ನಮ್ಮ ಹಿಂದೂ ಸಂಸ್ಕøತಿಗೆ ನಮ್ಮವರಿಂದಲೇ ಹೆಚ್ಚು ಅಪಾಯ
ಮೈಸೂರು

ನಮ್ಮ ಹಿಂದೂ ಸಂಸ್ಕøತಿಗೆ ನಮ್ಮವರಿಂದಲೇ ಹೆಚ್ಚು ಅಪಾಯ

December 16, 2018

ಮೈಸೂರು: ನಮ್ಮವರಿಂದಲೇ ನಮ್ಮ ಧರ್ಮದ ಮೇಲೆ ಆಕ್ರಮಣ, ಅಪಚಾರ ನಡೆಯುತ್ತಿದೆ. ನಮ್ಮವರಿಂದಲೇ ನಮ್ಮ ಹಿಂದೂ ಸಂಸ್ಕೃತಿಗೆ ಹೆಚ್ಚು ಅಪಾಯವಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು.

ಮೈಸೂರಿನ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ಶನಿವಾರ ಎರಡು ದಿನಗಳ ಮೈಸೂರು ನಗರ ಮತ್ತು ಜಿಲ್ಲಾ ಬೃಹತ್ ಬ್ರಾಹ್ಮಣ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ನಮ್ಮ ಅಮೂಲ್ಯ ಸಂಸ್ಕೃತಿಯನ್ನು ಗಟ್ಟಿಗೊಳಿ ಸಲು ಮುಷ್ಟಿ ಹಿಡಿದು ಸಂಘಟನೆ ಮಾಡಬೇಕಿದೆ. ಎಲ್ಲಾ ಜಾತಿಗಳಿಂದ ಬ್ರಾಹ್ಮಣರು ಕಡಿಮೆ ಇದ್ದೇವೆಂದು ಚಿಂತಿಸಬೇಕಿಲ್ಲ. ಎಲ್ಲಾ ಬ್ರಾಹ್ಮಣರೂ ಒಗ್ಗಟ್ಟಾಗಿ ಏಕ ಮನಸ್ಸಿನಿಂದ ಹೋರಾಡಬೇಕು ಎಂದು ಕರೆ ನೀಡಿದರು.

ಹಿಂದೂ ಧರ್ಮ ಎಂಬ ಹಡಗಿನಲ್ಲಿ ರುವ ನಾವು ಹೊರಗಿನಿಂದಲೋ, ಒಳಗಿ ನಿಂದಲೋ ದೊಡ್ಡ ಬಿರುಗಾಳಿ ಬಂದರೂ ನಾವೆಲ್ಲರೂ ಒಟ್ಟಾಗಿ ಹಡಗನ್ನು ರಕ್ಷಿಸಬೇಕಿದೆ. ಅದಕ್ಕೀಗ ಕಾಲ ಕೂಡಿ ಬಂದಿದೆ. ಇಂತಹ ಸಮ್ಮೇಳನಗಳು ಇದಕ್ಕೆ ಪೂರಕವಾಗಲಿವೆ ಎಂದು ಅಭಿಪ್ರಾಯಪಟ್ಟರು. ದೇಶದ ಸಮಸ್ತ ಸಮಾಜವು ಚೆನ್ನಾಗಿರಬೇಕು. ಅದರ ಜೊತೆಗೆ ಬ್ರಾಹ್ಮಣ ಧರ್ಮವೂ ಉಳಿಯಬೇಕು. ಪ್ರತಿ ಯೊಬ್ಬ ಬ್ರಾಹ್ಮಣರೂ ಬ್ರಾಹ್ಮಣ್ಯವನ್ನು ಉಳಿಸಿ ಕೊಂಡು ಹೋಗಬೇಕು. ಗೀತಾ ಪಾರಾಯಣ, ಗಂಗಾ ಸ್ನಾನ, ಗಾಯಿತ್ರಿ ಜಪಗಳನ್ನು ಪಾಲಿಸಬೇಕು.

ಗಾಯಿತ್ರಿ ಮಂತ್ರ ಎಂಬುದು ವಿಶ್ವಗೀತೆ ಇದ್ದಂತೆ ಎಂದರು. ಶೇ.50ರಷ್ಟು ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಎಂಬ ಸುಪ್ರಿಂಕೋರ್ಟ್ ನಿರ್ಣಯವನ್ನು ಉಲ್ಲಂಘಿಸಿದ್ದಾರೆ. ಮೀಸಲಾತಿಗೂ ಅವಕಾಶ ಬೇಕು ನಿಜ, ಮೀಸಲಾತಿಗೆ ವಿರೋಧವಿಲ್ಲ. ಅದರ ಜೊತೆಗೆ ಶೇ.50ರಷ್ಟು ಪ್ರತಿಭೆಗಳಿಗೂ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಪೇಜಾವರ ಶ್ರೀಗಳು ಸಲಹೆ ನೀಡಿದರು.

