ಪ್ರಸಾದಕ್ಕೆ ನಾನು ವಿಷ ಹಾಕಿಲ್ಲ… ದೇವಸ್ಥಾನದ ಟ್ರಸ್ಟ್‍ನಲ್ಲಿ ಒಡಕಿಲ್ಲ…
ಮೈಸೂರು

ಪ್ರಸಾದಕ್ಕೆ ನಾನು ವಿಷ ಹಾಕಿಲ್ಲ… ದೇವಸ್ಥಾನದ ಟ್ರಸ್ಟ್‍ನಲ್ಲಿ ಒಡಕಿಲ್ಲ…

December 17, 2018

ಮಲೆಮಹದೇಶ್ವರ ಬೆಟ್ಟ:ಸುಳ ವಾಡಿ ಮಾರಮ್ಮ ದೇವಸ್ಥಾನಕ್ಕೂ ಸಾಲೂರು ಮಠಕ್ಕೂ ದಶಕಗಳ ಅವಿನಾಭಾವ ಸಂಬಂಧ… ನಾನು ಮಾರಮ್ಮನ ಪ್ರಸಾದಕ್ಕೆ ವಿಷ ಹಾಕಿಲ್ಲ… ಟ್ರಸ್ಟ್‍ನಲ್ಲಿ ಒಡಕಿಲ್ಲ… ಇದು ಸುಳವಾಡಿ ಮಾರಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಸಾಲೂರು ಮಠದ ಕಿರಿಯ ಶ್ರೀಗಳಾದ ಇಮ್ಮಡಿ ಮಹದೇವಸ್ವಾಮಿ ಅವರ ಮಾತು.

ಸುಳವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಭಕ್ತರು ಸಾವನ್ನ ಪ್ಪಿದ ಪ್ರಕರಣದಲ್ಲಿ ತಮ್ಮ ಹೆಸರೂ ಕೂಡ ತಳಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜೊತೆ ಮಾತನಾಡಿದ ಇಮ್ಮಡಿ ಮಹ ದೇವಸ್ವಾಮಿಯವರು, ನಾನು ಪ್ರಸಾದಕ್ಕೆ ವಿಷ ಹಾಕಿಲ್ಲ. ಮಾರಮ್ಮನ ದೇವಸ್ಥಾನದ ಟ್ರಸ್ಟ್‍ನಲ್ಲಿ ಯಾವುದೇ ರೀತಿಯ ಒಡಕೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬ್ರಹ್ಮೇಶ್ವರ ದೇವಸ್ಥಾನದವರಿಗೂ ಮಾರಮ್ಮ ದೇವಸ್ಥಾನದವರಿಗೂ ನಡುವೆ ಸುಮಾರು 20 ವರ್ಷಗಳ ಹಿಂದೆ ಗಲಾಟೆ ನಡೆದಿತ್ತು. ಅದನ್ನು ಹೊರತುಪಡಿಸಿದರೆ, ದೇವಸ್ಥಾನದಲ್ಲಿ ಬೇರೆ ಯಾವುದೇ ಗಲಾಟೆಗಳೂ ನಡೆ ದಿಲ್ಲ ಎಂದರು. ಸಾಲೂರು ಮಠಕ್ಕೂ ಸುಳ ವಾಡಿ ಮಾರಮ್ಮ ದೇವಸ್ಥಾನಕ್ಕೂ 30 ವರ್ಷಗಳ ಅವಿನಾಭಾವ ಸಂಬಂಧವಿದೆ. ಆ ದೇವಸ್ಥಾನವನ್ನು ಕಟ್ಟಿದವರೇ ನನ್ನನ್ನು ಟ್ರಸ್ಟ್‍ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದರು.

ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾಗಿದ್ದರೂ ಕೂಡ ಶಂಕುಸ್ಥಾಪನೆ ಸಮಾರಂಭಕ್ಕೆ ಹೋಗದೇ ಇದ್ದುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಟ್ರಸ್ಟ್‍ನ ಎಲ್ಲರೂ ಸೇರಿಯೇ ದೇವಸ್ಥಾನ ಜೀರ್ಣೋದ್ಧಾರ ಮಾಡುವ ತೀರ್ಮಾನ ಕೈಗೊಂಡಿದ್ದೆವು. ಶಂಕುಸ್ಥಾಪನೆ ದಿನಾಂಕವನ್ನು ನಾನೇ ನಿಗದಿಪಡಿಸಿದ್ದೆ. ಕಾರ್ಯಕ್ರಮಕ್ಕೆ ಮಠದ ಹಿರಿಯ ಸ್ವಾಮೀಜಿ ಅವರನ್ನು ಕಳುಹಿಸಲಾಗಿತ್ತು. ಅಂದು ಶುಕ್ರವಾರ ವಾಗಿದ್ದು, ಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಕಾರಣ ನಾನು ತಡವಾಗಿ ಹೋಗಿದ್ದೆ. ಆದರೆ ನಾನು ದೇವಸ್ಥಾನ ತಲುಪುವುದರೊಳಗಾಗಿ ಅಲ್ಲಿ ಪ್ರಸಾದ ಸೇವಿಸಿ ಭಕ್ತರು ಸಾವನ್ನಪ್ಪಿರುವ ಬಗ್ಗೆ ನನಗೆ ಭಕ್ತಾದಿಗಳು ತಿಳಿಸಿದರು. ಅಲ್ಲಿ ಗಲಾಟೆ ಆಗುತ್ತಿರುವುದರಿಂದ ದೇವಸ್ಥಾನಕ್ಕೆ ಹೋಗುವುದು ಬೇಡ ಎಂದು ಅವರು ಹೇಳಿದ್ದರಿಂದ ನಾನು ಹೋಗಲಿಲ್ಲ. ಸಾವುಗಳಿಗೆ ಸಾಂತ್ವನ ಹೇಳುವುದು ನಮ್ಮ ಧರ್ಮ. ಆದರೆ ಈ ಪ್ರಕರಣ ಬೇರೆಯದೇ ರೀತಿಯಲ್ಲಿ ತಿರುವು ಪಡೆದುಕೊಂಡಿದ್ದರಿಂದ ನಾನು ಎಲ್ಲಿಗೂ ಹೋಗದೇ ಮಠದಲ್ಲೇ ಇದ್ದೇನೆ ಎಂದು ಅವರು ವಿವರಿಸಿದರು. ಈ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 50 ಸಾವಿರ ರೂ. ಟ್ರಸ್ಟ್‍ನಿಂದ ನೀಡಬೇಕು ಎಂಬುದರ ಬಗ್ಗೆ ಚಿಂತನೆ ನಡೆದಿದೆ ಎಂದು ಇಮ್ಮಡಿ ಮಹದೇವಸ್ವಾಮಿಗಳು ತಿಳಿಸಿದರು.

Translate »