ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಭಾರೀ ದರೋಡೆ
ಮೈಸೂರು

ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಭಾರೀ ದರೋಡೆ

September 4, 2018

ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗೇಟ್‍ನಲ್ಲಿರುವ ಕಾವೇರಿ ಗ್ರಾಮೀಣ ಕಲ್ಪತರು ಬ್ಯಾಂಕ್ ಕ್ಯಾತನಹಳ್ಳಿ ಶಾಖೆಯ ಕಿಟಕಿ ಸರಳು ತುಂಡರಿಸಿ, ಸುಮಾರು 12 ಕೆಜಿ ಚಿನ್ನಾಭರಣ ಹಾಗೂ 6 ಲಕ್ಷ ರೂ. ನಗದನ್ನು ದೋಚಲಾಗಿದೆ.

ಶನಿವಾರ ಅಥವಾ ಭಾನುವಾರ ತಡರಾತ್ರಿ ಸ್ಟೇರ್ ಕೇಸ್ ಕೆಳಭಾಗದಲ್ಲಿರುವ ಕಿಟಕಿಯ ಸರಳನ್ನು ಕತ್ತರಿಸಿ, ಒಳನುಗ್ಗಿರುವ ಖದೀಮರು, ಗ್ಯಾಸ್ ಕಟರ್ ಮೂಲಕ ಲಾಕರ್ ಮುರಿದು, ಅದರಲ್ಲಿದ್ದ 12 ಕೆಜಿ ಚಿನ್ನಾಭರಣ ಹಾಗೂ 6 ಲಕ್ಷ ರೂ. ನಗದನ್ನು ದೋಚಿ, ಪರಾರಿಯಾಗಿದ್ದಾರೆ. ಸೋಮವಾರ ಬ್ಯಾಂಕ್ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಮುಸುಕುಧಾರಿಗಳು ಬ್ಯಾಂಕ್‍ನ ಒಳಗೆ ಪ್ರವೇಶಿಸಿರುವುದು ಸಿಸಿಟಿಟಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಳಿಕ ಅವರು ವಿದ್ಯುತ್, ಗಣಕಯಂತ್ರ, ಸಿಸಿಟಿವಿ ಸಂಪರ್ಕ ಕೇಬಲ್‍ಗಳನ್ನು ತುಂಡರಿಸಿ, ದುಷ್ಕøತ್ಯವೆಸಗಿದ್ದಾರೆ.

ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಡಿವೈಎಸ್ಪಿ ಬಾಸ್ಕರ್ ರೈ ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್.ಡಿ.ಕೋಟೆ ಇನ್ಸ್‍ಪೆಕ್ಟರ್ ಹರೀಶ್‍ಕುಮಾರ್, ಸಬ್‍ಇನ್ಸ್‍ಪೆಕ್ಟರ್ ಅಶೋಕ್, ಸಿಬ್ಬಂದಿ ಶ್ರೀನಿವಾಸ, ಶಿವಕುಮಾರ್, ಗುರು, ಲತೀಫ್ ತಂಡ ತನಿಖೆಯನ್ನು ಮುಂದುವರಿಸಿದೆ.

ವೃತ್ತಿಪರ ಖದೀಮರು: ಬ್ಯಾಂಕ್‍ನ ಕಟ್ಟಡಕ್ಕೆ ಹೊಂದಿಕೊಂಡಂತೆ ಎರಡು ಮನೆಗಳಿದ್ದರೂ ಖದೀಮರ ಕೈಚಳಕ ಯಾರಿಗೂ ಗೊತ್ತಾಗಿಲ್ಲ. ಕಟ್ಟಡದ ಸ್ಟೇರ್‍ಕೇಸ್ ಕೆಳಭಾಗದಲ್ಲಿರುವ ಕಿಟಕಿಯ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು, ಸರಳುಗಳನ್ನು ಯಂತ್ರದಿಂದ ಕತ್ತರಿಸಿ, ಒಳನುಗ್ಗಿರುವ ಇಬ್ಬರು ಮುಸುಕುಧಾರಿ ಖದೀಮರು, ವೈರಿಂಗ್ ತುಂಡರಿಸಿದ್ದಾರೆ. ಬಳಿಕ ಬ್ಯಾಟರಿ ಸಹಾಯದಲ್ಲಿ ಗ್ಯಾಸ್ ಕಟರ್ ಮೂಲಕ ಬೀರು ಹಾಗೂ ಲಾಕರ್‌ಗಳನ್ನು ತುಂಡರಿಸಿ, ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ವೃತ್ತಿಪರ ಖದೀಮರೇ ಈ ದುಷ್ಕೃತ್ಯವೆಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕತ್ತಲೆಯಲ್ಲಿ ಕೈಚಳಕ ಮೆರೆದ ಕಳ್ಳರು, ಸುಮಾರು ಒಂದು ಕೆಜಿಯಷ್ಟು ಚಿನ್ನಾಭರಣವನ್ನು ಲಾಕರ್ ಬಳಿಯೇ ಬೀಳಿಸಿ ಹೋಗಿದ್ದಾರೆ.

