`ಉಳುವವನಿಗೇ ಭೂಮಿ’ ಕಾಯ್ದೆಯಲ್ಲಿ ಭೂಮಿ ಕಳೆದುಕೊಂಡು ಶಿಕ್ಷಣದಿಂದ ಪ್ರಗತಿ ಸಾಧಿಸಿದ ಬ್ರಾಹ್ಮಣರು: ಸಚಿವ ಜಿಟಿಡಿ
ಮೈಸೂರು

`ಉಳುವವನಿಗೇ ಭೂಮಿ’ ಕಾಯ್ದೆಯಲ್ಲಿ ಭೂಮಿ ಕಳೆದುಕೊಂಡು ಶಿಕ್ಷಣದಿಂದ ಪ್ರಗತಿ ಸಾಧಿಸಿದ ಬ್ರಾಹ್ಮಣರು: ಸಚಿವ ಜಿಟಿಡಿ

December 17, 2018

ಮೈಸೂರು: `ಉಳು ವವನೇ ಭೂಮಿ ಒಡೆಯ’ ಕಾಯ್ದೆಯಿಂದ ಅನೇಕ ಬ್ರಾಹ್ಮಣರು ಜಮೀನು ಕಳೆದುಕೊಂಡರು. ನಂತರ ಆ ಕುಟುಂಬ ಮಕ್ಕಳು ಶಿಕ್ಷಣದ ಮೂಲಕ ಪ್ರಗತಿ ಸಾಧಿಸಿ, ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬೃಹತ್ ಬ್ರಾಹ್ಮಣ ಸಮಾ ವೇಶ-2018ರ ಮುಕ್ತಾಯ ಸಮಾರಂಭದಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದರು.

ಅಂದಿನ ಸಿಎಂ ದೇವರಾಜ ಅರಸು ಅವರು ಬಡವರ ಏಳಿಗೆಯ ಹಿತದೃಷ್ಟಿಯಿಂದ `ಉಳುವವನೇ ಭೂಮಿ ಒಡೆಯ’ ಕಾಯ್ದೆ ಜಾರಿಗೆ ತಂದರು. ಬಳಿಕ ಬಹು ಪಾಲು ಮಂದಿ ಇದರ ಫಲಾನುಭವಿಗಳಾದರು. ಆ ನಂತರ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಜಮೀನು ಪಡೆದವರೆಲ್ಲರೂ ಭೂ ಒಡೆಯರಾದರು. ನಂತರ ಕಲಿಬಾರದ್ದನ್ನು ಕಲಿತು ಪುಕ್ಕಟ್ಟೆಯಾಗಿ ಸಿಕ್ಕ ಭೂಮಿಯನ್ನು ಕಳೆದುಕೊಂಡು ಕೆಲವರು ಬೀದಿ ಪಾಲಾದರು. ಈಗ ಶಿಕ್ಷಣವನ್ನೂ ಪಡೆಯದೆ ಹಾಗೆಯೇ ಇದ್ದಾರೆ. ಆದರೆ, ಈ ಕಾಯ್ದೆ ಬಳಿಕ ಭೂಮಿ ಕಳೆದು ಕೊಂಡ ಬ್ರಾಹ್ಮಣರು ಆರಂಭದಲ್ಲಿ ಸಂಕಷ್ಟ ಎದುರಿ ಸಿದರೂ ಶಿಕ್ಷಣ ಮೂಲಕ ಪ್ರಗತಿ ಸಾಧಿಸಿ, ದೇಶ-ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ ಎಂದರು.

ನನಗೆ ನಮ್ಮೂರಿನ ಬ್ರಾಹ್ಮಣರೊಬ್ಬರು 4.50 ಎಕರೆ ಭೂಮಿ ಮಾರಿದರು. ಈ ವೇಳೆ ಕೃಷಿ ಜಮೀನು ಕೊಡುತ್ತೇನೆ. ಆದರೆ, ಈ ಜಾಗದಲ್ಲಿ ಬೆಳೆ ಬೆಳೆದು ದೇಶಕ್ಕೆ ಅನ್ನ ನೀಡಬೇಕು ಎಂದು ಷರತ್ತು ವಿಧಿಸಿ ತುಂಬು ಹೃದಯದಿಂದ ಕೊಟ್ಟರು. ನಾನು ಅವರ ಮಾತನ್ನು ಉಳಿಸಿಕೊಂಡು ಪ್ರಗತಿ ಪರ ರೈತನಾದೆ. ಈ ಘಟನೆ ಯಿಂದ ನನಗೆ ತಿಳಿದಿದ್ದು, ಬ್ರಾಹ್ಮಣರು ಸ್ವಾರ್ಥಿಗಳಲ್ಲ. ಅವರು ಏನೇ ಕೊಟ್ಟರೂ ತುಂಬು ಹೃದಯದಿಂದ ಕೊಡುತ್ತಾರೆ. ಆದರೆ, ಅದನ್ನು ಕೆಲವರು ಬೇರೆ ರೀತಿ ಅರ್ಥೈಸಿಕೊಳ್ಳುತ್ತಿರುವುದು ಬೇಸರ ಸಂಗತಿ ಎಂದರು.

