ಶಾರ್ಟ್ ಸಕ್ರ್ಯೂಟ್ ಪ್ರಕರಣ: ಹಾಸ್ಟೆಲ್ ತೊರೆದ ವಿದ್ಯಾರ್ಥಿನಿಯರು
ಮೈಸೂರು

ಶಾರ್ಟ್ ಸಕ್ರ್ಯೂಟ್ ಪ್ರಕರಣ: ಹಾಸ್ಟೆಲ್ ತೊರೆದ ವಿದ್ಯಾರ್ಥಿನಿಯರು

December 17, 2018

ಮೈಸೂರು: ಮೈಸೂರಿನ ಒಂಟಿಕೊಪ್ಪಲಿನ ಮೆಟ್ರಿಕ್ ನಂತರದ ಬಾಲಕಿಯರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ರಾತ್ರಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೊರಬರುವ ವೇಳೆಯಲ್ಲಿ ನೂಕು ನುಗ್ಗಲಿನಿಂದ ಗಾಬರಿಗೊಂಡಿದ್ದ ವಿದ್ಯಾರ್ಥಿನಿಯರೆಲ್ಲಾ ಸದ್ಯ ಹಾಸ್ಟೆಲ್ ತೊರೆದಿದ್ದು, ಇದೀಗ ಹಾಸ್ಟೆಲ್ ಖಾಲಿ ಖಾಲಿಯಾಗಿದೆ.

ಶನಿವಾರ ರಾತ್ರಿ ಹಾಸ್ಟೆಲ್‍ನ ಮೆಟ್ಟಿಲಿನ ಬಳಿ ಇದ್ದ ಯುಪಿಎಸ್‍ನಲ್ಲಿ ಶಾರ್ಟ್ ಸಕ್ರ್ಯೂಟ್ ಉಂಟಾಗಿದೆ. ಈ ವೇಳೆ ಸ್ವಲ್ಪ ಬೆಂಕಿ ಕಾಣಿಸಿಕೊಂಡಿತಲ್ಲದೆ, ದಟ್ಟ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಹಾಸ್ಟೆಲ್‍ನ ಅಡುಗೆ ಸಿಬ್ಬಂದಿ ಚೀರಾಡಲು ಶುರು ಮಾಡಿದ್ದು, ಇದನ್ನು ಕೇಳಿಸಿಕೊಂಡ ವಿದ್ಯಾರ್ಥಿನಿಯರು ಕಟ್ಟಡಕ್ಕೆ ಬೆಂಕಿ ಬಿದ್ದಿದೆ ಎಂದು ಭಾವಿಸಿ ಒಮ್ಮೆಲೇ ಹೊರಬರಲು ಮುಂದಾದರು. ಇದರ ಪರಿಣಾಮ ನೂಕು ನುಗ್ಗಲು ಉಂಟಾಗಿದ್ದು, ವಿದ್ಯಾರ್ಥಿನಿಯರು ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ಈ ಸಂದರ್ಭ ದಲ್ಲಿ ಅನೇಕ ಮಂದಿ ಗಾಯಗೊಂಡಿದ್ದರು.

ಗಾಬರಿ ಹಾಗೂ ಗಾಯಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 40ಕ್ಕೂ ಹೆಚ್ಚು ಮಂದಿ ಇಂದು ಮಧ್ಯಾಹ್ನದ ವೇಳೆಗೆ ಎಲ್ಲರೂ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮತ್ತೆ ಹಾಸ್ಟೆಲ್‍ಗೆ ತೆರಳುವ ಮನಸ್ಸು ಮಾಡದೇ ತಮ್ಮ ನಿವಾಸಗಳಿಗೆ ತೆರಳಿದರು. ಉಳಿದ ವಿದ್ಯಾರ್ಥಿನಿಯರ ಪೈಕಿ 140 ಮಂದಿ ಮಧ್ಯಾಹ್ನದ ವೇಳೆಗೆ ಹಾಸ್ಟೆಲ್ ತೊರೆದಿದ್ದರೆ, ಸಂಜೆ ವೇಳೆ ಎಲ್ಲರೂ ಹಾಸ್ಟೆಲ್ ಖಾಲಿ ಮಾಡಿ ತಮ್ಮ ಮನೆ ಸೇರಿಕೊಂಡಿದ್ದಾರೆ.

