನಿತರ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಖಾಸಗಿ ಆಸ್ಪತ್ರೆ ಹಾಗೂ ಡಯಾಲಿಸಿಸ್ ಕೇಂದ್ರಗಳಲ್ಲಿ ಶುಲ್ಕ ಹೆಚ್ಚಾಗಿರುವುದರಿಂದ ಬಡವರು ಹಾಗೂ ಮಧ್ಯಮ ವರ್ಗದ ರೋಗಿಗಳು ದುಬಾರಿ ಹಣ ನೀಡಿ ಡಯಾಲಿಸಿಸ್ ಮಾಡಿಸಲಾಗದೆ ಯಾತನೆ ಅನುಭವಿಸುತ್ತಿದ್ದರು. ಹಿನ್ನೆಲೆಯಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿನ ಡಯಾಲಿಸಿಸ್ ವಿಭಾಗದ ಬಡ ಕುಟುಂಬದ ರೋಗಿಗಳಿಗೆ ವರದಾನವಾಗಿ ಪರಿಣಮಿಸಿತ್ತು.

ಕೆ.ಆರ್.ಆಸ್ಪತ್ರೆಯ ಕಿಡ್ನಿ ಚಿಕಿತ್ಸಾ ವಿಭಾಗದಲ್ಲಿ ಒಟ್ಟು 9 ಡಯಾಲಿಸಿಸ್ ಯಂತ್ರಗಳಿವೆ. ಪ್ರತಿ ದಿನ ಸುಮಾರು 15ರಿಂದ 20 ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತಿತ್ತು. ಆದರೆ ಕಳೆದ 15 ದಿನಗಳಿಂದ ತಾಂತ್ರಿಕ ಸಮಸ್ಯೆಯಿಂದಾಗಿ ಎಲ್ಲಾ 9 ಯಂತ್ರಗಳು ಕೆಟ್ಟಿವೆ. ಇದರಿಂದ ಬಡರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆ ಅಥವಾ ಖಾಸಗಿ ಡಯಾಲಿಸಿಸ್ ಕೇಂದ್ರಗಳಲ್ಲಿ ದುಬಾರಿ ಶುಲ್ಕ ನೀಡುವುದಕ್ಕೆ ಸಾಧ್ಯವಾಗದೆ ನೋವನ್ನು ಅನುಭವಿಸುತ್ತಿದ್ದಾರೆ. ಪ್ರತಿದಿನ ಆಸ್ಪತ್ರೆಗೆ ಬರುವ ರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳದೆ ಕೇವಲ ಚಿಕಿತ್ಸೆ ಪಡೆದು ವಾಪಸ್ಸಾಗುತ್ತಿದ್ದಾರೆ.

