7 ಮಂದಿ ವಿರುದ್ಧ FIR
ಮೈಸೂರು

7 ಮಂದಿ ವಿರುದ್ಧ FIR

December 17, 2018

ಹನೂರು: ತಾಲೂಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ 13 ಮಂದಿ ಸಾವನ್ನಪ್ಪಿ, 91 ಮಂದಿ ಅಸ್ವಸ್ಥ ಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ವಿರುದ್ಧ ರಾಮಾಪುರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಈ ಪ್ರಕರಣದಲ್ಲಿ ಪ್ರಸಾದಕ್ಕೆ ವಿಷ ಹಾಕಿದ ಕಿರಾತಕರು ಇನ್ನೂ ಪತ್ತೆಯಾಗಿಲ್ಲವಾ ದರೂ, ದೇವಸ್ಥಾನದ ಟ್ರಸ್ಟಿಗಳು ಹಾಗೂ ಪ್ರಸಾದ ತಯಾರಿಸಿದ ಬಾಣಸಿಗರ ವಿರುದ್ಧ ಭಾರತೀಯ ದಂಡ ಸಂಹಿತೆ 304ರಡಿ (ಉದ್ದೇಶವಲ್ಲದ ಕೊಲೆ) ಎಫ್‍ಐಆರ್ ದಾಖಲಿಸಲಾಗಿದೆ.

ಸುಳವಾಡಿ ಮಾರಮ್ಮ ದೇವಸ್ಥಾನದ ಟ್ರಸ್ಟಿ ಚಿನ್ನತ್ತಿ, ವ್ಯವಸ್ಥಾಪಕ ಮಹ ದೇವಸ್ವಾಮಿ ಅಲಿಯಾಸ್ ಮಾದೇಶ, ಬಾಣ ಸಿಗರಾದ ಈರಣ್ಣ, ಲೋಕೇಶ್, ಪುಟ್ಟಸ್ವಾಮಿ ಮತ್ತು ಪೂಜಾರಿ ಮಹದೇವ ಎಂಬ ಹೆಸರುಗಳನ್ನು ಎಫ್‍ಐಆರ್‍ನಲ್ಲಿ ದಾಖಲಿಸಲಾಗಿದ್ದು, ಮತ್ತೊಬ್ಬರ ಹೆಸರನ್ನು ದಾಖಲಿಸಿಲ್ಲ.

ಕಳೆದ ಶುಕ್ರವಾರದಂದು ವಿಷ ಪ್ರಸಾದ ಸೇವಿಸಿ ಸಾವಿಗೀಡಾದ ಅನಿತಾಳ ತಂದೆಯೇ ಬಾಣಸಿಗ ಪುಟ್ಟಸ್ವಾಮಿಯಾಗಿದ್ದು, ಮಗಳನ್ನು ಕಳೆದುಕೊಂಡು, ತಾನೂ ಕೂಡ ಅಸ್ವಸ್ಥನಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುಟ್ಟಸ್ವಾಮಿ ವಿರುದ್ಧವೂ ಕೂಡ ಪ್ರಸಾದ ತಯಾರಿಸಿದ ಕಾರಣಕ್ಕಾಗಿ ಪ್ರಕರಣ ದಾಖಲಾಗಿದೆ.

