ಗಾಬರಿಗೊಂಡ ವಿದ್ಯಾರ್ಥಿನಿಯರ ನೂಕು ನುಗ್ಗಲು: 48 ಮಂದಿಗೆ ಗಾಯ
ಮೈಸೂರು

ಗಾಬರಿಗೊಂಡ ವಿದ್ಯಾರ್ಥಿನಿಯರ ನೂಕು ನುಗ್ಗಲು: 48 ಮಂದಿಗೆ ಗಾಯ

December 16, 2018

ಮೈಸೂರು:  ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ಗಾಬರಿ ಗೊಂಡ ವಿದ್ಯಾರ್ಥಿನಿಯರು ಹೊರ ಓಡಿ ಬರುವಾಗ ನೂಕು ನುಗ್ಗಲು ಉಂಟಾಗಿ, ಮೆಟ್ಟಿಲ ಮೇಲಿಂದ ಬಿದ್ದು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಒಂಟಿಕೊಪ್ಪಲು ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ಸಾರ್ವಜನಿಕ ವಿದ್ಯಾರ್ಥಿನಿಲಯದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ಈ ವಿದ್ಯಾರ್ಥಿನಿಲಯದಲ್ಲಿ 270ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದು, ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 13 ಮಂದಿಯನ್ನು ಡಿಆರ್‍ಎಂ ಆಸ್ಪತ್ರೆ, 20 ಮಂದಿಯನ್ನು ಬೃಂದಾವನ ಆಸ್ಪತ್ರೆಗೆ ದಾಖಲಿಸಿದ್ದು, ಬಿಂದು ಎಂಬ ವಿದ್ಯಾರ್ಥಿನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿದ್ಯಾರ್ಥಿನಿಲಯದ ನೆಲಮಹಡಿ ಮತ್ತು 2ನೇ ಮಹಡಿಯಲ್ಲಿ ವಿದ್ಯುತ್ ಸಂಪರ್ಕವಿದ್ದು, ಮೊದಲ ಅಂತಸ್ತಿನಲ್ಲಿ
ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಈ ಬಗ್ಗೆ ಹಾಸ್ಟೆಲ್ ಮೇಲ್ವಿಚಾರಕರು ಚೆಸ್ಕಾಂಗೆ ದೂರು ನೀಡಿದ್ದರು. ಶನಿವಾರ ಸಂಜೆ ವೇಳೆಗೆ ಚೆಸ್ಕಾಂ ಸಿಬ್ಬಂದಿ ಹಾಸ್ಟೆಲ್‍ಗೆ ತೆರಳಿ ದುರಸ್ಥಿಮಾಡಿದ್ದರು. ಆದರೆ, ಸಂಜೆ 7ಗಂಟೆ ವೇಳೆಗೆ ಯುಪಿಎಸ್ ಸಂಪರ್ಕ ಕಲ್ಪಿಸುವ ಪ್ಲಗ್‍ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

ಇದರಿಂದ ಗಾಬರಿಗೊಂಡ ವಿದ್ಯಾರ್ಥಿನಿಯರು, ಒಮ್ಮೆಲೆ ಎಲ್ಲರೂ ಹಾಸ್ಟೆಲ್‍ನಿಂದ ಹೊರ ಓಡಿ ಬರುವಾಗ ನೂಕು ನುಗ್ಗಲು ಉಂಟಾಗಿ ಕೆಲವರು ಮೆಟ್ಟಿಲ ಮೇಲಿಂದ ಕೆಳಗೆ ಬಿದ್ದು ಗಾಯಗೊಂಡರೆ, ಮತ್ತೆ ಕೆಲವರು ಭಯಕ್ಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರಲ್ಲದೆ, ಕೆಲ ವಿದ್ಯಾರ್ಥಿನಿಯರನ್ನು ಹೊರ ಕರೆ ತಂದಿದ್ದಾರೆ.

ಕೂಡಲೇ 2 ವಾಹನದೊಂದಿಗೆ ಸರಸ್ವತಿಪುರಂ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ವಿವಿ ಪುರಂ ಪೊಲೀಸರು ಸ್ಥಳಕ್ಕಾಗಮಿಸಿ, ಸಾರ್ವಜನಿಕರ ನೆರವಿನೊಂದಿಗೆ ಪ್ರಜ್ಞೆತಪ್ಪಿದ ಮತ್ತು ತೀವ್ರಗಾಯಗೊಂಡಿದ್ದ ವಿದ್ಯಾರ್ಥಿನಿಯರನ್ನು ತಮ್ಮ ವಾಹನ, ಆಂಬುಲೆನ್ಸ್, ಪೊಲೀಸ್ ವಾಹನದಲ್ಲಿ ಹತ್ತಿರದ ಬೃಂದಾವನ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ ಎಂದು ಹಾಸ್ಟೆಲ್ ವಾರ್ಡನ್ ಕಾಮಾಕ್ಷಿ ತಿಳಿಸಿದರು.

ಬೇರೆ ಹಾಸ್ಟೆಲ್‍ಗೆ ಶಿಫ್ಟ್: ಈ ಘಟನೆಯಿಂದ ಭಯಗೊಂಡಿರುವ ವಿದ್ಯಾರ್ಥಿನಿಯರು ತಾವಿದ್ದ ಹಾಸ್ಟೆಲ್‍ಗೆ ಹೋಗಲು ಹಿಂಜರಿದ ಕಾರಣ, ಪಕ್ಕದಲ್ಲಿದ್ದ ವೃತ್ತಿಪರ ಶಿಕ್ಷಣ ಹಾಸ್ಟೆಲ್‍ನಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಸಮಯ ಪ್ರಜ್ಞೆ ಮೆರೆದ ಶಾಸಕ: ವಿಷಯ ತಿಳಿದಾಕ್ಷಣ ಹಾಸ್ಟೆಲ್ ಬಳಿ ದಾವಿಸಿದ ಶಾಸಕ ಎಲ್.ನಾಗೇಂದ್ರ, ಪರಿಶೀಲನೆ ನಡೆಸಿ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು. ಅಲ್ಲದೆ, ಈ ಸಂಬಂಧ ನಾಳೆ(ಡಿ.16) ಬೆಳಿಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಕಳೆದ ಎರಡು ವಾರಗಳ ಹಿಂದೆ ಸಿಲಿಂಡರ್‍ನಲ್ಲಿ ಬೆಂಕಿ ಹೊತ್ತುಕೊಂಡು ಆತಂಕ ಮೂಡಿಸಿತ್ತು. ಇಂದು ಯುಪಿಎಸ್‍ನಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ವಿದ್ಯಾರ್ಥಿನಿಯರು ಭಯಗೊಂಡಿದ್ದಾರೆ. ಕೂಡಲೇ ಸಮಸ್ಯೆ ಸರಿಪಡಿಸುತ್ತೇವೆ. ಗಾಯಗೊಂಡಿರುವ ವಿದ್ಯಾರ್ಥಿನಿಯರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಾಸ್ಟೆಲ್ ವಾರ್ಡನ್ ಕಾಮಾಕ್ಷಿ ತಿಳಿಸಿದ್ದಾರೆ.

Translate »