ವರಮಹಾಲಕ್ಷ್ಮಿ ಹಬ್ಬಕ್ಕೆ ಗ್ರ್ಯಾಂಡ್ ಆಫರ್ ರೂ. 4500ಕ್ಕೆ ಮೈಸೂರು ರೇಷ್ಮೆ ಸೀರೆ
ಮೈಸೂರು

ವರಮಹಾಲಕ್ಷ್ಮಿ ಹಬ್ಬಕ್ಕೆ ಗ್ರ್ಯಾಂಡ್ ಆಫರ್ ರೂ. 4500ಕ್ಕೆ ಮೈಸೂರು ರೇಷ್ಮೆ ಸೀರೆ

June 30, 2018

ಮೈಸೂರು: ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಕರ್ನಾಟಕ ರೇಷ್ಮೆ ಉದ್ಯಮ ನಿಗಮದ (ಕೆಎಸ್‍ಐಸಿ) ವತಿಯಿಂದ ಉಡುಗೊರೆಯಾಗಿ ಕೇವಲ 4.500 ರೂ.ಗೆ ಮೈಸೂರು ಸಿಲ್ಕ್ ಸೀರೆಗಳ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರವಾ ಸೋಧ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶುಕ್ರವಾರ ಸಂವಾದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ರೇಷ್ಮೆ ಸೀರೆಗಳು ಉತ್ತಮ ಗುಣಮಟ್ಟದೊಂದಿಗೆ ವಿಶ್ವ ಪ್ರಸಿದ್ಧಿ ಪಡೆದಿವೆ. ಮೈಸೂರಿನಲ್ಲಿರುವ ರೇಷ್ಮೆ ಉದ್ಯಮ ನಿಗಮ ದಲ್ಲಿ ಸುಮಾರು 50 ಸಾವಿರದಿಂದ ಎರಡೂ ವರೆ ಲಕ್ಷದ ಮುಖಬೆಲೆಯ ಸೀರೆಗಳನ್ನು ಉತ್ಪಾದಿಸಲಾಗುತ್ತಿದೆ. ಇದುವರೆಗೆ ಉಳ್ಳವ ರಿಗೆ ಮಾತ್ರ ಮೈಸೂರು ರೇಷ್ಮೆ ಸೀರೆಗಳು ಸಿಗುತ್ತವೆ ಎಂಬ ಮಾತಿತ್ತು. ಆದರೆ ವರಮಹಾಲಕ್ಷ್ಮಿ ಹಬ್ಬದ ಸಂದರ್ಭ 4500 ರೂ.ಗೆ ಮೈಸೂರು ರೇಷ್ಮೆ ಸೀರೆ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಸೀರೆಗಳ ಉತ್ಪಾದನಾ ಕಾರ್ಯ ಆರಂಭವಾಗಿದೆ ಎಂದರು. ಬೇಡಿಕೆಗನು ಗುಣವಾಗಿ 4500 ರೂ.ಗಳಿಗೆ ರೇಷ್ಮೆ ಸೀರೆಗಳನ್ನು ಮಾರಾಟ ಮಾಡಲಾಗುತ್ತದೆ. ಈ ಯೋಜನೆ ದುರುಪಯೋಗವಾಗದಂತೆ ಒಬ್ಬರಿಗೆ ಒಂದೇ ಸೀರೆ ನೀಡಲಾಗುತ್ತದೆ.

ಕೆಎಸ್‍ಐಸಿ ವತಿಯಿಂದ ವಿವಿಧೆಡೆ ತೆರೆದಿರುವ ಮಳಿಗೆಗಳನ್ನು ಪುನಶ್ಚೇತನಗೊಳಿ ಸಲು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಪ್ರವಾಸಿ ತಾಣಗಳಲ್ಲಿಯೂ ಕೆಎಸ್‍ಐಸಿಯ ಹೊಸ ಮಳಿಗೆಗಳನ್ನು ಸ್ಥಾಪಿಸಿ, ಮೈಸೂರು ಸಿಲ್ಕ್ ಸೀರೆಗಳ ಮಾರಾಟಕ್ಕೆ ಉದ್ದೇಶಿಸ ಲಾಗಿದೆ. ಮೊದಲ ಹಂತದಲ್ಲಿ ಕೆಆರ್‍ಎಸ್, ಬಾದಾಮಿ, ಐಹೊಳೆ, ಹಳೆಬೀಡು ಸೇರಿದಂತೆ ಇನ್ನಿತರೆಡೆಗಳಲ್ಲಿ ಮಳಿಗೆ ತೆರೆಯಲಾಗುತ್ತದೆ ಎಂದು ವಿವರಿಸಿದರು.