ಸುಳವಾಡಿ ಮಾರಮ್ಮ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಗೋಪುರ ಶಂಕುಸ್ಥಾಪನೆ ಸಮಾರಂಭದಲ್ಲಿ ಟೊಮಟೊ ಬಾತ್ ಪ್ರಸಾದ್ ವಿನಿಯೋಗಿಸಲಾಗಿತ್ತು. ಇದನ್ನು ಸೇವಿಸಿದ 104 ಭಕ್ತರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಅವರಲ್ಲಿ ಈವರೆಗೆ 13 ಮಂದಿ ಸಾವನ್ನಪ್ಪಿದ್ದು, 91 ಮಂದಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಅವರೇ ಖುದ್ದು ತನಿಖಾ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಕೊಳ್ಳೇಗಾಲ ಡಿವೈಎಸ್‍ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ತನಿಖಾ ತಂಡ ನೇಮಿಸಲಾಗಿದೆ. ಘಟನೆ ನಡೆದ ದಿನದಂದೇ ದೇವಸ್ಥಾನದ ಟ್ರಸ್ಟಿ ಚಿನ್ನತ್ತಿ ಮತ್ತು ವ್ಯವಸ್ಥಾಪಕ ಮಾದೇಶ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ವಿಷ ಬೆರೆಸಲ್ಪಟ್ಟಿದ್ದ ಟೊಮಟೊ ಬಾತನ್ನು ವಿಧಿ-ವಿಜ್ಞಾನ ಪ್ರಯೋಗಾಲಯ ಹಾಗೂ ಸಿಎಫ್‍ಟಿಆರ್‍ಐಗೆ ಪರಿಶೋಧನೆಗಾಗಿ ಕಳುಹಿಸಲಾಗಿದೆ. ಘಟನೆ ನಡೆದು 3 ದಿನಗಳಾಗಿದ್ದರೂ, ಈವರೆವಿಗೂ ಪೊಲೀಸರಿಗೆ ಹಂತಕರು ಯಾರು ಎಂಬುದು ಪತ್ತೆಯಾಗಿಲ್ಲ.

ಈ ಸಂಬಂಧ `ಮೈಸೂರು ಮಿತ್ರ’ನ ಜೊತೆ ಮಾತನಾಡಿದ ಚಾಮರಾಜ ನಗರ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಅವರು, ವಿಚಾರಣೆಗಾಗಿ 7 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಟೊಮಟೊ ಬಾತ್‍ಗೆ ವಿಷ ಬೆರೆಸಿದವರು ಇನ್ನೂ ಪತ್ತೆಯಾಗಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದರು. ಹಲವಾರು ಸೆಕ್ಷನ್‍ಗಳಲ್ಲಿ ಪ್ರಕರಣ ದಾಖಲಿಸಬೇಕಾಗುತ್ತದೆ. ಈಗ ಐಪಿಸಿ 304, 34ರಡಿ 7 ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದರು.