ಗಾಯತ್ರಿ ಮಂತ್ರ ನಮ್ಮ ಉಸಿರಲ್ಲವೇ? ಬಳಿಕ ಮಾತನಾಡಿದ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಗಾಯತ್ರಿ ಮಂತ್ರ ಮರೆತಿದ್ದೇವೆ. ನಾವ್ಯಾಕೆ ಗಾಯತ್ರಿ ಪಠಿಸಬೇಕು ಎಂಬ ಮನೋಭಾವ ಬಂದು ಬಿಟ್ಟಿದೆ. ನಮ್ಮ ಉಸಿರು, ನಮ್ಮ ಜೀವವಾದ ಗಾಯತ್ರಿ ಮಂತ್ರವನ್ನು ಯಾರೋ ಏನೋ ಹೇಳಿದರೆಂದು ಬಿಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಗಾಯತ್ರಿ ಮಂತ್ರ ಅನುಸರಿಸಬೇಕು. 3 ಹೊತ್ತು ಸೂರ್ಯ ನಮಸ್ಕಾರ ಮಾಡಬೇಕು. ಬೆಳಿಗ್ಗೆ 9 ಗಂಟೆಗೆ ಎದ್ದು, ರಾತ್ರಿ 12 ಗಂಟೆಗೆ ಮಲಗುತ್ತಿದ್ದೇವೆ. ಯಾವಾಗ ಸೂರ್ಯ ನಮಸ್ಕಾರ ಮಾಡುತ್ತಿದ್ದೇವೆ. ಸಂಧ್ಯಾವಂದನೆಯನ್ನೂ ಮರೆತು ಬಿಡುತ್ತಿದ್ದೇವೆ. 9ಕ್ಕೆ ಕೆಲಸಕ್ಕೆ ಹೋಗುತ್ತೇವೆ. ರಾತ್ರಿ ಬಂದು ಟಿವಿ ನೋಡುತ್ತಾ ಕುಳಿತುಕೊಳ್ಳುತ್ತೇವೆ. ಇದು ಹೋಗಬೇಕು. ಸಮಯಕ್ಕೆ ಸರಿಯಾಗಿ ಗಾಯತ್ರಿ ಮಂತ್ರ, ಸಂಧ್ಯಾವಂದನೆಗಳು ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.

ಸಮ್ಮೇಳನಾಧ್ಯಕ್ಷ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರೂ ಆದ ಡಿ.ಟಿ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ 1008 ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ, ಮೈಸೂರಿನ ಪರಕಾಲ ಮಠದ ಶ್ರೀ ಅಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮೀಜಿ, ಅವಧೂತ ದತ್ತಪೀಠದ ಕಿರಿಯ ಶ್ರೀ ದತ್ತ ವಿಜಯಾನಂದ ಸ್ವಾಮೀಜಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ಎಸ್.ಎ.ರಾಮದಾಸ್, ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಎನ್.ವೆಂಕಟನಾರಾಯಣ, ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮಿಕಾಂತ್, ಉಪಾಧ್ಯಕ್ಷ ಅಸಗೋಡು ಜಯಸಿಂಹ, ಸಮಾವೇಶದ ಪ್ರಧಾನ ಕಾರ್ಯದರ್ಶಿ ಮಾ.ವಿ. ರಾಮಪ್ರಸಾದ್, ಎಸ್.ಆರ್.ಗೋಪಾಲರಾವ್, ಡಿ.ಎನ್.ಕೃಷ್ಣಮೂರ್ತಿ, ಎನ್.ಮಂಜು ನಾಥ್, ದೀಪಿಕಾ ಪಾಂಡುರಂಗಿ, ಜಿ.ಆರ್.ನಾಗರಾಜ, ಎಸ್.ವೇಣುಗೋಪಾಲ್, ಹೆಚ್.ಆರ್.ಹರೀಶ್ ಭಾgದ್ವಾಜ್, ವಿಕ್ರಂ ಅಯ್ಯಂಗಾರ್, ಅಜಯ್‍ಶಾಸ್ತ್ರಿ, ರಂಗನಾಥ್ ಇನ್ನಿತರರು ಉಪಸ್ಥಿತರಿದ್ದರು.

ಸಮಾವೇಶದ ಉದ್ಘಾಟನೆ ಬಳಿಕ ನಡೆದ ವಿದ್ವತ್ ಗೋಷ್ಠಿಗೆ ವಿದ್ವಾನ್ ಡಾ.ಟಿ.ವಿ.ಸತ್ಯನಾರಾಯಣ ಚಾಲನೆ ನೀಡಿದರು. ಹಿರಿಯ ಸಂಶೋಧಕ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವಿದ್ವಾಂಸ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ `ವಿಪ್ರರ ಯಶಸ್ಸು ಹಾಗೂ ಒಗ್ಗಟ್ಟಿನ ಮಂತ್ರ’, ಹಿರಿಯ ಸಂಶೋಧಕ ಡಾ.ಹೆಚ್.ವಿ.ನಾಗರಾಜರಾವ್ `ವಿಪ್ರರು ಮತ್ತು ವಿದ್ವತ್ತಿನ ಸಂರಕ್ಷಣೆ’, ಹಾಗೂ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ `ಬ್ರಾಹ್ಮಣ್ಯದಲ್ಲಿ ಆಧ್ಯಾತ್ಮಕ ಹೊಳಹುಗಳು’ ವಿಷಯ ಮಂಡಿಸಿದರು. ಡಾ.ಭಾನುಪ್ರಕಾಶ್ ಶರ್ಮ, ಪ್ರೊ.ಎಂ.ಬಿ. ಪುರಾಣಿಕ್, ಮ.ಸ.ನಂಜುಂಡಸ್ವಾಮಿ, ಡಾಜಿ.ವಿ.ಕುಮಾರ್ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಬೆಳಿಗ್ಗೆ ಮಹಾಗಣಪತಿ ಹೋಮ, ಗೋಪೂಜೆ, ಭಕ್ತಿ ಸಂಗೀತ, 1008 ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಅವರ ಅನುಗ್ರಹ ಸಂದೇಶದ ನೇರಪ್ರಸಾರ, ದುರ್ಗಾ ನೃತ್ಯಶಾಲಾ ಅಕಾಡೆಮಿಯಿಂದ ನೃತ್ಯ ವೈಭವ ಕಾರ್ಯಕ್ರಮಗಳು ನಡೆದವು.

Translate »