ವರಮಹಾಲಕ್ಷ್ಮಿ ಹಬ್ಬಕ್ಕೆ ಕೊನೆಗೂ ಇಲ್ಲದ ರಿಯಾಯಿತಿ ದರದ ಮೈಸೂರು ರೇಷ್ಮೆ ಸೀರೆ
ಮೈಸೂರು

ವರಮಹಾಲಕ್ಷ್ಮಿ ಹಬ್ಬಕ್ಕೆ ಕೊನೆಗೂ ಇಲ್ಲದ ರಿಯಾಯಿತಿ ದರದ ಮೈಸೂರು ರೇಷ್ಮೆ ಸೀರೆ

August 25, 2018

ಮೈಸೂರು: ಕರ್ನಾಟಕ ರೇಷ್ಮೆ ಉದ್ಯಮ ನಿಗಮದ ವತಿಯಿಂದ ವರಮಹಾಲಕ್ಷ್ಮೀ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ಮೈಸೂರು ರೇಷ್ಮೆ ಸೀರೆ ದೊರೆಯುತ್ತದೆ ಎಂಬ ಮಹತ್ತರ ಆಸೆಯೊಂದಿಗೆ ಬಾರಿ ನಿರೀಕ್ಷೆಯಲ್ಲಿದ್ದ ಮೈಸೂರಿನ ಜನತೆಗೆ ನಿರಾಸೆಯಾಗಿದೆ.

ವರಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರ ಕೆಎಸ್‍ಐಸಿಯ ಮಳಿಗೆಗೆ ಬಂದ ಮಹಿಳೆಯರು ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಸಿಗದ ಪರಿಣಾಮ ಪೆಚ್ಚು ಮೋರೆ ಹಾಕಿಕೊಂಡು ವಾಪಸ್ಸಾದರು.

ಪ್ರತಿಷ್ಠಿತ ಸಂಸ್ಥೆಯಾದ ಕೆಎಸ್‍ಐಸಿ ಸಂಸ್ಥೆಯ ವತಿಯಿಂದ ತಯಾರಾಗುವ `ಮೈಸೂರು ರೇಷ್ಮೆ’ ಸೀರೆಗೆ ಭಾರೀ ಬೇಡಿಕೆಯಿದೆ. ಅಪ್ಪಟ ರೇಷ್ಮೆಯಿಂದ ತಯಾರಿಸುವುದರಿಂದ ಬೆಲೆಯೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರೇಷ್ಮೆ ಖಾತೆಯನ್ನು ನಿಭಾಯಿಸುತ್ತಿರುವ ಸಾ.ರಾ.ಮಹೇಶ್ ಅವರು ಜೂ.29ರಂದು ಮೈಸೂರಿನ ಕೆಎಸ್‍ಐಸಿ ಸಂಸ್ಥೆಗೆ ಭೇಟಿ ನೀಡಿ ಪರಿಶೀಲಿಸಿದ್ದರಲ್ಲದೆ, ವರಮಹಾಲಕ್ಷ್ಮೀ ಹಬ್ಬಕ್ಕೆ ರಿಯಾಯಿತಿ ದರದಲ್ಲಿ 4.500 ರೂ.ಗೆ ರೇಷ್ಮೆ ಸೀರೆ ನೀಡುವುದಾಗಿ ಘೋಷಣೆ ಮಾಡಿದ್ದರು. ಮೈಸೂರು ಸೇರಿದಂತೆ ವಿವಿಧೆಡೆ ಇರುವ ಕೆಎಸ್‍ಐಸಿ ಮಳಿಗೆಗಳಲ್ಲಿ ರಿಯಾಯಿತಿ ದರದ ಸೀರೆಗಳ ಮಾರಾಟ ಲಭ್ಯವಿದ್ದು, ಒಬ್ಬರಿಗೆ ಒಂದೇ ಒಂದು ಸೀರೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದರು. ಇದರಿಂದ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡುವುದಕ್ಕೆ ಸೀರೆಗಳ ತಯಾರಿಕೆಯೂ ನಡೆದಿತ್ತು. ಆದರೆ ನಗರ ಪಾಲಿಕೆಯ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ರಿಯಾಯಿತಿ ದರದ ಸೀರೆಗಳ ಮಾರಾಟಕ್ಕೆ ಬ್ರೇಕ್ ಬಿದ್ದಂತಾಗಿದೆ.

ಬಂದು ಹೋದರು: ಇಂದು ವರಮಹಾಲಕ್ಷ್ಮೀ ಹಬ್ಬವಾದ ಹಿನ್ನೆಲೆಯಲ್ಲಿ ಕೆಎಸ್‍ಐಸಿ ಮಳಿಗೆಗಳಲ್ಲಿ ರಿಯಾಯಿತಿ ದರದ ಸೀರೆಗಳನ್ನು ಮಾರಾಟ ಮಾಡಬಹುದು ಎಂದು ಹಲವಾರು ಮಂದಿ ಬೆಳಗಿನಿಂದ ಸಂಜೆಯವರೆಗೂ ಸೀರೆ ಖರೀದಿಸಲು ಬಂದು ಬರಿಗೈಲಿ ವಾಪಸ್ಸಾಗಿದ್ದಾರೆ. ಮಳಿಗೆಗಳ ಸಿಬ್ಬಂದಿ ರಿಯಾಯಿತಿ ದರದ ಸೀರೆಗಳ ಲಭ್ಯವಿಲ್ಲ ಎಂದು ಹೇಳುತ್ತಿದ್ದಂತೆ ಅಸಮಾಧಾನಗೊಂಡು ಹಿಂದಿರುಗಿದ್ದಾರೆ. ಕೆಲವರು ಸಿಬ್ಬಂದಿಗಳೊಂದಿಗೆ ಜಗಳವಾಡಿದ್ದಾರೆ. ಸಚಿವರೇ ಘೋಷಣೆ ಮಾಡಿದ್ದರೂ ಸಿಬ್ಬಂದಿಗಳು ನೀಡುತ್ತಿಲ್ಲ ಎಂದು ಆರೋಪಿಸಿ ವಾಪಸ್ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.

ನೀತಿ ಸಂಹಿತೆಯಿಂದ ತೊಡಕು ವರಮಹಾಲಕ್ಷ್ಮೀ ಹಬ್ಬಕ್ಕೆ ಜನತೆಗೆ ಮೈಸೂರು ರೇಷ್ಮೆ ಸೀರೆಯನ್ನು ರಿಯಾಯಿತಿ ದರದಲ್ಲಿ ನೀಡಬೇಕೆಂದು ಉದ್ದೇಶಿಸಲಾಗಿತ್ತು. ಇದಕ್ಕಾಗಿ ಸೀರೆಗಳ ತಯಾರಿಯೂ ನಡೆದಿದೆ. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೆಯಲ್ಲಿರುವುದರಿಂದ ರಿಯಾಯಿತಿ ದರದಲ್ಲಿ ಸೀರೆಗಳ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಈ ಮಧ್ಯೆ ನಾನು ಕಳೆದ ಕೆಲವು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪ ಹಾಗೂ ಸಿಲುಕಿರುವ ಜನರ ಸಂಕಷ್ಟಕ್ಕೆ ಸ್ಪಂದಿಸುವುದಕ್ಕಾಗಿ ಕೊಡಗಿನಲ್ಲಿ ಬೀಡು ಬಿಟ್ಟಿದ್ದೇನೆ. – ಸಾ.ರಾ.ಮಹೇಶ್, ರೇಷ್ಮೆ ಹಾಗೂ ಪ್ರವಾಸೋದ್ಯಮ ಸಚಿವ

Translate »