ಸಾವಿನ ಸಂಖ್ಯೆ 13ಕ್ಕೆ ಏರಿಕೆ: ಇಂದು ಇಬ್ಬರ ಸಾವು

ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೇರಿದ್ದು, ಭಾನುವಾರ ಮೈಸೂ ರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಅಸುನೀಗಿದ್ದಾರೆ. ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿದರಹಳ್ಳಿ ಗ್ರಾಮದ ಸಾಲಮ್ಮ (30) ಇಂದು ಮುಂಜಾನೆ ಮೃತಪಟ್ಟರೆ, ಎಂ.ಜಿ.ದೊಡ್ಡಿ ನಿವಾಸಿ ಮಗೇಶ್ವರಿ (32) ಇಂದು ಬೆಳಿಗ್ಗೆ ಸಾವಿ ಗೀಡಾಗಿದ್ದಾರೆ. ಇದರಿಂದ ವಿಷ ಪ್ರಸಾದ ಸೇವನೆ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೇರಿದಂತಾಗಿದೆ. ವಿವಿಧ ಆಸ್ಪತ್ರೆಯಲ್ಲಿ ವೆಂಟಿಲೇಟರ್‍ನೊಂದಿಗೆ ಚಿಕಿತ್ಸೆ ಪಡೆಯು ತ್ತಿರುವ 29 ಅಸ್ವಸ್ಥರಲ್ಲಿ 9 ಮಂದಿ ಸ್ಥಿತಿ ಚಿಂತಾಜನಕವಾಗಿದೆ. ಕೆಲವರ ಆರೋಗ್ಯ ದಲ್ಲಿ ಇಂದು ಸುಧಾರಣೆ ಕಂಡು ಬಂದಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದಲ್ಲಿ ಶುಕ್ರವಾರ ನಡೆದ ಗೋಪುರ ನಿರ್ಮಾಣದ ಶಂಕುಸ್ಥಾಪನೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ನೂರಾರು ಭಕ್ತರು ದೇವಾಲಯದ ವತಿಯಿಂದ ನೀಡಲಾದ ಪ್ರಸಾದ ಸೇವಿಸಿ ಒಟ್ಟು 104 ಭಕ್ತರು ಅಸ್ವಸ್ಥಗೊಂಡಿದ್ದರು. ಅವರಲ್ಲಿ 13 ಮಂದಿ ಮೃತಪಟ್ಟಿದ್ದರೆ, 91 ಮಂದಿ ಮೈಸೂ ರಿನ ವಿವಿಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಕೆ.ಆರ್. ಆಸ್ಪತ್ರೆಯಲ್ಲಿ 28 ರೋಗಿ ಗಳಲ್ಲಿ 4 ಮಂದಿ ವೆಂಟಿಲೇಟರ್‍ನಲ್ಲಿಡಲಾಗಿದೆ. ಕಾವೇರಿ ಆಸ್ಪತ್ರೆಯಲ್ಲಿ 11 ರೋಗಿಗಳಿದ್ದು, ನಾಲ್ವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಡಿಆರ್‍ಎಂ ಆಸ್ಪತ್ರೆಯಲ್ಲಿ ನಾಲ್ವರು ರೋಗಿಗಳು, ಅಪೋಲೋ ಆಸ್ಪತ್ರೆಯಲ್ಲಿ 11 ರೋಗಿಗಳಲ್ಲಿ 6 ರೋಗಿಗಳಿಗೆ ವೆಂಟಿ ಲೇಟರ್‍ನಲ್ಲಿಡಲಾಗಿದೆ. ಜೆಎಸ್‍ಎಸ್ ಆಸ್ಪತ್ರೆಯಲ್ಲಿ 16 ಅಸ್ವಸ್ಥರನ್ನು ದಾಖಲಿಸಲಾಗಿದ್ದು, 8 ಮಂದಿಗೆ ವೆಂಟಿಲೇಟರ್‍ನಲ್ಲಿಟ್ಟು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಗೋಪಾಲಗೌಡ ಆಸ್ಪತ್ರೆಯಲ್ಲಿ 6ರಲ್ಲಿ ಇಬ್ಬರನ್ನು ವೆಂಟಿಲೇಟರ್‍ನಲ್ಲಿಡಲಾಗಿದೆ. ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ 5ರಲ್ಲಿ ಮೂವರನ್ನು ವೆಂಟಿಲೇಟರ್‍ನಲ್ಲಿ, ಸುಯೋಗ್ ಆಸ್ಪತ್ರೆಯಲ್ಲಿ 11ರಲ್ಲಿ ಇಬ್ಬರನ್ನು ವೆಂಟಿ ಲೇಟರ್‍ನಲ್ಲಿ, ಬೃಂದಾವನ ಆಸ್ಪತ್ರೆಯಲ್ಲಿ ಇಬ್ಬರು ಹಾಗೂ ಬಾನವಿ ಆಸ್ಪತ್ರೆಯಲ್ಲಿ ಒಬ್ಬರನ್ನು ದಾಖಲಿಸಲಾಗಿದೆ. ಮೈಸೂರಿನ 8 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ನೀಡುವುದಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಪೊಲೀಸರಿಂದ ಸಾಲೂರು ಮಠಾಧೀಶರ ಸುದೀರ್ಘ ವಿಚಾರಣೆ

ಮಲೆಮಹದೇಶ್ವರ ಬೆಟ್ಟ,: ಸುಳವಾಡಿ ಮಾರಮ್ಮನ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಭಕ್ತರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ಡಿವೈಎಸ್‍ಪಿ ಪುಟ್ಟಮಾದಯ್ಯ ನೇತೃತ್ವದ ಪೊಲೀಸರ ತಂಡ ಇಂದು ಇಲ್ಲಿನ ಸಾಲೂರು ಮಠದ ಹಿರಿಯ ಶ್ರೀಗಳಾದ ಇಮ್ಮಡಿ ವೇದಬ್ರಹ್ಮ ಗುರುಸ್ವಾಮಿಗಳು ಮತ್ತು ಕಿರಿಯ ಶ್ರೀಗಳಾದ ಇಮ್ಮಡಿ ಮಹದೇವಸ್ವಾಮಿ ಅವರನ್ನು ವಿಚಾರಣೆಗೊಳಪಡಿಸಿತು.

