ಮೈಸೂರು ರೇಷ್ಮೆ ಸೀರೆಗೆ ಮುಗಿಬಿದ್ದ ಮಹಿಳೆಯರು
ಮೈಸೂರು

ಮೈಸೂರು ರೇಷ್ಮೆ ಸೀರೆಗೆ ಮುಗಿಬಿದ್ದ ಮಹಿಳೆಯರು

September 12, 2018

ಮೈಸೂರು: ಗೌರಿ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕ ರೇಷ್ಮೆ ಉದ್ಯಮ ನಿಗಮ (ಕೆಎಸ್‍ಐಸಿ) ಮಂಗಳವಾರ ಆರಂಭಿಸಿದ ರಿಯಾಯಿತಿ ದರದ ಮೈಸೂರು ರೇಷ್ಮೆ ಸೀರೆ ಕೊಳ್ಳಲು ಮಹಿಳೆಯರು ಮುಗಿಬಿದ್ದರು. ಹಾಗಾಗಿ ಪೊಲೀಸರು ಹಾಗೂ ಕೆಎಸ್‍ಐಸಿ ಅಧಿಕಾರಿಗಳು ಪರಿಸ್ಥಿತಿ ನಿರ್ವ ಹಣೆಗೆ ಹೆಣಗಾಡಿದರು. ಮೈಸೂರಿನ ಇಟ್ಟಿಗೆಗೂಡಿ ನಲ್ಲಿರುವ ಕೆಎಸ್‍ಐಸಿ ಮಳಿಗೆ(ಮೃಗಾಲಯದ ಬಳಿ)ಯಲ್ಲಿ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಮಾರಾಟ ಆರಂಭಿಸಿದ್ದು, ಸೀರೆ ಕೊಳ್ಳಲು ಮಹಿಳೆಯರು, ಯುವತಿ ಯರು ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತರು.

ರೇಷ್ಮೆ ಸಚಿವ ಸಾ.ರಾ.ಮಹೇಶ್, ವರಮಹಾಲಕ್ಷ್ಮಿ ಹಬ್ಬಕ್ಕೆ ರೂ. 4500ಕ್ಕೆ ರಿಯಾಯಿತಿ ದರದಲ್ಲಿ ಮೈಸೂರು ರೇಷ್ಮೆ ಸೀರೆಯನ್ನು ನೀಡುವುದಾಗಿ ಘೋಷಿಸಿದ್ದರು. ಆದರೆ ನಗರ ಪಾಲಿಕೆಯ ಚುನಾವಣೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿದ್ದ ರಿಂದ ಸೀರೆ ವಿತರಣೆಗೆ ಅಡ್ಡಿಯಾಗಿತ್ತು.

ವರಮಹಾಲಕ್ಷ್ಮೀ ಹಬ್ಬಕ್ಕೆ ಮಾರಾಟಮಾಡಲು ಸಿದ್ಧಪಡಿಸಿಕೊಂಡಿದ್ದ ಸೀರೆಗಳನ್ನು ಗೌರಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಸಚಿವ ಸಾ.ರಾ.ಮಹೇಶ್ ಅವರ ಸೂಚನೆಯ ಮೇರೆಗೆ ಕೆಎಸ್‍ಐಸಿ ಮಾರಾಟ ಮಾಡಲು ನಿರ್ಧರಿಸಿತ್ತು. ಇಂದು ಮೃಗಾಲಯದ ಬಳಿಯ ಮಳಿಗೆಯಲ್ಲಿ ರಿಯಾಯಿತಿ ದರದ ಸೀರೆ ಮಾರಾಟದ ಸುದ್ದಿ ತಿಳಿದು ಮೈಸೂರಿನ ವಿವಿಧ ಬಡಾವಣೆಗಳಿಂದ ಭಾರೀ ಸಂಖ್ಯೆ ಮಹಿಳೆಯರು ಆಧಾರ್ ಕಾರ್ಡ್ ಹಿಡಿದು ಸರದಿ ಸಾಲಿನಲ್ಲಿ ನಿಂತರು.

ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರಿಂದ ಕೆಎಸ್‍ಐಸಿ ಅಧಿಕಾರಿಗಳು ಟೋಕನ್ ನೀಡಿ, ಈ ಮಳಿಗೆಯಲ್ಲಿ 1500 ಸೀರೆ ಮಾತ್ರ ವಿತರಿಸುತ್ತೇವೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ. ಮಹಿಳೆಯರು ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು. ಒಬ್ಬರಿಗೆ ಒಂದೇ ಸೀರೆ ನೀಡಲಾಗುತ್ತದೆ. ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ಮಧ್ಯಾಹ್ನ 3 ಗಂಟೆಯ ನಂತರ ನೋಂದಣಿ ಪ್ರಕ್ರಿಯೆ ನಿಲ್ಲಿಸುವುದಾಗಿ ಪ್ರಕಟಿಸಿದರು.

