ಬಿದರಹಳ್ಳಿ ಗ್ರಾಮದಲ್ಲಿ ಮಡುಗಟ್ಟಿದ ದುಃಖ!
ಚಾಮರಾಜನಗರ

ಬಿದರಹಳ್ಳಿ ಗ್ರಾಮದಲ್ಲಿ ಮಡುಗಟ್ಟಿದ ದುಃಖ!

December 17, 2018

ಹನೂರು: ಒಂದೆಡೆ ನಿತ್ಯ ಬೆಳಿಗ್ಗೆ ಪ್ರೀತಿಯಿಂದ ಟಾಟಾ ಮಾಡುತ್ತ ಸ್ಕೂಲಿಗೆ ಹೋಗಿ ಬರುತ್ತಿದ್ದ ಮಕ್ಕಳು, ಹೆತ್ತವರ ಎದುರು ಶವವಾಗಿ ಮಲಗಿದ್ದರು. ಮತ್ತೊಂದೆಡೆ ಮಕ್ಕಳ ಭವ್ಯ ಭವಿಷ್ಯ ಕಣ್ತುಂಬಿಕೊಳ್ಳಬೇಕಿದ್ದ ಹೆತ್ತವರು ಮಾತನಾಡದೆ ಚಿರನಿದ್ರೆಗೆ ಜಾರಿದ್ದರು.ಎಲ್ಲಿ ನೋಡಿದರೂ ನೀರವ ಮೌನ, ತಮ್ಮ ವರನ್ನು ನೆನೆಸಿಕೊಂಡ ಕುಟುಂಬದವರ ಮುಖದಲ್ಲಿ ಮಡುಗಟ್ಟಿದ್ದ ದುಃಖ.

ಇದು ತಾಲೂಕಿನ ಸುಳವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ಶುಕ್ರವಾರ ವಿಷ ಮಿಶ್ರಣ ಪ್ರಸಾದ ಸೇವಿಸಿ ಮೃತಪಟ್ಟವರ ಗ್ರಾಮದಲ್ಲಿ ಕಂಡುಬಂದ ದೃಶ್ಯ. ಪಾಪಿಗಳ ಕೃತ್ಯದಿಂದ ದೇವರ ಪ್ರಸಾದ ಸೇವಿಸಿ ಮಕ್ಕಳು, ಮಹಿಳೆಯರು ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯ ದಂತಹ ದೊಡ್ಡ ದುರಂತ ನಡೆದು ಹೋಗಿದ್ದು, ರಾಜ್ಯಾದ್ಯಂತ ಜನರು ಮರುಕಪಟ್ಟಿದ್ದಾರೆ.

‘ನಿನ್ನ ಭಕ್ತರ ಸಂಕಷ್ಟ, ಗೋಳು ನಿನಗೆ ತಿಳಿಯುತ್ತಿಲ್ಲವಮ್ಮ… ಅಮ್ಮಾ ಕಣ್ಣು ಬಿಟ್ಟು ನೋಡು, ನಿನ್ನ ಭಕ್ತರನ್ನು ಕಾಪಾಡಮ್ಮ… ನಿನ್ನ ಪ್ರಸಾದಕ್ಕೆ ವಿಷ ಹಾಕಿದ್ದ ಪಾಪಿ ಗಳನ್ನು ಶಿಕ್ಷಿಸಮ್ಮ… ಎಂದು ಗ್ರಾಮಸ್ಥರು ಕಿಚ್‍ಗುತ್ ಮಾರಮ್ಮನನ್ನು ಕಣ್ಣೀರಿಡುತ್ತಾ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

ಒಂದೇ ಗ್ರಾಮದ ಐವರ ಸಾವು: ಪ್ರಸಾದ ಸೇವನೆಯಿಂದ ಬಿದರಹಳ್ಳಿ ಒಂದೇ ಗ್ರಾಮದ ಐವರು ಸಾವನ್ನಪ್ಪಿದ್ದು, ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ. ಗ್ರಾಮದ ಪ್ರೀತನ್(7), ಗೋಪಿಯಮ್ಮ(48), ಶಾಂತ ರಾಜ್(30), ಶಕ್ತಿ ವೇಲ್(45) ಶುಕ್ರವಾರ ರಾತ್ರಿಯೇ ಮೃತಪಟ್ಟಿದ್ದು, ಶನಿವಾರ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಯಿತು. ಭಾನುವಾರ ಬೆಳಿಗ್ಗೆ ಅದೇ ಗ್ರಾಮದ ಸಾಲಮ್ಮ(35) ಸಾವನ್ನಪ್ಪಿದ್ದಾರೆ.

ಬಿದರಹಳ್ಳಿ ಸೇರಿದಂತೆ ದೊಡ್ಡಾಣೆ, ತೋಮಿಯರ್ ಪಾಳ್ಯ, ತುಳಸಿಕೆರೆ, ಸುಳ ವಾಡಿ, ಕೋಟೆಪೋದೆ, ಎಂ.ಜಿ.ದೊಡ್ಡಿ, ವಡ್ಡರದೊಡ್ಡಿ ಗ್ರಾಮದಲ್ಲಿ ಸ್ಮಶಾನಮೌನ ಆವರಿ ಸಿದೆ. ಘಟನೆಯಿಂದ ಈ ಗ್ರಾಮದವರು ಮೃತಪಟ್ಟಿದ್ದು, ಸಂಬಂಧಿಕರು ಅವರ ಶವಗಳನ್ನು ತಂತಮ್ಮ ಗ್ರಾಮಗಳಿಗೆ ತೆಗೆದು ಕೊಂಡು ಬಂದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಭಕ್ತಿಯ ಪರಾಕಾಷ್ಠೆ ಮುಳುವಾಯಿತೇ: ದೇವರ ಪ್ರಸಾದ ವಾಸನೆ ಬಂದು ತಿನ್ನಲು ಯೋಗ್ಯವಲ್ಲ ಎಂದು ಸಂಶಯ ಬಂದರೂ ಸಾಕಷ್ಟು ಭಕ್ತರು ಪ್ರಸಾದವನ್ನು ದೇವಿಯ ಮೇಲಿನ ಭಕ್ತಿಗೆ ಸೇವಿಸಿದರು. ಭಕ್ತಿಯ ಪರಾಕಾಷ್ಠೆಯೇ ಹಲವು ಭಕ್ತರ ಸಾವು ನೋವಿಗೆ ಕಾರಣವಾಯಿತು.

