ಬೀಚನಹಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಒಂಟಿ ಸಲಗ ದಾಂಧಲೆ
ಮೈಸೂರು

ಬೀಚನಹಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಒಂಟಿ ಸಲಗ ದಾಂಧಲೆ

May 18, 2019

ಹೆಚ್.ಡಿ.ಕೋಟೆ: ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ ಇಂದು ಮುಂಜಾ ನೆಯೇ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ಗ್ರಾಮದ ಬೀದಿ ಬೀದಿಗಳಲ್ಲಿ ರಂಪಾಟ ಮಾಡಿತು.

ಎಂದಿನಂತೆ ಜನರು ಮನೆಯಿಂದ ಹೊರಬರುತ್ತಿದ್ದಂತೆ ಒಂಟಿ ಸಲಗ ಪ್ರತ್ಯಕ್ಷವಾಯಿತು. ಗ್ರಾಮಸ್ಥರು ತಲ್ಲಣಗೊಂಡರು. ಗ್ರಾಮದ ನಿವಾಸಿ ಲಕ್ಷ್ಮಮ್ಮ ಎಂಬುವರು ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ ಸಂದರ್ಭ ಈ ಸಲಗವನ್ನು ನೋಡಿ ಗಾಬರಿ ಗೊಂಡು ಓಡುವಾಗ ಕೆಳಗೆ ಬಿದ್ದಿದ್ದಾರೆ. ತಲೆಗೆ ಪೆಟ್ಟಾದ ಕಾರಣ ಲಕ್ಷ್ಮಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀಚನಹಳ್ಳಿ ಗ್ರಾಮಸ್ಥರೆಲ್ಲ ಸೇರಿ ಒಂಟಿ ಸಲಗವನ್ನು ಓಡಿ ಸಲು ಪ್ರಯತ್ನಿಸುವ ಸಂದರ್ಭದಲ್ಲಿ ರೊಚ್ಚಿಗೆದ್ದ ಆನೆ ಬೀದಿ ಬೀದಿಗಳಲ್ಲಿ ನುಗ್ಗಿ ರಂಪಾಟ ಮಾಡಿತು. ಗ್ರಾಮದ ನಿವಾಸಿ ಟೈಲರ್ ರಾಮು ಎಂಬುವರ ಟಿವಿಎಸ್ ಬೈಕ್ ಆನೆ ದಾಳಿ ಯಿಂದ ಜಖಂಗೊಂಡಿದೆ. ಸಂತೆ ಮಾಳದಲ್ಲಿರುವ ಪಟ್ಟಲ ದಮ್ಮ ದೇವಾಲಯದ ಸುತ್ತ ನಿರ್ಮಿಸಿದ್ದ ಕಾಂಪೌಂಡ್ ದ್ವಂಸ ಮಾಡಿದೆ. ಗದ್ದೆಯಲ್ಲಿ ನಾಟಿ ಮಾಡಿದ ಭತ್ತದ ಪೈರು ತುಳಿದು ಹಾಳು ಮಾಡಿದೆ. ಬೀಚನಹಳ್ಳಿ ಗ್ರಾಮದಿಂದ ತೆರಳಿದ ಆನೆಪುರ ಗ್ರಾಮದ ಮಾರ್ಗವಾಗಿ ಎಡದಂಡೆ ನಾಲೆ, ಕಬಿನಿ ನದಿ ದಾಟಿ ಆಗತ್ತೂರು, ನೇರಳೆ, ಮಾಗುಡಿಲು ಮಾರ್ಗವಾಗಿ ಸರಗೂರು ಪಟ್ಟಣ ಸೇರಿದೆ. ಸುಮಾರು 4 ಗಂಟೆಗಳ ಕಾಲ ಬೀಚನಹಳ್ಳಿ ಗ್ರಾಮದ ಬೀದಿಬೀದಿ ಗಳಲ್ಲಿ ಒಂಟಿ ಸಲಗ ದಾಂಧಲೆ ನಡೆಸಿತು. ಪೆÇಲೀಸರು ಹಾಗೂ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬರುವುದು ತಡವಾದ ಹಿನ್ನೆಲೆಯಲ್ಲಿ ಬೀಚನಹಳ್ಳಿ ಗ್ರಾಮದಲ್ಲಿರುವ ಮಸೀದಿ ಮೈಕ್‍ನಲ್ಲಿ ಗ್ರಾಮಕ್ಕೆ ಆನೆ ಬಂದಿದೆ. ಗ್ರಾಮ ಸ್ಥರು ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಸಾರಲಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳಾದ ಯಡಿಯಾಲ ಎಸಿಎಫ್ ಪರಮೇಶ್, ಹೆಚ್.ಡಿ.ಕೋಟೆ ಎಸಿಎಫ್ ಪರಮೇಶ್ವರಪ್ಪ, ಎನ್.ಬೇಗೂರು ಆರ್‍ಎಫ್‍ಓ ಹನುಮಂತ ರಾಜು, ಗುಂಡ್ರೆ ಅರ್‍ಎಫ್‍ಓ. ಲೋಕೇಶ್, ಹೆಚ್.ಡಿ.ಕೋಟೆ ಅರ್‍ಎಫ್‍ಓ ಮಧು ಹಾಗೂ ಸಿಬ್ಬಂದಿ ಆನೆಯನ್ನು ಕಾಡಿಗಟ್ಟಲು ಹರಸಾಹಸಪಟ್ಟರು.