ಖಾಸಗಿ ಮಳಿಗೆಗಳಲ್ಲಿ ಮಾರಾಟವಿಲ್ಲ: ಕೆಎಸ್‍ಐಸಿ ಮಳಿಗೆ ಹೊರತುಪಡಿಸಿ ಖಾಸಗಿ ಮಳಿಗೆಗಳಲ್ಲಿ ಮೈಸೂರು ಸಿಲ್ಕ್ ಸೀರೆಗಳ ಮಾರಾಟ ಮಾಡುತ್ತಿಲ್ಲ. ಕೆಲವು ಪ್ರವಾಸಿ ತಾಣಗಳಲ್ಲಿ ಮೈಸೂರು ಸಿಲ್ಕ್ ಸೀರೆಗಳೆಂದು ಬೇರೆ ಸೀರೆಗಳನ್ನು ಮಾರಾಟ ಮಾಡಲಾಗುತ್ತಿರುವುದು ಗಮನಕ್ಕೆ ಬಂದಿದೆ. ಮೈಸೂರು ಸಿಲ್ಕ್ ಪೇಟೆಂಟ್ ಇರುವುದು ಕೆಎಸ್‍ಐಸಿಗೆ ಮಾತ್ರ. ಆ ಹೆಸರಿನಲ್ಲಿ ಖಾಸಗಿ ಮಳಿಗೆಗಳಲ್ಲಿ ಸೀರೆ ಮಾರಾಟ ಮಾಡುವಾಗ ಸಿಕ್ಕಿ ಬಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಶೀಘ್ರದಲ್ಲಿ ಮೈಸೂರು ಸಿಲ್ಕ್ ಸೀರೆಗಳೆಂದು ಮಾರಾಟ ಮಾಡುತ್ತಿರುವ ಅಂಗಡಿಗಳ ಮಾಲೀಕರಿಗೆ ಕರೆದು ಜಾಗೃತಿ ಮೂಡಿಸಲಾಗುತ್ತದೆ. ನಂತರ ಅವರು ಎಚ್ಚೆತ್ತುಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಮೈಸೂರು ಸಿಲ್ಕ್ ಹೆಸರಿನಲ್ಲಿ ಸೀರೆ ಮಾರಾಟ ಮಾಡುವುದನ್ನು ತಡೆಗಟ್ಟಲು ಜಾಗೃತ ದಳ ರಚಿಸುತ್ತಿರುವುದಾಗಿ ಎಚ್ಚರಿಸಿದರು.

ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ರೇಷ್ಮೆ ಕಾರ್ಖಾನೆಯಲ್ಲಿ ಉತ್ಪಾದನೆಯಾಗುತ್ತಿರುವ ಮೈಸೂರು ರೇಷ್ಮೆ ಸೀರೆಗಳಿಗೆ ಉತ್ತಮ ಬೇಡಿಕೆಯಿದೆ. ಬೇಡಿಕೆಗನುಗುಣವಾಗಿ ಸೀರೆ ಪೂರೈಸುವುದಕ್ಕಾಗಿ ಕೆಎಸ್‍ಐಸಿ ಆವರಣದಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ಹೊಸ ಉತ್ಪಾದನಾ ಘಟಕವನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸಿದ್ದತೆ ಮಾಡಿಕೊಳ್ಳ ಲಾಗಿದೆ. ಅಲ್ಲದೆ ರಾಮನಗರ ಮತ್ತು ಚನ್ನಪಟ್ಟಣದಂತೆ ಮೈಸೂರಿನಲ್ಲಿಯೂ ರೇಷ್ಮೆ ಮಾರುಕಟ್ಟೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಿಂದ ಮೈಸೂರು ಭಾಗದಲ್ಲಿರುವ ರೇಷ್ಮೆ ಬೆಳೆಗಾರರಿಗೆ ನೆರವಾಗುತ್ತದೆ ಎಂದು ಹೇಳಿದರು.

 

Translate »