ಐಎಎಸ್ ಕನಸು ಕಂಡಿದ್ದ ಯುವಕ ಈಗ ಅತೀ ಕಿರಿಯ ಕಾರ್ಪೊರೇಟರ್!
ಮೈಸೂರು

ಐಎಎಸ್ ಕನಸು ಕಂಡಿದ್ದ ಯುವಕ ಈಗ ಅತೀ ಕಿರಿಯ ಕಾರ್ಪೊರೇಟರ್!

September 4, 2018

ಮೈಸೂರು: ಐಎಎಸ್ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕೆಂದು ಕನಸು ಕಂಡಿದ್ದ ಈ ಯುವಕ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ, ಪ್ರಥಮ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದಲ್ಲದೆ, ಮೈಸೂರು ನಗರಪಾಲಿಕೆ ಇತಿಹಾಸದಲ್ಲೇ ಅತೀ ಕಿರಿಯ ವಯಸ್ಸಿನ ಕಾರ್ಪೊರೇಟರ್ ದಾಖಲೆಯನ್ನು ನಿರ್ಮಿಸಿದ್ದಾರೆ.

ನಗರಪಾಲಿಕೆಯ ಸಾತಗಳ್ಳಿ ಬಡಾವಣೆ ಒಂದನೇ ಹಂತದ 35ನೇ ವಾರ್ಡ್‍ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಸಾತ್ವಿಕ್ ಸಂದೇಶ್‍ಸ್ವಾಮಿ ಗೆಲುವಿನ ನಗೆ ಬೀರಿದ್ದಾರೆ. ಎಸ್.ಸಾತ್ವಿಕ್ ನಗರಪಾಲಿಕೆಯ ಅತೀ ಕಿರಿಯ ಕಾರ್ಪೊರೇಟರ್.ಇವರ ದೊಡ್ಡಪ್ಪ ಸಂದೇಶ್ ನಾಗರಾಜ್ ವಿಧಾನಪರಿಷತ್ ಸದಸ್ಯರು. ಇನ್ನು ತಂದೆ ಸಂದೇಶ್‍ಸ್ವಾಮಿ ಮಾಜಿ ಮೇಯರ್. ಹಾಗಾಗಿ ಚಿಕ್ಕ ವಯಸ್ಸಿನಿಂದಲೇ ರಾಜಕಾರಣ ನೋಡುತ್ತಾ ಬಂದವರು.

ಇಂದು ಮತ ಎಣಿಕೆ ನಂತರ ಗೆಲುವಿನ ನಗೆ ಬೀರುತ್ತಾ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಹೌದು, ನಾನು ಐಎಎಸ್ ಮಾಡಬೇಕೆಂದಿದ್ದೆ. ಆದರೆ ಪಾಸ್ ಆಗಲಿಲ್ಲ. ಐಎಎಸ್ ಅಧಿಕಾರಿಯಾದರೆ ಮಾತ್ರವಲ್ಲ, ಈಗಲೂ ಕಾರ್ಪೊರೇಟರ್ ಆಗಿ ಜನ ಸೇವೆ ಮಾಡಬಹುದು ಎಂದರು.

ನನ್ನ ವಾರ್ಡ್ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಅವರ ಸೇವೆ ಮಾಡುತ್ತೇನೆ. ನನ್ನ ದೊಡ್ಡಪ್ಪ ಸಂದೇಶ್ ನಾಗರಾಜ್ ಮತ್ತು ತಂದೆ ಸಂದೇಶ್‍ಸ್ವಾಮಿಯವರ ರಾಜಕಾರಣ ನೋಡಿದ್ದೇನೆ. ಅವರಂತೆಯೇ ನಾನು ಕೂಡ ಜನ ಸೇವೆ ಮಾಡುತ್ತೇನೆ ಎಂದು ಅವರು ತಿಳಿಸಿದರು.

ನಗರಪಾಲಿಕೆಯಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ ನಾನು ಕಾರ್ಪೊರೇಟರ್ ಆಗಿದ್ದೀನಿ ಎಂದು ಹೇಳುತ್ತಿದ್ದಾರೆ. ಬಹಳ ಸಂತೋಷವಾಗುತ್ತಿದೆ. ನನ್ನ ಈ ಗೆಲುವಿಗೆ ಕಾರಣ ನನ್ನ ದೊಡ್ಡಪ್ಪ ಸಂದೇಶ್ ನಾಗರಾಜ್ ಅವರೇ ಹೊರತು ನನ್ನದೇನಿಲ್ಲ ಎಂದು ಸಾತ್ವಿಕ್ ವಿನಯಪೂರ್ವಕವಾಗಿ ಹೇಳಿದರು.

Translate »