ಭೂ ಸುಧಾರಣಾ ಕಾಯ್ದೆ ಜಾರಿಗೆ ಬರುವ ಮುಂಚೆ ಬ್ರಾಹ್ಮಣರ ಕೈಯಲ್ಲಿ ಸುಮಾರು 10 ಎಕರೆ ಕೃಷಿ ಜಮೀನು ಇದ್ದರೆ ಆ ಜಮೀನನ್ನು ರೈತರಿಗೆ ವಾರ್ಷಿಕ ಗುತ್ತಿಗೆ ನೀಡಿ, ಬಂದ ಬೆಳೆಯಲ್ಲಿ ಇಬ್ಬರು ಹಂಚಿ ಕೊಂಡು ತೃಪ್ತಿಯಿಂದ ಜೀವನ ನಡೆಸುತ್ತಿದ್ದರು. ಈಗ ಆ ತೃಪ್ತಿ ಇದೆಯಾ? ಎಂದು ಪ್ರಶ್ನಿಸಿದ ಸಚಿವರು, ಭೂಮಿ ಕಳೆದುಕೊಂಡವರಿಗೆ ಸ್ವಲ್ಪದಿನ ಕಷ್ಟವಾಯಿತು. ಆ ನಂತರ ಮಕ್ಕಳಿಗೆ ಶಿಕ್ಷಣ ಕೊಡಿಸಿದರು. ನಂತರ ಆ ಪ್ರತಿಭೆಗಳು ದೇಶ-ವಿದೇಶದಲ್ಲಿ ಉದ್ಯೋಗ ಮಾಡಿ ಕೊಂಡು ನೆಲೆ ಕಂಡುಕೊಂಡರು. ಇದರಿಂದ ನಷ್ಟ ದೇಶಕ್ಕೆ ಹೊರತು, ಬ್ರಾಹ್ಮಣರಿಗಲ್ಲ. ಆದರೆ, ಅವರಿಂದ ಪ್ರಯೋ ಜನ ಪಡೆದವರು ಏನಾಗಿದ್ದಾರೆ ಎಂಬುದನ್ನು ಸಮಾಜ ಯೋಚಿಸುವ ಪರಿಸ್ಥಿತಿ ಈ ಸಮಯವಾಗಿದೆ ಎಂದರು.

ಶಿಕ್ಷಣದ ಘನತೆ ಪಾತಾಳದಲ್ಲಿದೆ: ರಾಜಕಾರಣಿಗಳ ಹಿಂದೆ ವಿವಿ ಪ್ರಾಧ್ಯಾಪಕರು, ಶಿಕ್ಷಕರು, ಉಪನ್ಯಾಸ ಕರು ರಾಜಕಾರಣ
ಮಾಡಿಕೊಂಡಿರುವುದರಿಂದ ಶಿಕ್ಷಣ ಇಲಾಖೆ, ರಾಜ್ಯ ವಿವಿಗಳ ಘನತೆ ರಾಷ್ಟ್ರ ಮಟ್ಟದಲ್ಲಿ ಪಾತಾಳ ಕ್ಕಿಳಿದಿದೆ ಎಂದರಲ್ಲದೆ, ಸಿಎಂ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಬಂದ ಮೇಲೆ ನನಗೆ ಉನ್ನತ ಶಿಕ್ಷಣ ಖಾತೆ ನೀಡಲಾಗಿತ್ತು. ಆದರೆ, ನಾನು ಹೆಚ್ಚು ಶಿಕ್ಷಣ ಹೊಂದಿಲ್ಲವೆಂಬ ಕಾರಣಕ್ಕೆ ಉನ್ನತ ಶಿಕ್ಷಣ ಬೇಡ ಎಂದು ಮೊದಮೊದಲು ನಿರಾಕರಿಸಿದೆ. ಆ ನಂತರ ಜೆಡಿಎಸ್ ರಾಷ್ಟ್ರಾಧ್ಯ ಕ್ಷರೂ ಆದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಏನು ಮಾಡಿದರೂ ಬೇರೆ ಖಾತೆ ಕೊಡಲಿಲ್ಲ. ಬದಲಾಗಿ ನನ್ನನ್ನು ಕರೆದು ಈ ಖಾತೆಯನ್ನು ನಿಭಾ ಯಿಸುತ್ತೀಯ, ಅನುಭವ ಮುಖ್ಯ ಎಂದು ಧೈರ್ಯ ತುಂಬಿದರು.