ಮಧುಮೇಹ, ರಕ್ತದೊತ್ತಡ, ಕುಡಿತದ ಚಟ ಹೊಂದಿರುವವರಿಗೆ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದರೆ ಸಮಸ್ಯೆ ಉಲ್ಬಣಿಸುವುದಿಲ್ಲ. ಆದರೆ ಸಮಸ್ಯೆ ಉಲ್ಬಣಿಸಿದಾಗ ಚಿಕಿತ್ಸೆ ಪಡೆಯಲು ಬಂದರೆ ಡಯಾಲಿಸಿಸ್‍ವೊಂದು ಅಂತಿಮ ಮಾರ್ಗವಾಗಿದೆ. ಕಿಡ್ನಿ ವೈಫಲ್ಯದಲ್ಲಿ ಎರಡು ವಿಧಗಳಿದ್ದು, ಎಕ್ಯೂಟ್(ತತ್‍ಕ್ಷಣ) ಹಾಗೂ ಕ್ರೋನಿಕ್(ದೀರ್ಘಕಾಲದ) ಕಿಡ್ನಿ ವೈಫಲ್ಯ ಎಂದು ವಿಂಗಡಿಸಲಾಗಿದೆ. ಎಕ್ಯೂಟ್ ಕಿಡ್ನಿ ವೈಫಲ್ಯಕ್ಕೆ ಡಯಾಲಿಸಿಸ್‍ನೊಂದಿಗೆ ಇನ್ನಿತರೆ ಚಿಕಿತ್ಸೆ ನೀಡಿ ಗುಣಮುಖ ಮಾಡಬಹುದಾಗಿದೆ. ಆದರೆ ಕ್ರೋನಿಕ್ ಕಿಡ್ನಿ ವೈಫಲ್ಯಕ್ಕೆ ಡಯಾಲಿಸಿಸ್‍ನೊಂದಿಗೆ ಇನ್ನಿತರೆ ಚಿಕಿತ್ಸೆ ನೀಡಿದರೂ ಶೇ.30ರಿಂದ 40ರಷ್ಟು ಗುಣಮುಖರಾಗಬಹುದಾಗಿದೆ. ಇಂತಹ ಗಂಭೀರತೆಯ ಚಿಕಿತ್ಸೆ ನೀಡುವ ಡಯಾಲಿಸಿಸ್ ಯಂತ್ರಗಳು ಕೆಟ್ಟಿದ್ದರೂ ತ್ವರಿತಗತಿಯಲ್ಲಿ ದುರಸ್ಥಿ ಮಾಡಿಸಿ, ಬಡ ಕುಟುಂಬದ ರೋಗಿಗಳಿಗೆ ಡಯಾಲಿಸಿಸ್ ಮಾಡಿಸುವುದಕ್ಕೆ ಹಿಂದೇಟು ಹಾಕಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಮಳವಳ್ಳಿಯ ಕಿಡ್ನಿ ಸಮಸ್ಯೆಗೀಡಾದ ರೋಗಿ ಸಂಬಂಧಿಯೊಬ್ಬರು, ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಬೇಕಾಗಿದೆ. ಕೆ.ಆರ್.ಆಸ್ಪತ್ರೆಯಲ್ಲಿ ಉಚಿತವಾಗಿ ಡಯಾಲಿಸಿಸ್ ಮಾಡಿಸಬಹುದಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಬಾರಿ ಡಯಾಲಿಸಿಸ್ ಮಾಡಿಸಿದರೆ ಎರಡೂವರೆ ಸಾವಿರ ರೂ ಹಣ ಪಾವತಿಸಬೇಕಾಗಿದೆ. ಬಡವರು ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡಿ ಚಿಕಿತ್ಸೆ ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಕಳೆದ ಎರಡು ವರ್ಷದಿಂದ ನಮ್ಮ ಮಗನಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಕೂಲಿ ಮಾಡಿ ಚಿಕಿತ್ಸೆ ಕೊಡಿಸುವುದು ಕಷ್ಟವಾಗುತ್ತಿದ್ದರೂ ಮಗನನ್ನು ಗುಣಮುಖನನ್ನಾಗಿ ಮಾಡುವುದಕ್ಕೆ ಶ್ರಮಿಸುತ್ತಿದ್ದೇವೆ. ಆದರೆ ಕೆ.ಆರ್.ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರ ಕೆಟ್ಟು 15 ದಿನ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೆ.ಆರ್.ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಎಲ್ಲರೂ ಬಡ ಕುಟುಂಬದಿಂದ ಬಂದಿರುವವರಾಗಿದ್ದಾರೆ. ಇದನ್ನು ಮನಗಂಡು ತುರ್ತಾಗಿ ಡಯಾಲಿಸಿಸ್ ಯಂತ್ರಗಳನ್ನು ದುರಸ್ಥಿ ಮಾಡಿಸಿ ಚಿಕಿತ್ಸೆ ಮುಂದುವರೆಸಿ ರೋಗಿಗಳ ಜೀವ ಉಳಿಸಬೇಕೆಂದು ಕೋರುತ್ತೇನೆ ಎಂದು ಅಳಲು ತೋಡಿಕೊಂಡರು.

ಕೆ.ಆರ್.ನಗರದ ರೋಗಿ ಸಂಬಂಧಿಯೊಬ್ಬರು ಮಾತನಾಡಿ, ಗುರುವಾರ ನಮ್ಮ ರೋಗಿಗೆ ಡಯಾಲಿಸಿಸ್ ಮಾಡಿಸಬೇಕಾಗಿತ್ತು. ಇದಕ್ಕಾಗಿ ನಾವು ಕೆ.ಆರ್.ನಗರದಿಂದ ಕಾರ್ ಮಾಡಿಕೊಂಡು ಬಂದಿದ್ದೇವೆ. ಆದರೆ ಇಲ್ಲಿ ಯಂತ್ರಗಳು ಕೆಟ್ಟಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವಂತೆ ಹೇಳುತ್ತಿದ್ದಾರೆ. ನಮ್ಮಲ್ಲಿ ಅಷ್ಟು ಪ್ರಮಾಣದ ಹಣವಿದ್ದರೆ ಸರ್ಕಾರಿ ಆಸ್ಪತ್ರೆಗೆ ಬರುತ್ತಿರಲಿಲ್ಲ. ನಮ್ಮಂತಹವರ ಕಷ್ಟವನ್ನು ಅರಿತುಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಕೆ.ಆರ್.ಆಸ್ಪತ್ರೆಯತ್ತ ಗಮನಹರಿಸಿ ಡಯಾಲಿಸಿಸ್ ನಿರಂತರವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Translate »