ಜ.29ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ
ಮೈಸೂರು

ಜ.29ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ

January 17, 2019

ಚಾಮರಾಜನಗರ: ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ನಡೆದ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಜ.29ರ ವರೆಗೆ ವಿಸ್ತರಿಸಲಾಗಿದೆ. ನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ್ ಮತ್ತು ದೊಡ್ಡಯ್ಯ ಅವರನ್ನು ನ್ಯಾಯಾಧೀಶ ಜಿ.ಬಸವರಾಜು ಅವರ ಮುಂದೆ ಹಾಜರುಪಡಿಸಲಾಯಿತು.

ಬಂಧಿತ ನಾಲ್ವರು ಆರೋಪಿಗಳನ್ನು ಮೈಸೂರಿನ ಕಾರಾಗೃಹದಲ್ಲಿ ಇರಿಸಲಾಗಿದ್ದು, ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ (ಜ.16) ಮುಕ್ತಾಯವಾಗಿತ್ತು. ಜೊತೆಗೆ, ಇದು ಸೂಕ್ಷ್ಮ ಪ್ರಕರಣವಾಗಿರುವ ಕಾರಣ ಭದ್ರತೆಯ ದೃಷ್ಟಿ ಯಿಂದ ಪೊಲೀಸರು ಆರೋಪಿಗಳನ್ನು ಖುದ್ದಾಗಿ ನ್ಯಾಯಾಲಯಕ್ಕೆ ಕರೆದುಕೊಂಡು ಬಾರದೆ ವಿಡಿಯೋ ಕಾನ್ಪರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನ ವನ್ನು ಜ.29ರವರೆಗೆ ವಿಸ್ತರಿಸಿ ಆದೇಶಿಸಿದರು. ಇದರಿಂದ ಆರೋಪಿಗಳು ಜೈಲಿನಲ್ಲಿಯೇ ಉಳಿಯುವಂತಾಯಿತು.

ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿ ಗಳನ್ನು ನ್ಯಾಯಾಧೀಶರಾದ ಜಿ.ಬಸವ ರಾಜು ಅವರು ಪ್ರಶ್ನಿಸಿ, ನಿಮ್ಮ ಪರ ವಾದ ಮಂಡಿಸಲು ನೀವು ವಕೀಲರನ್ನು ನೇಮಕ ಗೊಳಿಸಿದ್ದೀರಾ? ಇಲ್ಲವೇ ನ್ಯಾಯಾಲಯವೇ ವಕೀಲರನ್ನು ನೇಮಕ ಮಾಡಬೇಕಾ? ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಒಂದನೇ ಆರೋಪಿ ಇಮ್ಮಡಿ ಮಹದೇವ ಸ್ವಾಮಿ, ವಕೀಲ ರೊಬ್ಬರನ್ನು ನೇಮಿಸಿದ್ದೇನೆ ಎಂದರು. ಈ ವೇಳೆ ನ್ಯಾಯಾಧೀಶರು ಆ ವಕೀಲರ ಹೆಸರು ಏನು? ಯಾವ ಊರಿನವರು? ಎಂದು ಪ್ರಶ್ನಿಸಿದರು. ಇದಕ್ಕೆ ಮಹದೇವಸ್ವಾಮಿ, ಅವರ ಹೆಸರು ಸಿದ್ಧಾರ್ಥ, ಮಡಿಕೇರಿಯವರು ಎಂದರು. ಕೂಡಲೇ ನ್ಯಾಯಾಧೀಶರು ವಕೀಲ ಸಿದ್ಧಾರ್ಥ ಹಾಜರಾಗುವಂತೆ ಹೇಳಿದರು. ಆದರೆ, ಅವರು ಹಾಜರಾಗಲಿಲ್ಲ.

ನ್ಯಾಯಾಧೀಶರು ಉಳಿದ ಮೂವರು ಆರೋಪಿಗಳಾದ ಅಂಬಿಕಾ, ಮಾದೇಶ್ ಮತ್ತು ದೊಡ್ಡಯ್ಯ ಅವರನ್ನು ನೀವೂ ವಕೀಲರನ್ನು ನೇಮಕ ಮಾಡಿಕೊಳ್ಳುತ್ತೀರಾ? ಎಂದು ಪ್ರಶ್ನಿಸಿದರು. ಈ ವೇಳೆ ಮೂವರು ಆರೋಪಿಗಳು ವಕೀಲರನ್ನು ನೇಮಕ ಮಾಡಿಕೊಳ್ಳುತ್ತೇವೆ. ಇದಕ್ಕಾಗಿ 10ದಿನಗಳ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಜ.29ಕ್ಕೆ ಮುಂದೂಡಿದರು. 2018, ಡಿ.14ರಂದು ಕಿಚ್‍ಗುತ್ ಮಾರಮ್ಮ ದೇಗುಲದಲ್ಲಿ ವಿಷ ಮಿಶ್ರಿತ ಪ್ರಸಾದ ಸೇವಿಸಿ 17 ಮಂದಿ ಸಾವನ್ನಪ್ಪಿದ್ದರು. ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇನ್ನೂ ಕೆಲವರು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Translate »