ಅವರ ಮಾರ್ಗದರ್ಶನದಲ್ಲಿ ಮೊದಲ ಅಧಿಕಾರಿಗಳ ಸಭೆ ಮಾಡಿ, ಈಗ ಈ ಖಾತೆಯ ಘನತೆಯನ್ನು ತಂದುಕೊಡಲು ಶ್ರಮಿಸುತ್ತಿದ್ದೇನೆ. ಇದಕ್ಕೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದವೂ ಮುಖ್ಯ. ಈ ಸಭೆ ಬಳಿಕ ನನಗೆ ತಿಳಿದ ಅಂಶ ವೆಂದರೆ, ವಿವಿಗಳು ಈ ದೇಶದ ಬೌದ್ಧಿಕ ಸಂಪತ್ತಾಗಬೇಕು. ಈ ವಿವಿಗಳಲ್ಲಿ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಈ ದೇಶದ ಪ್ರಗತಿಯ ಸಂಪನ್ಮೂಲ ವ್ಯಕ್ತಿಗಳಾಗಬೇಕು. ಆದರೆ, ಪರಿಸ್ಥಿತಿ ಬೇರೆಯೇ ಇದೆ. ಇಂದು ಗುರುಸ್ಥಾನದಲ್ಲಿರುವವರು ರಾಜಕಾರಣಿಗಳ ಹಿಂಬಾಲಕರಾಗಿ ಅಲೆದಾಡುತ್ತಿದ್ದಾರೆ. ಇದರಿಂದ ವಿವಿ ಮತ್ತು ಶಿಕ್ಷಣ ಇಲಾಖೆ ಘನತೆ ಪಾತಾಳಕ್ಕಿಳಿದಿರುವ ಅಂಶ ಅರಿವಿಗೆ ಬಂತು ಎಂದರು.

ಶಿಕ್ಷಣ ಇಲಾಖೆಯ ಈ ಹಿಂದಿನ ಇತಿಹಾಸ ನೋಡಿದರೆ, ಮಾಜಿ ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್, ಕುವೆಂಪು ಸೇರಿದಂತೆ ಇತರೆ ದಾರ್ಶನಿಕರು ಗುರುವಿನ ಸ್ಥಾನದಲ್ಲಿದ್ದುಕೊಂಡು ಅಂದು ಶಿಕ್ಷಣ ಕ್ಷೇತ್ರವನ್ನು ಮುನ್ನಡೆಸುತ್ತಿದ್ದರು. ಇದರ ಫಲವಾಗಿ ರಾಜಕಾರಣಿಗಳು ವಿವಿಯ ಸುತ್ತ ಸುತ್ತುವಂತಾಗಿತ್ತು. ಅವರಿಂದ ಕಲಿತ ವಿದ್ಯಾರ್ಥಿಗಳೂ ಸಹ ಈ ದೇಶದ ಸಂಪತ್ತಾಗಿದ್ದರು. ಅಂದಿನ ಸಂಶೋಧನೆ ದೇಶದ ಅಭಿವೃದ್ಧಿಗೆ ಪೂರಕವಾಗಿತ್ತು. ಆದರೆ, ಇಂದಿನ ಸಂಶೋಧನೆಯಿಂದ ದೇಶಕ್ಕೇನು ಪ್ರಯೋಜನ ಎಂಬಂತಾಗಿದೆ ಎಂದು ಜಿ.ಟಿ.ದೇವೇಗೌಡ ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು. ಅವಧೂತ ದತ್ತ ಪೀಠದ ಕಿರಿಯ ಶ್ರೀ ದತ್ತವಿಜಯಾನಂದ ಸ್ವಾಮೀಜಿ, ಬ್ರಾಹ್ಮಣ ಮಹಾಸಭಾ ಕೆ.ಎನ್.ವೆಂಕಟನಾರಾಯಣ, ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ವಿಪ್ರಮುಖಂಡರಾದ ಹೆಚ್.ವಿ.ರಾಜೀವ್, ಡಾ.ಕೆ.ಪಿ.ಪುತ್ತೂರಾಯ, ಕೃಷ್ಣದಾಸ್, ಭಾನುಪ್ರಕಾಶ್ ಶರ್ಮಾ, ಯುವ ಮುಖಂಡ ವಿಕ್ರಂ ಅಯ್ಯಂಗಾರ್ ಸೇರಿದಂತೆ ಇತರರಿದ್ದರು.

Translate »