ಕರ್ನಾಟಕ ಮುಕ್ತ ವಿವಿ 17 ತಾಂತ್ರಿಕೇತರ ಕೋರ್ಸುಗಳ ಪ್ರವೇಶಾತಿ ಪ್ರಕ್ರಿಯೆಗೆ ಎರಡ್ಮೂರು ದಿನಗಳಲ್ಲಿ ಚಾಲನೆ
ಮೈಸೂರು

ಕರ್ನಾಟಕ ಮುಕ್ತ ವಿವಿ 17 ತಾಂತ್ರಿಕೇತರ ಕೋರ್ಸುಗಳ ಪ್ರವೇಶಾತಿ ಪ್ರಕ್ರಿಯೆಗೆ ಎರಡ್ಮೂರು ದಿನಗಳಲ್ಲಿ ಚಾಲನೆ

August 25, 2018

ಮೈಸೂರು: ಯುಜಿಸಿ ಮಾನ್ಯತೆ ರದ್ದುಗೊಳಿಸಿದ್ದ ಕಾರಣ ಕಳೆದ 5 ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಶೈಕ್ಷಣಿಕ ಚಟುವಟಿಕೆಗಳು ಕಡೆಗೂ ಮತ್ತೆ ಆರಂಭವಾಗಿವೆ.

ಯುಜಿಸಿಯು 2018-19ನೇ ಶೈಕ್ಷಣಿಕ ಸಾಲಿನಿಂದ 2022-23ರವರೆಗೆ ಕರ್ನಾಟಕ ರಾಜ್ಯದೊಳಗೆ ತಾಂತ್ರಿಕೇತರ (Non- Technical) ಕೋರ್ಸುಗಳನ್ನು ನಡೆಸಲು ಮುಕ್ತ ವಿಶ್ವವಿದ್ಯಾನಿಲಯಕ್ಕೆ ಹಸಿರು ನಿಶಾನೆ ನೀಡಿರುವುದರಿಂದ ಎರಡ್ಮೂರು ದಿನಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಅಡಳಿತ ಕಚೇರಿ ಸಭಾಂಗಣ ದಲ್ಲಿ ಕೋರ್ಸುಗಳ ಆರಂಭ ಕುರಿತಂತೆ ಕುಲಪತಿ ಪ್ರೊ. ಡಿ.ಶಿವಲಿಂಗಯ್ಯ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

17 ಕೋರ್ಸುಗಳು: ಪ್ರಸಕ್ತ ಶೈಕ್ಷಣಿಕ ವರ್ಷ ದಿಂದ ಬಿಎ, ಬಿಕಾಂ, ಬಿ.ಲಿಟ್, ಐಎಸ್‍ಸಿ, ಎಂಎ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಪ್ರಾಚೀನ ಇತಿಹಾಸ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಪತ್ರಿಕೋದ್ಯಮ, ಎಂ.ಕಾಂ., ಎಂ.ಲಿಟ್, ಐಎಸ್‍ಸಿ ಹಾಗೂ ಎಂಎಸ್‍ಸಿ ಪರಿಸರ ವಿಜ್ಞಾನ ಕಾರ್ಯ ಕ್ರಮಗಳಿಗೆ ಪ್ರವೇಶ ನೀಡಲಾಗುವುದು.

ಪ್ರವೇಶಾತಿಗೆ ವೆಬ್‍ಸೈಟ್: ಮೇಲ್ಕಂಡ ಕೋರ್ಸುಗಳಿಗೆ ಪ್ರವೇಶ ಸಂಬಂಧ ಮುಕ್ತ ವಿಶ್ವವಿದ್ಯಾನಿಲಯವು ಅಧಿಕೃತ www.ksoumysore.karnataka.gov.in ಅನ್ನು ಆರಂಭಿಸಿದೆ. ಅದರಲ್ಲಿ ವಿವ ರಣಾ ಪುಸ್ತಕ, ಪ್ರವೇಶ ಅರ್ಜಿ ನಮೂನೆ ಹಾಗೂ ಶುಲ್ಕ ಪಾವತಿ ಚಲನ್‍ಗಳನ್ನು ಅಪ್‍ಲೋಡ್ ಮಾಡಲಾಗುವುದು. ಅಲ್ಲಿಂದ ಅವುಗಳನ್ನು ಡೌನ್‍ಲೋಡ್ ಮಾಡಿ ಕೊಂಡು ದೇಶದ ಯಾವುದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಶುಲ್ಕ ಪಾವತಿಸಿ ಭರ್ತಿ ಮಾಡಿದ ಅರ್ಜಿ ಯನ್ನು ಅಗತ್ಯ ಅಂಕಪಟ್ಟಿ ಪ್ರತಿ ಮತ್ತು ಇತರ ಪ್ರಮಾಣ ಪತ್ರಗಳೊಂದಿಗೆ ವಿಶ್ವ ವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಕ್ಕೆ ಸಲ್ಲಿಸಿ, ಸ್ವೀಕೃತಿ ಪಡೆಯಬಹುದಾಗಿದೆ.