ಆನೆ ಚಿಕ್ಕದೇವಮ್ಮ ಬೆಟ್ಟದ ಕಡೆಯಿಂದ ಬಂದಿರಬಹುದು ಎಂದು ಅರಣ್ಯಾಧಿಕಾರಿ ಪರಮೇಶ್ ತಿಳಿಸಿದ್ದಾರೆ. ಈ ಒಂಟಿ ಸಲಗ ಕಳೆದ ಮೂರು ವಾರಗಳಿಂದ ವಿವಿಧ ಗ್ರಾಮಗಳಿಗೆ ನುಗ್ಗಿ ದಾಂಧಲೆ ಮಾಡುತ್ತಲೇ ಬರುತ್ತಿದೆ. ಜನ ಸಾಮಾನ್ಯರು, ರೈತರು ಒಂಟಿ ಸಲಗಕ್ಕೆ ಭಯಭೀತರಾಗಿದ್ದಾರೆ. ಆದರೆ ಅರಣ್ಯ ಅಧಿಕಾರಿಗಳು ಈ ಒಂಟಿ ಸಲಗವನ್ನು ಕಾಡಿಗಟ್ಟಲು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸರಗೂರು ವರದಿ: ಬೀಚನಹಳ್ಳಿಯಲ್ಲಿ ದಾಂಧಲೆ ನಡೆಸಿದ್ದ ಕಾಡಾನೆ ಹೊಲ-ಗದ್ದೆಗಳ ಮೂಲಕ ಇಲ್ಲಿನ ಕಪಿಲಾ ನದಿಗೆ ಬಂದು ಜಲಕ್ರೀಡೆಯಾಡಿ, ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ಕಪಿಲಾ ನದಿಗೆ ಕಾಡಾನೆ ಬಂದಿದೆ ಎಂಬ ವಿಷಯ ತಿಳಿಯುತ್ತಿದ್ದಂ ತೆಯೇ ಅದನ್ನು ನೋಡಲು ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿದ್ದರು. ಗ್ರಾಮಸ್ಥರ ಕೂಗಾಟದಿಂದ ವಿಚಲಿತಗೊಂಡು ಕಾಡಾನೆ ಗ್ರಾಮಕ್ಕೆ ನುಗ್ಗಬಹುದು ಎಂಬ ಆತಂಕದಿಂದಾಗಿ ಸ್ಥಳಕ್ಕಾಗಮಿಸಿದ್ದ ಅರಣ್ಯಾಧಿಕಾರಿಗಳು ಗ್ರಾಮಸ್ಥರನ್ನು ಚದುರಿಸಿದರು. ರಾತ್ರಿ ವೇಳೆಗೆ ಕಪಿಲಾ ನದಿಯಿಂದ ಕಾಡಾನೆ ಅರಣ್ಯದತ್ತ ಚಲಿಸಿತ್ತಾದರೂ, ನದಿ ದಡದಲ್ಲೇ ಓಡಾಡುತ್ತಿದೆ. ಆದ್ದರಿಂದ ಮತ್ತೆ ನದಿ ದಾಟಿ ಗ್ರಾಮದತ್ತ ಕಾಡಾನೆ ನುಸುಳದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದು, ಗ್ರಾಮದಲ್ಲೇ ಬೀಡು ಬಿಟ್ಟಿದ್ದಾರೆ.

Translate »