ಕೆ.ಆರ್.ಆಸ್ಪತ್ರೆಯಲ್ಲಿ ಅಸ್ವಸ್ಥರು, ಸಂಬಂಧಿಕರ ರೋಧನ
ಮೈಸೂರು

ಕೆ.ಆರ್.ಆಸ್ಪತ್ರೆಯಲ್ಲಿ ಅಸ್ವಸ್ಥರು, ಸಂಬಂಧಿಕರ ರೋಧನ

December 16, 2018

ಮೈಸೂರು: ಸುಳವಾಡಿ ಘಟನೆಯಿಂದ ಅಸ್ವಸ್ಥ ರಾದವರಿಗೆ ಚಿಕಿತ್ಸೆ ನೀಡಲು ವೈದ್ಯರು, ಸಿಬ್ಬಂದಿ ನಿರತರಾಗಿರು ವುದರಿಂದ 2ನೇ ದಿನವಾದ ಇಂದೂ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಒಳ ಹಾಗೂ ಹೊರ ರೋಗಿಗಳಿಗೆ ತೊಂದರೆಯಾಯಿತು.

ಏಕ ಕಾಲದಲ್ಲಿ ಸುಮಾರು 100ಕ್ಕೂ ಹೆಚ್ಚು ಅಸ್ವಸ್ಥರು ಬಂದ ಕಾರಣ ಅವರಿಗೆ ತುರ್ತು ಚಿಕಿತ್ಸೆ ನೀಡಲು ವೈದ್ಯರು ಮುಂದಾಗಿರುವುದರಿಂದ ಆಸ್ಪತ್ರೆಯ ಸರ್ಜಿಕಲ್ ಬ್ಲಾಕ್ (ಕಲ್ಲು ಕಟ್ಟಡ), ಐಪಿಡಿ-ಓಪಿಡಿ ಬ್ಲಾಕ್ (ಜಯದೇವ ಹೃದ್ರೋಗವಿದ್ದ ಕಟ್ಟಡ), ಕಿವಿ-ಮೂಗು-ಗಂಟಲು ವಿಭಾಗಗಳಲ್ಲಿ ಒಳ ರೋಗಿಗಳಾಗಿರುವವರನ್ನು ನೋಡಿ ಕೊಳ್ಳಲು ನರ್ಸ್‍ಗಳಾಗಲೀ, ರೌಂಡ್ಸ್ ಮಾಡುವ ವೈದ್ಯರುಗಳಿಲ್ಲದೇ ರೋಗಿಗಳು ಇಂದು ಪರದಾಡುವಂತಾಗಿತ್ತು.

ಅದರ ಜೊತೆಗೆ ಗಣ್ಯರ ಭೇಟಿ, ಅವರಿಗೆ ಮಾಹಿತಿ ನೀಡುವುದು, ಸಮಾಲೋಚನೆ, ಮಾಧ್ಯಮದವರಿಗೆ ವಿವರ ನೀಡುವುದರಲ್ಲಿ ಆಸ್ಪತ್ರೆ ವೈದ್ಯರು ನಿರತರಾಗಬೇಕಾಯಿತು. ಮತ್ತೊಂದೆಡೆ ರೋಗಿಗಳ ಸಂಬಂಧಿಕರು ನೂರಾರು ಮಂದಿ ಜಮಾಯಿಸಿದ್ದರಿಂದ ಅವರ ನಿರ್ವಹಣೆಯಲ್ಲಿ ಕೆ.ಆರ್. ಆಸ್ಪತ್ರೆ ಸೆಕ್ಯೂರಿಟಿ ಗಾರ್ಡ್‍ಗಳು ನಿರತರಾಗಿದ್ದರಿಂದ ಹಳೇ ಒಳ ರೋಗಿಗಳ ಕಡೆ ಗಮನ ಹರಿಸಲು ಸಾಧ್ಯವಾಗಲಿಲ್ಲ.

ಆದರೆ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಕಿರಿಯ ವೈದ್ಯರು, ಪಿಜಿಗಳು, ಸ್ಟಾಫ್ ನರ್ಸ್‍ಗಳು, ಹೌಸ್ ಕೀಪಿಂಗ್ ಮತ್ತು ಭದ್ರತಾ ಸಿಬ್ಬಂದಿಗಳು ಸುಳವಾಡಿ ಸಂತ್ರಸ್ಥರ ಚಿಕಿತ್ಸೆಗೆ ತೋರಿದ ಸಮಯ ಪ್ರಜ್ಞೆ ಮೆಚ್ಚುವಂತಹದ್ದು. ಘಟನೆ ಹಿನ್ನೆಲೆಯಲ್ಲಿ ಇಂದೂ ಸಹ ಮೈಸೂರು ನಗರದಾದ್ಯಂತ ಆಂಬುಲೆನ್ಸ್‍ಗಳು ಸದ್ದು ಮಾಡಿಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ರೋಗಿಗಳನ್ನು ಕರೆತರುತ್ತಿದ್ದ ದೃಶ್ಯ ಕಂಡು ಬಂದಿತು. ಸರ್ಕಲ್‍ಗಳಲ್ಲಿ ಹಾಜರಿದ್ದ ಸಂಚಾರ ಪೊಲೀಸರು, ಆಂಬುಲೆನ್ಸ್‍ಗಳಿಗೆ ಅನುವು ಮಾಡಿಕೊಡುತ್ತಿದ್ದರು.

Translate »