ಇಂದು ಮಠಕ್ಕೆ ಆಗಮಿಸಿದ ಡಿವೈಎಸ್‍ಪಿ ನೇತೃತ್ವದ ತಂಡ ಹಿರಿಯ ಮತ್ತು ಕಿರಿಯ ಸ್ವಾಮೀಜಿಗಳನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿತು. ವಿಶೇಷವಾಗಿ ಇಮ್ಮಡಿ ಮಹದೇವಸ್ವಾಮಿ ಅವರನ್ನು ಸುಮಾರು 4 ಗಂಟೆಗಳ ಕಾಲ ವಿಚಾರಣೆಗೊಳಪಡಿಸ ಲಾಯಿತು. ಸುಳವಾಡಿ ಮಾರಮ್ಮನ ದೇವಸ್ಥಾನದಲ್ಲಿ ಶಂಕುಸ್ಥಾಪನೆ ನಡೆದ ಶುಕ್ರವಾರ ದಂದು ಕಾರ್ಯಕ್ರಮಕ್ಕೆ ಹಿರಿಯ ಶ್ರೀಗಳಾದ

ಇಮ್ಮಡಿ ವೇದಬ್ರಹ್ಮ ಗುರುಸ್ವಾಮಿಗಳು ತೆರಳಿದ್ದರು. ಆದರೆ ಅಂದು ಅವರು ಪ್ರಸಾದ ಸೇವಿಸದೇ ಮಠಕ್ಕೆ ಹಿಂದಿರುಗಿದ್ದರು. ಈ ಸಂಬಂಧ ಗುರುಸ್ವಾಮಿಗಳು ವಿಚಾರಣಾ ತಂಡಕ್ಕೆ ನೀಡಿದ ಹೇಳಿಕೆಯಲ್ಲಿ ತಾವು ಮಠದಿಂದ ಹೊರಗೆ ಯಾವುದೇ ಕಾರ್ಯಕ್ರಮಕ್ಕೆ ತೆರಳಿದರೂ ಪ್ರಸಾದ ಸ್ವೀಕರಿಸುವು ದಿಲ್ಲ. ಅದರಂತೆ ಸುಳವಾಡಿ ಮಾರಮ್ಮ ದೇವಸ್ಥಾನ ದಲ್ಲೂ ಸಹ ಪ್ರಸಾದ ಸ್ವೀಕರಿಸಿರಲಿಲ್ಲ. ತಾವು ಮಠಕ್ಕೆ ಹಿಂದಿರುಗಿದ ನಂತರ ಅಲ್ಲಿ ಪ್ರಸಾದ ಸೇವಿಸಿದ ಭಕ್ತರಲ್ಲಿ ಕೆಲವರು ಸಾವನ್ನಪ್ಪಿ, ಮತ್ತೆ ಕೆಲವರು ಆಸ್ಪತ್ರೆ ಸೇರಿದ್ದಾರೆ ಎಂದು ತಿಳಿಯಿತು ಎಂದು ಹೇಳಿದರು ಎನ್ನಲಾಗಿದೆ. ಅದು ಮಾತ್ರವಲ್ಲದೇ ಹಲವಾರು ವಿಷಯ ಗಳ ಬಗ್ಗೆ ಗುರುಸ್ವಾಮಿಯವರನ್ನು ವಿಚಾರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಸುಳವಾಡಿ ಮಾರಮ್ಮನ ದೇವಸ್ಥಾನ ಟ್ರಸ್ಟ್‍ನ ಅಧ್ಯಕ್ಷರೂ ಆಗಿರುವ ಇಮ್ಮಡಿ ಮಹದೇವ ಸ್ವಾಮಿಗಳು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಹೋಗಲೇ ಇಲ್ಲ. ಈ ಕುರಿತು ಹಲವಾರು ಅನುಮಾನಗಳು ಸಾರ್ವಜನಿಕವಾಗಿ ವ್ಯಕ್ತವಾಗಿದ್ದವು. ಅಲ್ಲದೇ ಟ್ರಸ್ಟ್‍ನಲ್ಲಿ ಗುಂಪುಗಾರಿಕೆ ಇದ್ದು, ಮಹದೇವಸ್ವಾಮಿಯವರು ಒಂದು ಗುಂಪಿನ ಪರವಾಗಿ ಇದ್ದಾರೆ ಎಂಬ ಮಾತು ಗಳೂ ಕೂಡ ಕೇಳಿಬಂದಿದ್ದವು. ಇಮ್ಮಡಿ ಮಹದೇವ ಸ್ವಾಮಿಗಳು ಶಂಕುಸ್ಥಾಪನೆಗೆ ತೆರಳದೇ ಇದ್ದ ಬಗ್ಗೆ ಟ್ರಸ್ಟಿ ಚಿನ್ನತ್ತಿ ಅವರ ಪುತ್ರ ಲೋಕೇಶ್ ಅವರು ಮಾಧ್ಯಮಗಳ ಮೂಲಕ ಅನುಮಾನ ವ್ಯಕ್ತಪಡಿಸಿದ್ದರು. ಇವೆಲ್ಲಾ ವಿಚಾರಗಳ ಕುರಿತು ಡಿವೈಎಸ್‍ಪಿ ನೇತೃತ್ವದ ತಂಡ ಮಹದೇವಸ್ವಾಮಿ ಅವರನ್ನು ವಿಚಾರಣೆಗೊಳಪಡಿಸಿತು ಎಂದು ಮೂಲಗಳು ತಿಳಿಸಿವೆ.