ಪ್ರಾದೇಶಿಕ ಕೇಂದ್ರಗಳು: ಬೆಂಗಳೂರಿನ ಚಾಮರಾಜಪೇಟೆ, ಬಿಟಿಎಂ ಲೇಔಟ್ 2ನೇ ಹಂತ, ಮಲ್ಲೇಶ್ವರಂ, ಚಾಮರಾಜನಗರ, ದಾವಣಗೆರೆ, ಧಾರವಾಡ, ಗುಲ್ಬರ್ಗ, ಹಾಸನ, ಶಿವಮೊಗ್ಗ, ಮಂಗಳೂರು, ತುಮಕೂರು, ಮಂಡ್ಯ, ಕೋಲಾರ, ರಾಮನಗರ, ಚಿಕ್ಕ ಮಗಳೂರು, ಉಡುಪಿ ಹಾಗೂ ಕಾರವಾರ ಜಿಲ್ಲಾ ಕೇಂದ್ರಗಳಲ್ಲಿ ಮುಕ್ತ ವಿವಿ ಪ್ರಾದೇ ಶಿಕ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

ಉಳಿದ 15 ಕಾರ್ಯಕ್ರಮಗಳಿಗೂ ಮಾನ್ಯತೆ ಕರಾಮುವಿ ಕುಲಪತಿ ಪ್ರೊ. ಡಿ. ಶಿವಲಿಂಗಯ್ಯ ವಿಶ್ವಾಸ

ಮೈಸೂರು: ತಾಂತ್ರಿಕೇತರ 15 ಇನ್‍ಹೌಸ್ ಕಾರ್ಯಕ್ರಮ ಗಳಿಗೂ ಯುಜಿಸಿಯಿಂದ ಶೀಘ್ರ ಮಾನ್ಯತೆ ಪಡೆಯುತ್ತೇವೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಿ. ಶಿವಲಿಂಗಯ್ಯ, ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾನಿಲಯದ ಆಡಳಿತ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ನಿಯಂತ್ರಕ ಸಂಸ್ಥೆಗಳ ಪೂರ್ವಾನುಮತಿ ಮತ್ತು ಅಧ್ಯಾಪಕರ ಕೊರತೆ ಕಾರಣಗಳಿಂದಾಗಿ ಬಿಇಡಿ, ಎಂಬಿಎ, ಎಲ್‍ಎಲ್‍ಎಂ, ಎಂಎ ಸಂಸ್ಕೃತ, ಜೀವ ರಸಾಯನಶಾಸ್ತ್ರ, ಕ್ಲಿನಿಕಲ್ ನ್ಯೂಟ್ರಿಷನ್ ಅಂಡ್ ಡಯಟಿಟಿಕ್ಸ್, ಗಣಕ ವಿಜ್ಞಾನ, ಭೂಗೋಳಶಾಸ್ತ್ರ, ಮಾಹಿತಿ ವಿಜ್ಞಾನ, ಗಣಿತಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಭೌತಶಾಸ್ತ್ರ ಹಾಗೂ ಮನೋವಿಜ್ಞಾನ ಕೋರ್ಸುಗಳಿಗೆ ಅನುಮತಿ ನೀಡಿಲ್ಲ ಎಂದರು.

ಇವುಗಳಿಗೆ ಮಾನ್ಯತೆ ಪಡೆಯಲು ಅಗತ್ಯ ದಾಖಲಾತಿಗಳೊಂದಿಗೆ ಮನವಿ ಸಲ್ಲಿಸಲು ಅವಕಾಶವಿರುವುದರಿಂದ ತಾವು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು, ಈಗಾಗಲೇ ಕುಲಾಧಿಪತಿಗಳಾದ ಗವರ್ನರ್ ವಜುಭಾಯಿ ಆರ್. ವಾಲಾ ಅವರನ್ನು ಭೇಟಿ ಮಾಡಿ, ಈವರೆಗೆ ನಡೆದ ಬೆಳವಣಿಗೆಯನ್ನು ವಿವರಿಸಿದ್ದೇನೆ. ತಾವೂ ಸಹ ಉಳಿದ 15 ಕೋರ್ಸುಗಳಿಗೆ ಮಾನ್ಯತೆ ನೀಡುವಂತೆ ಯುಜಿಸಿ ಅಧ್ಯಕ್ಷರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

17 ಕೋರ್ಸುಗಳಿಗೆ ಯುಜಿಸಿ ಮಾನ್ಯತೆ ಪಡೆಯಲು ತಮಗೆ ಸಹಕರಿಸಿದ ರಾಜ್ಯಪಾಲರು, ಯುಜಿಸಿ ಅಧಿಕಾರಿಗಳು, ರಾಜ್ಯದ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು, ಸಂಸದರು, ಶಾಸಕರು, ಕೇಂದ್ರ ಸಚಿವರು, ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮತ್ತು ವ್ಯವಸ್ಥಾಪನಾ ಮಂಡಳಿ ಸದಸ್ಯರಿಗೆ ಕುಲಪತಿಗಳು ಇದೇ ಸಂದರ್ಭ ಕೃತಜ್ಞತೆ ಸಲ್ಲಿಸಿದರು.

