ಕೆ.ಆರ್.ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ
ಮೈಸೂರು

ಕೆ.ಆರ್.ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ

May 27, 2019

ಮೈಸೂರು: ಮೈಸೂರಿನ ಕೆ.ಆರ್.ಆಸ್ಪತ್ರೆ ಹಲವು ಗಂಭೀರ ಸಮಸ್ಯೆಗಳಿಂದ ಬಳಲುತ್ತಿದ್ದು, ತುರ್ತು ಚಿಕಿತ್ಸೆಯ ಅಗತ್ಯವಿದೆ.

ಬಡ ರೋಗಿಗಳಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸುವ ಮಹೋದ್ದೇಶದಿಂದ ಮಹಾರಾಜರು ಸ್ಥಾಪಿಸಿದ ದೊಡ್ಡಾಸ್ಪತ್ರೆ ವ್ಯವಸ್ಥೆಯೇ ಬದಲಾ ದಂತಿದೆ. ಕೆಲ ಗೊಂದಲದಿಂದಾಗಿ ಕೇಂದ್ರದ `ಆಯುಷ್ಮಾನ್ ಭಾರತ್’ ಹಾಗೂ ರಾಜ್ಯದ `ಆರೋಗ್ಯ ಕರ್ನಾಟಕ’ ಆರೋಗ್ಯ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಪಡಿತರ ಚೀಟಿ, ಆಧಾರ್ ಕಾರ್ಡ್ ಹಿಡಿದು ಉಚಿತ ಚಿಕಿತ್ಸೆ ಸಿಗಬಹುದೆಂದು ಇಲ್ಲಿಗೆ ಬರುವ ಬಡ ರೋಗಿಗಳು, ಅಗತ್ಯ ಮಾಹಿತಿ ಲಭ್ಯವಿಲ್ಲದೆ ಕಂಗಾಲಾಗಿದ್ದಾರೆ. ಆರೋಗ್ಯ ಯೋಜನೆಯಡಿ ಯಾವೆಲ್ಲಾ ಸಮಸ್ಯೆಗಳಿಗೆ ಉಚಿತ ಚಿಕಿತ್ಸೆ ಸಿಗುತ್ತದೆ. ಯಾವ ಚಿಕಿತ್ಸೆಗೆ ಎಷ್ಟು ಹಣ ಪಾವತಿಸಬೇಕು. ಇಲ್ಲಿಂದ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡಿಸಿಕೊಳ್ಳಲು ಏನು ಮಾಡಬೇಕು? ಯಾರನ್ನು ಭೇಟಿಯಾಗ ಬೇಕೆಂದು ತಿಳಿಯದೆ ಅಲೆದಾಡುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಇರುವವರೂ ಹಣ ಪಾವತಿಸ ಬೇಕಂತೆ. ಹೀಗಾದರೆ ನಮ್ಮಂತ ಬಡವರು ಎಲ್ಲಿಗೆ ಹೋಗಬೇಕೆಂದು ಅಸಹಾಯಕತೆಯಿಂದ ಒಬ್ಬರಿಗೊಬ್ಬರು ಪ್ರಶ್ನಿಸಿಕೊಳ್ಳುತ್ತಿದ್ದಾರೆ.

ಔಷಧಿ ಕೊರತೆ: ಕೆ.ಆರ್.ಆಸ್ಪತೆಯಲ್ಲಿ ಅಗತ್ಯ ಔಷಧಿಗಳೇ ಲಭ್ಯವಿಲ್ಲ ಎಂಬುದು ಆಘಾತಕಾರಿ ಸಂಗತಿ. ಬಡ ರೋಗಿಗಳು ಖಾಸಗಿ ಮೆಡಿಕಲ್ಸ್ ಗಳಲ್ಲಿ ಔಷಧಿಯನ್ನು ಕೊಳ್ಳುವಂತಾಗಿದೆ. ಹಣದ ಕೊರತೆಯಿರುವ ರೋಗಿಗಳು, ವೈದ್ಯರು ಸೂಚಿಸಿ ದ್ದಕ್ಕಿಂತ ಕಡಿಮೆ ಔಷಧಿ ತೆಗೆದುಕೊಂಡು ಹೋಗುತ್ತಾರೆ. ಕೆ.ಆರ್.ಆಸ್ಪತ್ರೆ ಅಕ್ಕಪಕ್ಕದಲ್ಲಿರುವ ಮೆಡಿಕಲ್ಸ್ ಬಳಿ ಈ ದೃಶ್ಯ ಸಾಮಾನ್ಯವಾಗಿದೆ. ವೈದ್ಯರು, ಸಿಬ್ಬಂದಿಗೆ ಬೇಕಾದ ಗ್ಲೌಸ್, ಸ್ಪಿರಿಟ್ ಸಹ ಇಲ್ಲದಂತಾಗಿದೆ. ರೋಗಿಗಳ ಪರೀಕ್ಷೆಗೆ ಬೇಕಾದ ಥರ್ಮಾಮೀಟರ್ ಅನೇಕ ವಾರ್ಡ್ ಗಳಲ್ಲಿ ಇಲ್ಲವಾದರೂ ಒದಗಿಸುವ ಪ್ರಯತ್ನ ನಡೆದಿಲ್ಲ ಎಂದು ತಿಳಿದು ಬಂದಿದೆ.