ಶುಕ್ರವಾರ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಕಾರ್ಯ ಮುಕ್ತಾಯವಾಗುತ್ತಿದ್ದಂತೆ ಪ್ರಸಾದ ವಿತರಣೆ ಪ್ರಾರಂಭವಾ ಯಿತು. ಪ್ರಸಾದ ಸೇವನೆ ವೇಳೆ ಒಗರು ಸಹಿತ ಕೆಟ್ಟ ವಾಸನೆ ಬಂದರೂ ದೇವರ ಪ್ರಸಾದ ಎಸೆಯಬಾರದು ಎಂದು ಕಷ್ಟ ಪಟ್ಟು ಸಾಕಷ್ಟು ಜನ ಸೇವಿಸಿದ್ದಾರೆ. ಆದರೆ, ಕೆಲವರು ತಿನ್ನಲು ಸಾಧ್ಯವಾಗದೆ ಎಸೆದರು. ಪೂರ್ಣ ಪ್ರಮಾಣ ಹಾಗೂ ಅರೆಬರೆ ಸೇವಿಸಿದವರಲ್ಲಿ ಹೆಚ್ಚು ಪ್ರಾಣ ಹಾನಿ ಯಾಗಿದೆ ಎನ್ನಲಾಗಿದೆ.

ಓಂ ಶಕ್ತಿ ಭಕ್ತರು ಅಸ್ವಸ್ಥ: ತಮಿಳು ನಾಡಿನಲ್ಲಿರುವ ಓಂಶಕ್ತಿ ದೇವಸ್ಥಾನಕ್ಕೆ ಅಯ್ಯಪ್ಪ ಭಕ್ತರ ಮಾದರಿಯಲ್ಲಿ ಪ್ರತಿ ವರ್ಷ ಚಾಮರಾಜನಗರದ ಭಕ್ತರು ಮಾಲೆ ಧರಿಸಿ ತೆರಳುತ್ತಾರೆ. ಹೀಗೆ ತೆರಳುವ ಮೊದಲು ಈ ದೇಗುಲಕ್ಕೆ ಬರುವುದು ವಾಡಿಕೆ. ಮೊದಲ ತಂಡದಲ್ಲಿ 30 ಜನ ಬಂದು ಸೇವಿಸಿದ್ದಾರೆ. ಸೇವಿಸಿದ ಬಹುತೇಕರು ಅಸ್ವಸ್ತಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 2ನೇ ತಂಡದ ಕೆಲವರಿಗೆ ಆಹಾರ ಸಿಕ್ಕಿಲ್ಲವೆಂದು ಬೇಸರಗೊಂಡಿದ್ದರು. ಆದರೆ, ಸಿಗದಿದ್ದ ರಿಂದ ಮುಂದಿನ ಅನಾಹುತ ತಪ್ಪಿದಂತಾಗಿದೆ.

ಹಲವರ ಜೀವ ಉಳಿಸಿದ ಕಾಗೆ..!

ಒಂದು ವೇಳೆ ದೇವಸ್ಥಾನಕ್ಕೆ ಕಾಗೆಗಳು ಆಹಾರ ಸೇವಿಸಲು ಬಾರದೆ ಇದ್ದಿದ್ದರೆ ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚುತಿತ್ತು ಎನ್ನಲಾಗಿದೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ ಪ್ರಸಾದ ವಿತರಣೆ ಪ್ರಾರಂಭವಾಯಿತು. ಮೊದಲು ಆಹಾರ ಸೇವಿಸಿದ ಜನರು ಚೆನ್ನಾಗಿಯೇ ಇದ್ದರು. ಕೆಲವೊಬ್ಬರಿಗೆ ಮಾತ್ರ ವಾಂತಿ ಕಾಣಿಸಿ ಕೊಳ್ಳುತಿತ್ತು. ಆದರೆ, ಹೊರಗೆ ಬಿಸಾಡಿದ್ದ ಎಂಜಲು ಪದಾರ್ಥ ಗಳನ್ನು ಸೇವಿಸಿದ ಕಾಗೆಗಳು ಒದ್ದಾಡುತ್ತಾ ಪ್ರಾಣ ಬಿಡುತ್ತಿರುವು ದನ್ನು ಕಂಡ ಸ್ಥಳೀಯರು ಪ್ರಸಾದ ಸೇವನೆ ನಿಲ್ಲಿಸಿದ್ದಾರೆ. ಈ ವೇಳೆ ಅಸ್ವಸ್ಥರಾದವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸ ಲಾಯಿತು. ಇದರಿಂದ ಹಲವು ಜನರ ಜೀವ ಉಳಿದಿದೆ.

Translate »