ನಾವೇ ಮೈತ್ರಿ ಸರ್ಕಾರ ಪತನಕ್ಕೆ ಡೆಡ್‍ಲೈನ್ ಫಿಕ್ಸ್ ಮಾಡ್ತೇವೆ
ಮೈಸೂರು

ನಾವೇ ಮೈತ್ರಿ ಸರ್ಕಾರ ಪತನಕ್ಕೆ ಡೆಡ್‍ಲೈನ್ ಫಿಕ್ಸ್ ಮಾಡ್ತೇವೆ

September 12, 2018

ಬೆಂಗಳೂರು: ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೂಗು ತೂರಿಸುವುದನ್ನು ನಿಲ್ಲಿಸದೇ ಇದ್ದರೆ ಸಮ್ಮಿಶ್ರ ಸರ್ಕಾರ ಪತನಕ್ಕೆ ನಾನೇ ಡೆಡ್‍ಲೈನ್ ಫಿಕ್ಸ್ ಮಾಡಬೇಕಾಗುತ್ತದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಗೃಹ ಇಲಾಖೆ ಹೊಣೆ ಹೊತ್ತಿರುವ ಉಪ ಮುಖ್ಯಮಂತ್ರಿ ಡಾ|| ಜಿ. ಪರಮೇಶ್ವರ್ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಜೊತೆ ಸುದೀರ್ಘ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕಾರಣದಲ್ಲಿ ನಮಗೂ ತಾಕತ್ತಿದೆ, ಅದನ್ನು ಪ್ರದರ್ಶಿಸಲು ಅವಕಾಶ ನೀಡಬೇಡಿ ಎಂದು ಧಮ್ಕಿ ಹಾಕಿದರು.

ತಮ್ಮ ನಾಯಕರ ಭೇಟಿ ಸಂದರ್ಭದಲ್ಲಿ ಜಿಲ್ಲೆಯ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಯಲ್ಲಿ ತಮ್ಮ ಬಣಕ್ಕೆ ಮುಖಭಂಗವಾಗಿದೆ. ನಮಗಾಗಿರುವ ಅವಮಾನವನ್ನು ಪಕ್ಷದ ವರಿಷ್ಠರೇ ಸರಿಪಡಿಸಬೇಕು. ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ರಾಜ್ಯ ಮಹಿಳಾ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಬೇಕು, ಮುಂದಿನ ದಿನಗಳಲ್ಲಿ ಅವರಿಗೆ ಮತ್ತು ಅವರ ಬಣಕ್ಕೆ ಯಾವುದೇ ಸ್ಥಾನಮಾನ ನೀಡಬಾರದು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಗಳ ಚುನಾ ವಣೆಯಲ್ಲಿ ತಾವು ಹೇಳಿದವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು. ಸಚಿವ ಸಂಪುಟ ವಿಸ್ತರಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಯಾವುದೇ ಕಾರಣಕ್ಕೂ ಪರಿಗಣಿಸಬಾರದು. ಪ್ರಮುಖವಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಬೆಂಗಳೂರಿನ ಯಾವ ನಾಯಕರೂ ಬೆಳಗಾವಿಯ ಯಾವುದೇ ರಾಜಕಾರಣದಲ್ಲೂ ಮೂಗು ತೂರಿಸಬಾರದು ಎಂಬ ಷರತ್ತುಗಳನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ನಾವು ಈವರೆಗೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದೇವೆ, ಪಕ್ಷ ಬಿಡುವ ಆಲೋಚನೆ ನಮ್ಮ ಮುಂದಿಲ್ಲ. ಆದರೆ, ಕಾಂಗ್ರೆಸ್‍ನಲ್ಲಿ ನಮ್ಮನ್ನು ಮೂಲೆಗುಂಪು ಮಾಡುವುದಾದರೆ ನಾವೇಕೆ ಪಕ್ಷ ಸಂಘಟಿಸಬೇಕು? ಎಂದು ರಮೇಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ತಮ್ಮ ಸಹೋದರ ಸತೀಶ್ ಜಾರಕಿಹೊಳಿಯನ್ನು ಕಾಂಗ್ರೆಸ್ ಉದ್ದೇಶಪೂರ್ವಕವಾಗಿಯೇ ಮೂಲೆ ಗುಂಪು ಮಾಡಿದೆ. ನಾವೇ ಬೆಳೆಸಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಮುಂದಿಟ್ಟುಕೊಂಡು ಜಿಲ್ಲೆಯಲ್ಲಿ ನಮ್ಮ ಪ್ರಭಾವವನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ನಾವು ಇದನ್ನು ಸಹಿಸುವುದಿಲ್ಲ. ನಿಮ್ಮಿಂದ ನಮಗೆ ಸ್ಪಷ್ಟ ಭರವಸೆ ಸಿಕ್ಕರೆ ಮಾತ್ರ ಮೌನವಾಗಿರುತ್ತೇವೆ. ಇಲ್ಲವಾದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ. ಇಂತಹ ಬೆಳವಣಿಗೆಯಿಂದ ರಾಜ್ಯ ಸರ್ಕಾರದ ಮೇಲೆ ಯಾವುದೇ ಪರಿಣಾಮ ಉಂಟಾದರೂ ನಾವು ಹೊಣೆಗಾರರಲ್ಲ ಎಂಬ ಮುನ್ನೆಚ್ಚರಿಕೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಜಾರಕಿಹೊಳಿ ಅವರ ಮಾತುಗಳನ್ನು ಆಲಿಸಿದ ಪಕ್ಷದ ರಾಜ್ಯ ನಾಯಕರು, ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ಆದಷ್ಟು ಶೀಘ್ರ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜತೆ ಚರ್ಚಿಸಲು ಸಮಯ ನಿಗದಿಪಡಿಸುವ ಭರವಸೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Translate »