ನರ್ಸ್‍ಗಳಿಲ್ಲ: ರೋಗಿಗಳ ಆರೈಕೆ ಮಾಡುವ ಶುಶ್ರೂಷಕರ ಕೊರತೆ ಕೆ.ಆರ್.ಆಸ್ಪತ್ರೆಯನ್ನು ಕಾಡು ತ್ತಿದೆ. ಆಪರೇಷನ್ ಥಿಯೇಟರ್‍ನಲ್ಲಿ ಒಬ್ಬರು ಅಥವಾ ಇಬ್ಬರು ಶುಶ್ರೂಷಕರು ಕಾರ್ಯ ನಿರ್ವಹಿಸುತ್ತಾರೆ. ತೀವ್ರ ನಿಗಾ ಘಟಕದಲ್ಲಿ ಶೇ.50ರಷ್ಟು ನರ್ಸ್‍ಗಳ ಕೊರತೆಯಿದೆ. ಸಂಜೆ 4ರಿಂದ ರಾತ್ರಿ 8ರವರೆಗೆ ಯಾವೊಬ್ಬ ಶುಶ್ರೂಷಕರೂ ಕಾಣಿಸುವುದಿಲ್ಲ.

ಪ್ರಶಿಕ್ಷಣಾರ್ಥಿಗಳೇ ವಾರ್ಡ್‍ಗಳ ನಿರ್ವಹಣೆ ಮಾಡುವಂತಾಗಿದೆ. ನಿವೃತ್ತಿಯಿಂದ ತೆರವಾದ ಸ್ಥಾನಗಳ ಭರ್ತಿ ಮಾಡಿಲ್ಲ. ಈ ಹಿಂದೆ ನರ್ಸಿಂಗ್ ಶಿಕ್ಷಣ ಪಡೆದವರನ್ನು 2 ವರ್ಷದ ಅವಧಿಗೆ ಸ್ಟೈಫಂಡ್ ಆಧಾರದಲ್ಲಿ ನಿಯೋಜಿಸಿಕೊಳ್ಳಲಾಗು ತ್ತಿತ್ತು. ಆದರೆ ಕೆಲ ಕಾರಣಗಳಿಂದ ಈ ಪ್ರಕ್ರಿಯೆ ನಿಂತೇ ಹೋಗಿದೆ. ಶುಶ್ರೂಷಕರ ಕೊರತೆಯಿಂದಾಗಿ ಒಳ ರೋಗಿಗಳು ಸೂಕ್ತ ಆರೈಕೆಯಿಲ್ಲದೆ ಬಳಲುವಂತಾಗಿದೆ.