ಜಿಟಿಡಿ ಭೇಟಿ: ಭಾನುವಾರ ಬೆಳಿಗ್ಗೆ ಬೃಂದಾವನ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಗಳನ್ನು ಭೇಟಿಯಾದ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಆತಂಕಗೊಂಡ ವಿದ್ಯಾರ್ಥಿ ನಿಯರ ಯೋಗ-ಕ್ಷೇಮ ವಿಚಾರಿಸಿದರು. ಇದೇ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಈ ಅವಘಡದಿಂದ ಗಾಯ ಗೊಂಡ ವಿದ್ಯಾರ್ಥಿನಿಯರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಜೊತೆಗೆ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆ ಹೊಂದಿರುವ ಹಾಸ್ಟೆಲ್ ಗಳಲ್ಲಿ ಒತ್ತಡ ಕಡಿಮೆಗೊಳಿಸುವ ನಿಟ್ಟಿನಲ್ಲಿ ಮೈಸೂರಿಗೆ 10 ಮೆಟ್ರಿಕ್ ನಂತರದ ಹಾಸ್ಟೆಲ್ ಗಳು ಮಂಜೂರು ಮಾಡಲು ಸಹ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ತಿಳಿಸಿದರು.

ಎಲ್.ನಾಗೇಂದ್ರ ಭೇಟಿ: ಅವಘಡದ ವಿಷಯ ತಿಳಿದ ತಕ್ಷಣ ಶನಿವಾರ ರಾತ್ರಿಯೇ ಹಾಸ್ಟೆಲ್‍ಗೆ ತೆರಳಿ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದ್ದ ಶಾಸಕ ಎಲ್.ನಾಗೇಂದ್ರ, ಇಂದು ಬೆಳಿಗ್ಗೆಯೂ ಸಹ ಹಾಸ್ಟೆಲ್‍ಗೆ ಭೇಟಿ ನೀಡಿ ಆತಂಕದಲ್ಲಿದ್ದ ವಿದ್ಯಾರ್ಥಿ ನಿಯ ರಿಗೆ ಆತ್ಮಸ್ಥೈರ್ಯ ತುಂಬಿದರು.

ಇದೇ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕರು, ವಿದ್ಯಾರ್ಥಿನಿಯರು ಇನ್ನೂ ಭಯಭೀತಿಯಿಂದ ಹೊರಬಂದಿಲ್ಲ. ಈಗಾಗಲೇ 140 ವಿದ್ಯಾರ್ಥಿನಿಯರು ಹಾಸ್ಟೆಲ್ ತೊರೆದಿದ್ದು, ಅವರ ಪೋಷಕರು ಆತಂಕದಿಂದ ಧಾವಿಸಿ ತಮ್ಮ ಮನೆಗಳಿಗೆ ಕರೆದೊಯ್ಯುತ್ತಿದ್ದಾರೆ. ಜೊತೆಗೆ ಇಲ್ಲಿನ ಸೌಲಭ್ಯಗಳ ಕೊರತೆ ಹಾಗೂ ಸುರಕ್ಷತೆ ಸಂಬಂಧ ಸಾಕಷ್ಟು ವಿದ್ಯಾರ್ಥಿನಿಯರು ದೂರು ಹೇಳಿಕೊಂಡಿದ್ದಾರೆ.

ಹಾಸ್ಟೆಲ್ ಸಾಮಥ್ರ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ತುಂಬಿರುವ ಬಗ್ಗೆಯೂ ವಿದ್ಯಾರ್ಥಿನಿಯರು ಆರೋ ಪಿಸಿದ್ದಾರೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಸೂಕ್ತ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಅದಕ್ಕೂ ಮುನ್ನವೇ ಸಾಧ್ಯವಾಗಿರುವ ಕ್ರಮ ಕೈಗೊಳ್ಳುವ ಉದ್ದೇಶವಿದೆ ಎಂದು ತಿಳಿಸಿದರು. ಇದೇವೇಳೆ ಸುಳವಾಡಿ ವಿಷ ಪ್ರಸಾದ ಸೇವನೆ ಪ್ರಕರಣದಲ್ಲಿ ಅಸ್ವಸ್ಥರಾಗಿ ಬೃಂದಾವನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಮರಾಜನಗರ ಜಿಲ್ಲೆಯ ನಲ್‍ರೋಡ್ ಗ್ರಾಮದ ಮುನಿಯಾ ನಾಯಕ್, ವಡ್ಡರದೊಡ್ಡಿ ಗ್ರಾಮದ ಚಿಕ್ಕ ತಾಯಮ್ಮ ಅವರಿಗೂ ಸಚಿವ ಜಿ.ಟಿ. ದೇವೇಗೌಡ ಇದೇ ವೇಳೆ ಸಾಂತ್ವನ ಹೇಳಿದರು.

ಜಿ.ಟಿ.ದೇವೇಗೌಡರು ಭೇಟಿ ನೀಡಿದ್ದ ವೇಳೆ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಪಾಲಿಕೆ ಸದಸ್ಯರಾದ ರಮೇಶ್, ಭಾಗ್ಯ, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಜಿಪಂ ಸಿಇಓ ಕೆ.ಜ್ಯೋತಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಬಿಂಧ್ಯಾ, ಜೆಡಿಎಸ್ ಮುಖಂಡರಾದ ಮಂಜು, ರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »