ಬ್ಲಾಕ್‍ಮೇಲ್ ತಂತ್ರಗಳಿಗೆ ಮಣಿಯಲ್ಲ
ಮೈಸೂರು

ಬ್ಲಾಕ್‍ಮೇಲ್ ತಂತ್ರಗಳಿಗೆ ಮಣಿಯಲ್ಲ

December 25, 2018

ಬೆಂಗಳೂರು: ಸಚಿವ ಸ್ಥಾನ ದಕ್ಕದವರು ಮತ್ತು ಕಳೆದುಕೊಂಡವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದರೆ ಅಂತಹ ವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ಬ್ಲಾಕ್ ಮೇಲ್ ತಂತ್ರಗಳಿಗೆ ಪಕ್ಷ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಂಪುಟಕ್ಕೆ ಕಾಂಗ್ರೆಸ್‍ನಿಂದ ಯಾರನ್ನು ತೆಗೆದುಕೊಳ್ಳಬೇಕು ಮತ್ತು ಕೈಬಿಡಬೇಕು ಎಂಬ ನಿರ್ಧಾರ ವರಿಷ್ಠರದ್ದಾಗಿದೆ. ಕಾಂಗ್ರೆಸ್‍ನಲ್ಲಿ ಹೈಕಮಾಂಡೇ ಫೈನಲ್, ಅವರು ತೆಗೆದುಕೊಳ್ಳುವ ನಿರ್ಧಾರವನ್ನು ಯಾರೂ ಪ್ರಶ್ನಿಸುವಂತಿಲ್ಲ, ಒಂದು ವೇಳೆ ಸಚಿವ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಪಕ್ಷ ಇದ್ದರೆ ಸರ್ಕಾರ ಇರುತ್ತದೆ, ಒಂದಿಬ್ಬರ ಬ್ಲಾಕ್‍ಮೇಲ್ ತಂತ್ರಗಳಿಗೆ ಮಣಿದರೆ ನಾಳೆ ಇತರರೂ ಇದೇ ತಂತ್ರ ಅನುಸರಿಸುತ್ತಾರೆ, ಯಾರಿಗೆ ಯಾವ ಸ್ಥಾನಮಾನ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಸಚಿವ ಸಂಪುಟ ವಿಸ್ತರಣೆ ಸಂಬಂಧ ಏಕ ಪಕ್ಷೀಯ ತೀರ್ಮಾನ ಆಗಿಲ್ಲ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ರಾಜ್ಯ ಉಸ್ತುವಾರಿ ಕೆ.ಸಿ. ವೇಣು ಗೋಪಾಲ್ ಸೇರಿದಂತೆ ಅನೇಕ ಮುಖಂಡರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ರಮೇಶ್ ಜಾರಕಿಹೊಳಿ ಅವರಿಗೆ ಪಕ್ಷ ಅನ್ಯಾಯ ಮಾಡಿಲ್ಲ, ಅವರಿಗೆ ಎಲ್ಲಾ ಸ್ಥಾನಮಾನ ನೀಡಿದೆ, ಆದರೆ ಅವರೇ ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ. ಕಳೆದ 7 ತಿಂಗಳಲ್ಲಿ ಸಚಿವರಾಗಿ ಅವರ ಸಾಧನೆ ಅಷ್ಟಕ್ಕಷ್ಟೆ. ಪಕ್ಷದ ಕೆಲಸಗಳಲ್ಲೂ ನಿರಾಸಕ್ತಿ ವಹಿಸಿದ್ದರು, ಸಚಿವ ಸಂಪುಟ ಸಭೆಗೆ ಗೈರುಹಾಜ ರಾದರು. ಆದ್ದರಿಂದ ಸಂಪುಟದಿಂದ ಕೈಬಿಡಲಾಯಿತು ಎಂದು ಸಮರ್ಥಿಸಿಕೊಂಡರು.

ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಿಸಿದ್ದರಲ್ಲಿ ಯಾರ ಕೈವಾಡವೂ ಇಲ್ಲ, ಅವರವರ ಸಾಮಥ್ರ್ಯ, ಹಿರಿತನ ಹಾಗೂ ಪ್ರದೇಶವಾರು ಪರಿಗಣಿಸಿ, ಹೊಸಬರು ಹಾಗೂ ಹಳಬರಿಗೂ ಅವಕಾಶ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಅವರಿಗೂ ಉತ್ತಮ ಸ್ಥಾನಮಾನ ಒಲಿದು ಬರಲಿದೆ ಎಂದರು.

Translate »