200 ಕೊಡಿ: ಕೆ.ಆರ್.ಆಸ್ಪತ್ರೆಗೆ ಶ್ರೀಮಂತರು ಬರುವುದಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯಲು ಸಾಧ್ಯವಾಗದ ಬಡವರು ಮಾತ್ರ ಇಲ್ಲಿಗೆ ಬರುತ್ತಾರೆ. ಅವರಿಗೆ ನೂರು ಸಾವಿರಕ್ಕೆ, ಸಾವಿರ ಲಕ್ಷಕ್ಕೆ ಸಮ. ಒಂದೊಂದು ರೂಪಾಯಿಗೂ ಲೆಕ್ಕ ಹಾಕುವಂತ ಸ್ಥಿತಿ ಅವರದ್ದಾಗಿರುತ್ತದೆ. ಆದರೆ ಇಂತಹವರಿಂದಲೂ ಹಣಕ್ಕೆ ಪೀಡಿಸುವ ಕಿರಾ ತಕರು ಕೆಲವರಿದ್ದಾರೆ. ಆಪರೇಷನ್‍ಗೆ ಮುನ್ನ ಶೇವಿಂಗ್ ಮಾಡಿಸಲು 150 ರೂ., ರೋಗಿ ಯನ್ನು ಆಪರೇಷನ್ ಥಿಯೇಟರ್‍ಗೆ ಕರೆದು ಕೊಂಡು ಹೋಗಲು 200ರೂ., ವಾಪಸ್ಸು ವಾರ್ಡ್‍ಗೆ ಕರೆತರಲು 200ರೂ., ಓಟಿಯಲ್ಲಿ ಧರಿಸುವ ಬಟ್ಟೆ ಕೊಡುವವನಿಗೆ 20-30ರೂ. ಹೀಗೆ ಎಲ್ಲಿ ಹೋದರೂ ಹಣ ಕೊಡಬೇಕು. ಪ್ರತಿ ವಾರ್ಡ್ ಬಳಿ ತೆರಳಿ ರೋಗಿಗಳಿಗೆ ಊಟ ನೀಡಬೇಕು.

ಎಲ್ಲೋ ಒಂದು ಕಡೆ ಗಾಡಿ ನಿಲ್ಲಿಸಿಕೊಳ್ಳುತ್ತಾರೆ. ಇದನ್ನು ತಿಳಿದವರು ಮಾತ್ರ ಅಲ್ಲಿಗೇ ಹೋಗಿ ಊಟ ಪಡೆಯುತ್ತಾರೆ. ಗೊತ್ತಾಗದವರಿಗೆ ಊಟವೇ ಇಲ್ಲ. ಇನ್ನು ಹಾಲು-ಬ್ರೆಡ್ ಕೊಡುವವರು ವಾರ್ಡ್‍ಗಳತ್ತ ಸುಳಿಯುವುದೇ ಇಲ್ಲ. ಎಲ್ಲೋ ಒಂದೆರಡು ವಾರ್ಡ್‍ಗಳ ರೋಗಿಗಳಿಗೆ ನೀಡಿ, ಥಟ್ ಅಂತ ಅಲ್ಲಿಂದ ಮಾಯವಾಗುತ್ತಾರೆ. ಕೂಗಿಕೊಂಡರೂ ಕೇಳಿಸದವರಂತೆ ಕಾಲ್ಕೀಳು ತ್ತಾರೆ. ರೋಗಿಗಳಿಗೆ ನೀಡಬೇಕಾದ ಹಾಲು-ಬ್ರೆಡ್ ಅನ್ನು ಹೋಟೆಲ್‍ಗಳಿಗೆ ಮಾರಾಟ ಮಾಡು ತ್ತಾರೆಂದು ಹೇಳುತ್ತಾರೆ.

ಕೆಲ ನೌಕರರು ರೋಗಿ ಗಳು ಹಾಗೂ ಅವರ ಸಹಾಯಕರನ್ನು ಅವಮಾ ನಿಸುವಂತೆ ಮಾತನಾಡುತ್ತಾರೆ. ಏನಾದರೂ ತೊಂದರೆಯಾಗಬಹುದು ಎಂಬ ಭಯದಿಂದ ಇದನ್ನೆಲ್ಲಾ ಪ್ರಶ್ನಿಸಲು ಅಥವಾ ಪ್ರತಿರೋಧಿಸಲು ಯಾರೂ ಮುಂದಾಗುವುದಿಲ್ಲ ಎಂದು ನೊಂದ ರೋಗಿಗಳು ಅಳಲು ತೋಡಿಕೊಂಡಿದ್ದಾರೆ.