ಇದೀಗ ವಿಶ್ವವಿದ್ಯಾನಿಲಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅವಕಾಶ ತೆರೆದು ಕೊಂಡಿದೆ. ಇದುವರೆಗೆ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ವರ್ಷಕ್ಕೆ ಸುಮಾರು 35 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ತಿಳಿಸಿದರು.

ಈ ಹಿಂದೆ ಆಗಿರುವ ತಪ್ಪುಗಳು ಎಚ್ಚರಿಕೆ ವಹಿಸಲಾಗುವುದು. ಪರೀಕ್ಷಾ ಸುಧಾರಣೆಗಳನ್ನು ತಂದು ವರ್ಗಾವಣೆ ಪತ್ರ, ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ವಲಸೆ ಪ್ರಮಾಣ ಪತ್ರ ಮುಂತಾದ ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ನಡೆಸಲು ಕ್ರಮ ವಹಿಸಲಾಗಿದೆ ಎಂದು ಪ್ರೊ. ಶಿವಲಿಂಗಯ್ಯ ನುಡಿದರು.

ಪ್ರವೇಶಕ್ಕೆ ವಿದ್ಯಾರ್ಹತೆ: ಪದವಿಗಳಿಗೆ ಪಿಯುಸಿ, ಸ್ನಾತಕೋತ್ತರ ಪದವಿಗಳಿಗೆ 3 ವರ್ಷಗಳ ಪದವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೂ ಮುಕ್ತ ವಿವಿಯಲ್ಲಿ ಪ್ರವೇಶಾತಿ ನೀಡಲಾಗುವುದು.
ವಿದ್ಯಾರ್ಥಿಗಳ ಕುಂದು-ಕೊರತೆ ವಿಭಾಗ: ವಿದ್ಯಾರ್ಥಿಗಳ ಕುಂದು-ಕೊರತೆಗಳಿಗೆ ಸ್ಪಂದಿ ಸಲು ಪ್ರತ್ಯೇಕ ವಿಭಾಗ ಸ್ಥಾಪಿಸಿ, ಓರ್ವ ನೋಡಲ್ ಅಧಿಕಾರಿಯನ್ನು ನಿಯೋಜಿಸ ಲಾಗಿದೆ. ಅಧಿಕೃತ ವೆಬ್‍ಸೈಟ್‍ನಲ್ಲಿ Login  ಲಿಂಕ್ ಕ್ಲಿಕ್ ಮಾಡಿದಾಗ ಕಾಣುವ ವೆಬ್‍ಸೈಟ್‍ನ student/complainant Login ಆಗುವ ಮೊದಲು ‘register’ ಲಿಂಕ್ ಅನ್ನು ಕ್ಲಿಕ್ ಮಾಡಿ ವಿದ್ಯಾರ್ಥಿಗಳು ತಮ್ಮ ಕುಂದು-ಕೊರತೆಗಳನ್ನು ಸಲ್ಲಿಸಬಹುದು. ಅದನ್ನು ಗಮನಿಸಿ ನೋಡಲ್ ಅಧಿಕಾರಿಯು ಕ್ರಮ ಕೈಗೊಂಡು ವಿದ್ಯಾರ್ಥಿಯ ಇ-ಮೇಲ್‍ಗೆ ಉತ್ತರಿಸಲಾಗುವುದು.

ಪ್ರವೇಶಾತಿ ಶುಲ್ಕ: ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಬಾರದೆಂಬ ಉದ್ದೇಶದಿಂದ 2014ನೇ ಸಾಲಿನಲ್ಲಿದ್ದ ಶುಲ್ಕ ವನ್ನೇ ಈಗಲೂ ಮುಂದುವರಿಸಲಾಗಿದೆ. ಹೊಸ ನಿಯಮದಂತೆ ಕೋರ್ಸುಗಳಿಗೆ ನೋಟ್ಸ್ ಸಿದ್ಧಪಡಿಸಲಾಗಿದ್ದು, ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಲಭ್ಯವಿದೆ. ಪತ್ರಿಕಾ ಗೋಷ್ಠಿಯಲ್ಲಿ ಪರೀಕ್ಷಾಂಗ ಕುಲಸಚಿವ ರಂಗಸ್ವಾಮಿ (ಅಕಾಡೆಮಿಕ್) ಪ್ರೊ. ಜಗದೀಶ ಹಾಗೂ ಡೀನ್ (ಸ್ಟಡಿ ಸೆಂಟರ್ಸ್) ಪ್ರೊ.ಡಿ.ಟಿ.ಬಸವರಾಜು ಉಪಸ್ಥಿತರಿದ್ದರು.

Translate »