ಗ್ರಾಹಕರ ಸೋಗಿನಲ್ಲಿ ಮಾಹಿತಿ: ಖದೀಮರು, ಗ್ರಾಹಕರ ಸೋಗಿನಲ್ಲಿ ಬಂದು ಬ್ಯಾಂಕ್‍ನಲ್ಲಿದ್ದ ಎಲ್ಲಾ ವ್ಯವಸ್ಥೆಯನ್ನೂ ಗಮನಿಸಿರಬಹುದು. ಅಲ್ಲದೆ ಅಕ್ಕಪಕ್ಕದ ಮನೆಯವರಿಗೆ ಗೊತ್ತಾಗದಂತೆ ಯಾವ ಮಾರ್ಗದಲ್ಲಿ ಬ್ಯಾಂಕ್ ಪ್ರವೇಶಿಸಿದರೆ ಸೂಕ್ತ ಎಂಬುದನ್ನೂ ಚಿಂತಿಸಿ, ಯೋಜನೆ ರೂಪಿಸಿಕೊಂಡಿದ್ದಾರೆ. ಅದರಂತೆ ಸ್ಟೇರ್‍ಕೇಸ್ ಕೆಳಭಾಗದ ಕಿಟಕಿ ಮೂಲಕ ಒಳನುಗ್ಗಿರುವ ಕಳ್ಳರು, ತಕ್ಷಣವೇ ಎಲ್ಲಾ ಕೇಬಲ್‍ಗಳನ್ನು ತುಂಡರಿಸಿದ್ದಾರೆಂದು ಹೇಳಲಾಗುತ್ತಿದೆ.

ತನಿಖೆಯೂ ಸವಾಲು: ಸೋಮವಾರ ಬೆಳಿಗ್ಗೆ ಬ್ಯಾಂಕ್ ಬಾಗಿಲು ತೆರೆಯುತ್ತಿದ್ದಂತೆ ಬ್ಯಾಂಕ್ ಸಿಬ್ಬಂದಿ ದಂಗಾಗಿದ್ದಾರೆ. ಕೇಬಲ್‍ಗಳನ್ನು ತುಂಡರಿಸಿರುವುದು, ಕಿಟಿಕಿಯ ಸರಳುಗಳನ್ನು ಕತ್ತರಿಸಿರುವುದನ್ನು ನೋಡಿ ಆತಂಕದಿಂದ ಒಳಹೋಗಿ ನೋಡಿದಾಗ ಲಾಕರ್ ಅನ್ನೂ ತುಂಡರಿಸಲಾಗಿತ್ತು. ಗಾಬರಿಯಲ್ಲಿ ಒಡೆದಿದ್ದ ಲಾಕರ್, ಬೀರು ಸೇರಿದಂತೆ ಎಲ್ಲಾ ಕಡೆ ಜಾಲಾಡಿ, ಏನೇನು ಕಳ್ಳತನವಾಗಿದೆ ಎಂದು ಪರಿಶೀಲಿಸಿದ್ದಾರೆ. ಸ್ಥಳಕ್ಕಾಗಮಿಸಿದ ಶ್ವಾನದಳ ಹಾಗೂ ಬೆರಳಚ್ಚು ದಳಕ್ಕೆ ಮಹತ್ವದ ಸುಳಿವು ದೊರೆತಿಲ್ಲ. ಪರಿಣಾಮ ಪ್ರಕರಣದ ತನಿಖೆ ಸವಾಲಾಗಿ ಪರಿಣಮಿಸಿದೆ. ಆದರೂ ಪೊಲೀಸರು, ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಬ್ಯಾಂಕ್ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಬ್ಯಾಂಕ್‍ನ ಒಂದು ಸಿಸಿಟಿವಿ ಕ್ಯಾಮರಾದಲ್ಲಿ ಮಾತ್ರ ಮುಸುಕುಧಾರಿ ಖದೀಮರು ಸೆರೆಯಾಗಿದ್ದಾರೆ. ಗ್ರಾಮೀಣ ಪ್ರದೇಶವಾಗಿರುವ ಕಾರಣ ಅಕ್ಕಪಕ್ಕದ ಮನೆಗಳಲ್ಲೂ ಸಿಸಿಟಿವಿ ಕ್ಯಾಮರಾಗಳಿಲ್ಲ. ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಿಲ್ಲ. ಕಿಟಕಿ ಬಾಗಿಲಿನಲ್ಲಿ ಕೊಕ್ಕೆ ಚಿಲಕಗಳು ಇರುವುದರಿಂದ ಖದೀಮರು ನಿರಾಯಾಸವಾಗಿ ಆಯುಧದಿಂದ ಮೀಟಿ ತೆರೆದಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಿ, ಗ್ರಾಮೀಣ ಭಾಗದಲ್ಲಿರುವ ಬ್ಯಾಂಕ್‍ಗಳಿಗೂ ಸೂಕ್ತ ಭದ್ರತೆ ಕಲ್ಪಿಸಬೇಕಾಗಿದೆ.

Translate »