ಸೀರೆಗಾಗಿ ಪ್ರತಿಭಟನೆ: ಮಧ್ಯಾಹ್ನ 3 ಗಂಟೆಯಾದರೂ ಮಹಿಳೆಯರು ಆಗಮಿಸುತ್ತಲೇ ಇದ್ದ ಹಿನ್ನೆಲೆಯಲ್ಲಿ ಕಂಗೆಟ್ಟ ಅಧಿಕಾರಿಗಳು ಕೊನೆಗೆ ಲಾಟರಿ ಎತ್ತುವ ಮೂಲಕ ಸೀರೆ ನೀಡುವುದಾಗಿ ಘೋಷಿಸಿದರು. ಇದರಿಂದ ಅಸಮಾಧಾನಗೊಂಡ ಮಹಿಳೆಯರು, ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಪ್ರತಿಭಟನೆಗೆ ಮುಂದಾದರು. ಸೀರೆ ವಿತರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸುವ ಸಮಯ ಸಮೀಪಿಸುತ್ತಿದ್ದಂತೆ, ಮಹಿಳೆಯರು ಪ್ರತಿಭಟನೆಗೆ ಮುಂದಾಗಿದ್ದರಿಂದ ಪರಿಸ್ಥಿತಿ ಕೈಮೀರಬಹುದು. ಜೊತೆಗೆ ಮುಖ್ಯಮಂತ್ರಿಗಳು ಬಂದಾಗ ಮುಜುಗರವಾಗಬಾರದೆಂಬ ಉದ್ದೇಶದಿಂದ ಲಾಟರಿ ಎತ್ತುವ ಪ್ರಕ್ರಿಯೆ ಕೈಬಿಡುವುದಾಗಿ ಘೋಷಿಸಿದರಲ್ಲದೆ, ಮೊದಲು ಬಂದು ನೋಂದಣಿ ಮಾಡಿಸಿ, ಟೋಕನ್ ಪಡೆದಿದ್ದವರಿಗೆ ಸೀರೆ ನೀಡುವುದಾಗಿ ಪ್ರಕಟಿಸಿದರು.

ಉದ್ದನೆಯ ಸಾಲು: ಮೈಸೂರು ರೇಷ್ಮೆ ಸೀರೆಗಾಗಿ ವಿವಿಧ ಬಡಾವಣೆಗಳಿಂದ ಸಾವಿರಾರು ಮಹಿಳೆಯರು, ಯುವತಿಯರು, ವೃದ್ಧೆಯರು ಏಕ ಕಾಲಕ್ಕೆ ಇಟ್ಟಿಗೆಗೂಡಿನ ಕೆಎಸ್‍ಐಸಿ ಮಳಿಗೆಯತ್ತ ಆಗಮಿಸಿದಾಗ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಯಿತು. ಮಳಿಗೆಯಿಂದ ಮಹಿಳೆಯರ ಸರದಿ ಸಾಲು ಇಟ್ಟಿಗೆಗೂಡಿನ ಮುಖ್ಯ ರಸ್ತೆ ಹಾದು ದೇವರಾಜ ಅರಸ್ ವಿವಿಧೋದ್ದೇಶ ಕ್ರೀಡಾಂಗಣ ರಸ್ತೆಯವರೆಗೂ ವಿಸ್ತರಿಸಿತು. ಹಾಗಾಗಿ ಮೃಗಾಲಯದ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಬಿಸಿಲಿನಲ್ಲಿ ಬಸವಳಿದು, ಕೊನೆಗೆ ಮಳೆಯಲ್ಲಿ ತೋಯ್ದರು: ರೇಷ್ಮೆ ಸೀರೆ ಆಸೆಯಿಂದ ಮಹಿಳೆಯರು ಬೆಳಿಗ್ಗೆ ಬಿಸಿಲಿನಿಂದ ಬಸವಳಿದಿದ್ದರು. ಆದರೂ ಸಾಲಿನಿಂದ ಕದಲದೆ ಸೀರೆ ಪಡೆಯಲೇಬೇಕೆಂದು ನಿಂತಿದ್ದರು. ಮಧ್ಯಾಹ್ನ 3 ಗಂಟೆಯಾಗುತ್ತಿದ್ದಂತೆ ದಿಢೀರ್ ಮಳೆ ಬಂದರೂ ಮಹಿಳೆಯರು ಮಾತ್ರ ಕದಲಲಿಲ್ಲ.

Translate »