ಎಲ್ಲೆಂದರಲ್ಲಿ ತ್ಯಾಜ್ಯ: ಆಸ್ಪತ್ರೆ ಆವರಣ ಸುತ್ತು ಹಾಕಿದರೆ ಅಲ್ಲಲ್ಲಿ ಕಲ್ಲು-ಮಣ್ಣಿನ ಗುಡ್ಡೆ, ಕಸದ ರಾಶಿ ಕಾಣಸಿಗುತ್ತದೆ. ಕೆಲವೆಡೆ ಸಿರಿಂಜ್, ಖಾಲಿ ಬಾಟಲ್, ಬಳಕೆ ಮಾಡಿದ ಹತ್ತಿ ಇನ್ನಿತರ ಜೈವಿಕ-ವೈದ್ಯಕೀಯ ತ್ಯಾಜ್ಯ ಬಿದ್ದಿರುತ್ತದೆ. ಇದ ನ್ನೆಲ್ಲಾ ತಾತ್ಕಾಲಿಕ ಶೇಖರಣಾ ಸ್ಥಳದಲ್ಲಿ ಸಂಗ್ರಹಿಸಿ, ತುಂಬಾ ನಿಗಾ ವಹಿಸಿ ವಿಲೇವಾರಿ ಮಾಡಬೇಕು. ಆದರೆ ನಿರ್ಲಕ್ಷ್ಯದಿಂದ ಕೆಲವೆಡೆ ಬಿಸಾಕಿರುತ್ತಾರೆ. ಜೈವಿಕ ಹಾಗೂ ವೈದ್ಯಕೀಯ ತ್ಯಾಜ್ಯ ಶೇಖರಣಾ ಘಟಕ ಹಾಗೂ ಲಾಂಡ್ರಿ ಬಳಿ ಹಳೇ ಹಾಸಿಗೆಗಳು, ದಿಂಬುಗಳ ರಾಶಿ ಹಾಕಲಾಗಿತ್ತು. ಮಳೆಯಲ್ಲಿ ತೊಯ್ದು ಮತ್ತಷ್ಟು ಕಾಯಿಲೆ ಹರಡುವ ದುಸ್ಥಿತಿ ನಿರ್ಮಾಣವಾಗಿತ್ತು.

ಮೊನ್ನೆಯಷ್ಟೇ ಆ ರಾಶಿಯನ್ನು ಕಡಿಮೆ ಮಾಡಿದ್ದಾರೆ. ಈಗಲೂ ಒಂದಷ್ಟು ಹಳೇ ಬಟ್ಟೆ, ಹಾಸಿಗೆಗಳು ಅಲ್ಲಿಯೇ ಬಿದ್ದಿವೆ. ಇನ್ನು ಕಣ್ಣಿನ ಆಸ್ಪತ್ರೆ ಹಾಗೂ ಕಾಂತರಾಜ ವಾರ್ಡ್ ಕಟ್ಟಡದ ಮೇಲಿರುವ ನೀರಿನ ಟ್ಯಾಂಕ್‍ಗಳು ತುಂಬಿ ಹರಿದು, ರಾಡಿಯಾ ದರೂ ಯಾರೂ ತಿರುಗಿ ನೋಡುವುದಿಲ್ಲ. ಅವರಿಗೆ ಅನ್ನಿಸಿದಾಗ ಮೋಟರ್ ಆಫ್ ಮಾಡುತ್ತಾರೆ. ಪ್ರಯೋಗಾಲಯದ ಬಳಿ ಹಳೇ ಟ್ಯಾಂಕ್‍ಗಳನ್ನು ಬಿಸಾಡಿದ್ದು, ಮಳೆ ನೀರು ತುಂಬಿ, ಸೊಳ್ಳೆ ಸಂತತಿ ಹೆಚ್ಚಲು ಅನುವಾಗಿದೆ. ರೋಗಿಗಳು ಕೂರಲೆಂದು ಹಾಕಿದ್ದ ಬೆಂಚುಗಳು ಮುರಿದು ನೆಲ ಕಚ್ಚಿವೆ. ಆಸ್ಪತ್ರೆ ಆವರಣದಲ್ಲಿ ಶ್ವಾನ ದಳವೇ ಇದೆ. ಎಲ್ಲೆಂ ದರಲ್ಲಿ ನಿರ್ಭಯವಾಗಿ ಅಡ್ಡಾಡುತ್ತಿರುತ್ತವೆ. ಕೆಲ ಸಿಬ್ಬಂದಿ ವಾಹನಗಳಿಗೆ ಆಸ್ಪತ್ರೆ ಆವರಣವೇ ಪಾರ್ಕಿಂಗ್ ಸ್ಥಳವಾಗಿದೆ. ಒಟ್ಟಾರೆ ಬಡ ರೋಗಿಗಳ ಹಿತದೃಷ್ಟಿ ಯಿಂದ ಈ ಆಸ್ಪತ್ರೆಗೆ ತುರ್ತು ಚಿಕಿತ್ಸೆ ಕೊಡಿಸುವ ಜವಾಬ್ದಾರಿಯನ್ನು ಸಂಬಂಧಪಟ್ಟವರು ನಿರ್ವಹಿಸ ಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Translate »