ಪ್ರಕಾಶ್ ಸಾವು ಪ್ರಸಾದದಿಂದಲ್ಲ: ಪೊಲೀಸರ ಸ್ಪಷ್ಟನೆ

ಮೈಸೂರು: ಹನೂರು ಪಟ್ಟಣ ಪಂಚಾಯತ್ ಕಚೇರಿ ಮೆಟ್ಟಿಲ ಮೇಲೆ ಶನಿವಾರ ಮಧ್ಯಾಹ್ನ ಬಿದ್ದಿದ್ದ ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕ ಅಂಕನಹಳ್ಳಿ ಗ್ರಾಮದ ನಿವಾಸಿ ಪ್ರಕಾಶ್ (30) ಅವರ ಸಾವು ಸುಳವಾಡಿ ಮಾರಮ್ಮ ದೇವಾಲ ಯದ ವಿಷ ಪ್ರಸಾದ ಸೇವಿಸಿ ಸಂಭವಿಸಿದ್ದಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಪ್ರಕಾಶ ಅವರ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಪ್ರಕಾಶ್ ಅವರು ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದ ವಿಷ ಪ್ರಸಾದ ಸೇವಿಸಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಪ್ರಕಾಶ್ ಅವರ ಸಾವು ಸಂಭವಿಸಿರುವ ಸಮಯ, ಪ್ರಸಾದ ವಿನಿಯೋಗಿಸಿರುವ ಸಮಯ ಹಾಗೂ ಸಂತ್ರಸ್ತರಿಗೆ ವಾಂತಿ ಕಾಣಿಸಿಕೊಂಡ ಸಮಯ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಈ ಸಾವು ಪ್ರಸಾದದಿಂದ ಸಂಭವಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುಳವಾಡಿ ಮಾರಮ್ಮ ದೇವಾಲಯವನ್ನು ಮುಜರಾಯಿ ಇಲಾಖೆ ವಹಿಸಿಕೊಳ್ಳಲಿ

ಮೈಸೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳ ವಾಡಿ ಮಾರಮ್ಮ ದೇವಾಲಯಕ್ಕೆ ಆದಾಯ ಹೆಚ್ಚಾ ಗುತ್ತಿದ್ದಂತೆ ಟ್ರಸ್ಟಿ ಗಳು ಮತ್ತು ಅರ್ಚಕ ರಲ್ಲಿ ಎರಡು ಗುಂಪು ಸೃಷ್ಟಿಯಾಗಿದ್ದು, ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ದೇವಾಲಯವನ್ನು ಮುಜರಾಯಿ ಇಲಾಖೆ ವಶಪಡಿಸಿ ಕೊಳ್ಳು ವಂತೆ ಒತ್ತಾಯಿಸುವುದಾಗಿ ಹನೂರು ಶಾಸಕ ನರೇಂದ್ರ ತಿಳಿಸಿದ್ದಾರೆ.

