ಮೈಸೂರು ನಗರ ಪಾಲಿಕೆ ಮತ್ತೆ `ಅತಂತ್ರ’
ಮೈಸೂರು

ಮೈಸೂರು ನಗರ ಪಾಲಿಕೆ ಮತ್ತೆ `ಅತಂತ್ರ’

September 4, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮತ್ತೆ ಅತಂತ್ರ ಪರಿಸ್ಥಿತಿಗೆ ಗುರಿಯಾಗಿದೆ. ಪಾಲಿಕೆಯ 65 ವಾರ್ಡ್‌ಗಳ ಪೈಕಿ ಬಿಜೆಪಿ 22 ಸ್ಥಾನ ಗಳಿಸಿದೆಯಾದರೂ, ಮೈಸೂರು ಪಾಲಿಕೆ ಅಧಿಕಾರ ಹಿಡಿಯಲಾಗದ ಪರಿಸ್ಥಿತಿ ಉಂಟಾಗಿದ್ದು, ಮೈತ್ರಿ ಮುಂದು ವರೆಯಬೇಕಾದ ಅನಿವಾರ್ಯತೆ ಇದೆ.

22 ವಾರ್ಡ್‍ಗಳಲ್ಲಿ ಬಿಜೆಪಿ, 19ರಲ್ಲಿ ಕಾಂಗ್ರೆಸ್, 18ರಲ್ಲಿ ಜೆಡಿಎಸ್ ಅಭ್ಯರ್ಥಿ ಗಳು ಜಯಭೇರಿ ಬಾರಿಸಿದ್ದಾರೆ. ಉಳಿದಂತೆ ಐವರು ಪಕ್ಷೇತರರು ಹಾಗೂ ಓರ್ವ ಬಿಎಸ್‍ಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹಾಗಾಗಿ ಯಾವ ಪಕ್ಷಕ್ಕೂ ನಿಚ್ಚಳ ಬಹುಮತ ಇಲ್ಲ. ಮೈತ್ರಿ ಆಡಳಿತ ಅನಿವಾರ್ಯವಾದಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತವಿರುವ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಯಲ್ಲೂ ಅದೇ ಮೈತ್ರಿ ಮುಂದುವರೆಯು ವುದು ಬಹುತೇಕ ಖಚಿತವಾಗಿದೆ.

ಕಳೆದ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 20, ಬಿಜೆಪಿ 13, ಎಸ್‍ಡಿಪಿಐ 3, ಬಿಎಸ್‍ಆರ್, ಕಾಂಗ್ರೆಸ್ 1, ಕೆಜೆಪಿ 1 ಹಾಗೂ ಪಕ್ಷೇತರ 7 ಸ್ಥಾನಗಳಲ್ಲಿ ಗೆಲುವು ಸಾಧಿ ಸಿದ್ದರು. ಈ ಬಾರಿ ಬಿಜೆಪಿ ಚೇತರಿಸಿ ಕೊಂಡಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಕ್ರಮವಾಗಿ ಹಾಗೂ 2 ಸ್ಥಾನಗಳನ್ನು ಕಳೆದು ಕೊಂಡಿವೆ. ಸ್ವತಂತ್ರ ಅಭ್ಯರ್ಥಿಗಳ ಸಂಖ್ಯೆಯಲ್ಲಿ 2 ಕಡಿಮೆಯಾದಂತಾಗಿದ್ದರೆ, ಈ ಬಾರಿ ಬಿಎಸ್‍ಪಿ ಖಾತೆ ತೆರೆದಿದೆ.

ಕೆಜೆಪಿ, ಬಿಎಸ್‍ಆರ್, ಕಾಂಗ್ರೆಸ್‍ನಿಂದ ಸ್ಪರ್ಧೆಯೇ ಇರಲಿಲ್ಲ. ಕಳೆದ ಬಾರಿ ಮೂರು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದ ಎಸ್‍ಡಿಪಿಐ ಈ ಚುನಾವಣೆಯಲ್ಲಿ ಖಾತೆ ತೆರೆಯಲಿಲ್ಲ. ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಧಿಕಾರ ಹಿಡಿಯಲು ತಂತ್ರಗಾರಿಕೆ ಆರಂಭವಾಗಿದೆ. ಆಗಸ್ಟ್ 31ರಂದು ಪಾಲಿಕೆಯ 65 ವಾರ್ಡ್‍ಗೆ ಚುನಾವಣೆ ನಡೆದಿತ್ತು. ಬೆಳಿಗ್ಗೆ 8 ಗಂಟೆಗೆ ಮೈಸೂರಿನ ಪಡುವಾರ ಹಳ್ಳಿ ಬಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸ್ಟ್ರಾಂಗ್ ರೂಂ ತೆರೆದು ಇವಿಎಂಗಳನ್ನು ತೆರೆದು ಎಣಿಕೆ ಆರಂಭಿಸಲಾಯಿತು. ಏಕಕಾಲದಲ್ಲಿ 13 ಚುನಾವಣಾಧಿಕಾರಿಗಳು ಎಲ್ಲಾ 65 ವಾರ್ಡ್ ಗಳ ಮತ ಎಣಿಕೆ ಕಾರ್ಯ ನಡೆಸಿದ್ದ ರಿಂದ ಬೆಳಿಗ್ಗೆ 11.30 ಗಂಟೆ ವೇಳೆಗೆ ಪೂರ್ಣ ಪ್ರಮಾಣದ ಫಲಿತಾಂಶ ಹೊರಬಿತ್ತು.

Translate »