ಕೆ.ಆರ್.ಆಸ್ಪತ್ರೆಯ ಆವರಣದಲ್ಲಿ ಭಾನು ವಾರ ಪತ್ರಕರ್ತರೊಂದಿಗೆ ಮಾತನಾ ಡಿದ ಅವರು, ಇತಿಹಾಸದಲ್ಲಿಯೇ ಮೊದಲ ಬಾರಿಗೆ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಿದ ಘಟನೆ ಜರುಗಿದೆ. 13 ಮಂದಿ ಸಾವನ್ನಪ್ಪಿರುವ ಘೋರ ದುರಂತ ಇದಾ ಗಿದ್ದು, ಇದಕ್ಕೆ ಕಾರಣ ಟ್ರಸ್ಟಿಗಳಲ್ಲಿರುವ ಎರಡು ಗುಂಪು, ಅರ್ಚಕರಲ್ಲಿರುವ ಎರಡು ಗುಂಪುಗಳಲ್ಲಿರುವ ವೈಷಮ್ಯವೇ ಕಾರಣ ವಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲೇಬೇಕುಎಂದು ಅವರು ಆಗ್ರಹಿಸಿದರು. ಎರಡು ಗುಂಪುಗಳ ನಡುವಿನ ವೈಷಮ್ಯವನ್ನು ಗಮನಿಸಿದರೆ, ಈ ಸಮಸ್ಯೆ ಬೇಗನೆ ಇತ್ಯರ್ಥವಾಗುವ ಲಕ್ಷಣ ಕಾಣುತ್ತಿಲ್ಲ. ಶುಕ್ರವಾರ ನಡೆದ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವುದಕ್ಕಾಗಿ ಈ ದೇವಾಲಯವನ್ನು ಮುಜರಾಯಿ ಇಲಾಖೆಗೆ ವಹಿಸಿಕೊಳ್ಳುವಂತೆ ಕ್ಷೇತ್ರದ ಶಾಸಕನಾಗಿ ಆಗ್ರಹಿಸುತ್ತೇನೆ. ಮುಜರಾಯಿ ಇಲಾಖೆ ತನ್ನ ವಶಕ್ಕೆ ಪಡೆಯದಿದ್ದರೆ, ಮತ್ತೆ ಪ್ರತಿಷ್ಠೆಗಾಗಿ ಘೋರ ಘಟನೆಗಳು ನಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು. ಘಟನೆಯ ನಂತರ ಕಿಚ್‍ಗುತ್ ಮಾರಮ್ಮ ದೇವಾಲಯವನ್ನು ಮುಚ್ಚಲಾಗಿದೆ. ಭಕ್ತರು ಪೂಜೆ ಮಾಡುವುದಕ್ಕೆ ಅಪೇಕ್ಷಿಸು ತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿರುವ ಎಲ್ಲಾ ಸಂತ್ರಸ್ತರು ಗುಣಮುಖರಾಗಿ ಬಿಡುಗಡೆಯಾಗಿ ಅವರ ಊರುಗಳಿಗೆ ಹೋದ ನಂತರ ಸ್ಥಳೀಯರೊಂದಿಗೆ ಗ್ರಾಮ ಸಭೆ ನಡೆಸಿ ಎರಡೂ ಗುಂಪುಗಳಲ್ಲಿರುವ ವೈಮನಸ್ಸನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಪುಟ್ಟರಂಗಶೆಟ್ಟಿ ಅವರ ನೇತೃತ್ವದಲ್ಲಿ ನಡೆಸಲಾಗುವುದು ಎಂದು ನರೇಂದ್ರ ತಿಳಿಸಿದರು.

Translate »