ಎಂಆರ್‍ಸಿಯೊಂದಿಗೆ ಅಂಬಿ ಬಹು ವರ್ಷದ ಸಂಬಂಧ
ಮೈಸೂರು

ಎಂಆರ್‍ಸಿಯೊಂದಿಗೆ ಅಂಬಿ ಬಹು ವರ್ಷದ ಸಂಬಂಧ

November 26, 2018

ಮೈಸೂರು: ಅಂಬರೀಶ್ ಅವರಿಗೆ ಕುದುರೆ ರೇಸ್ ಎಂದರೆ ಬಲು ಇಷ್ಟ. ತಮ್ಮ ವಿದ್ಯಾರ್ಥಿ ದಿಸೆಯಲ್ಲೇ ಶೂ, ಕೂಲಿಂಗ್ ಗ್ಲಾಸ್‍ನಲ್ಲೇ ಮಿಂಚುತ್ತಿದ್ದ ಅಂಬಿ, ಮೈಸೂರಿನ ಧನ್ವಂತರಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಮಹಾರಾಣಿ ಕಾಲೇಜು ಸುತ್ತಲಿನ ರಸ್ತೆಗಳು, ಚಾಮುಂಡಿಪುರಂ ಸರ್ಕಲ್‍ನಲ್ಲಿ ಸದಾ ಅಡ್ಡಾಡುತ್ತಿದ್ದರಂತೆ.

ಕಾರು ಓಡಿಸುವ ಕ್ರೇಜ್ ಹೆಚ್ಚಾಗಿದ್ದ ಅಂಬಿ, ಅಜೀಜ್ ಸೇಟ್‍ರಂತೆ ಸಿಗರೇಟ್ ಹಚ್ಚಿಕೊಂಡು ಮೈಸೂರಿನ ರಸ್ತೆಗಳಲ್ಲಿ ಕಾರು ಚಾಲನೆ ಮಾಡುವುದೆಂದರೆ ಬಲು ಇಷ್ಟ ಎಂದು ಅವರನ್ನು ಹತ್ತಿರದಿಂದ ಬಲ್ಲ ಹಿರಿಯರಾದ ಕೃಷ್ಣಪ್ಪ ಹೇಳುತ್ತಾರೆ.
ಇನ್ನು ಮೈಸೂರು ರೇಸ್ ಕ್ಲಬ್(ಎಂಆರ್‍ಸಿ)ನ ಹಿರಿಯ ಸದಸ್ಯರಾಗಿದ್ದ ಅಂಬರೀಶ್ ಅದೆಂತಹಾ ಬ್ಯುಸಿ ಇದ್ದರೂ, ಪ್ರಮುಖ ರೇಸ್‍ಗಳಿಗೆ ಮಿಸ್ ಮಾಡುತ್ತಿರಲಿಲ್ಲ. ರೇಸ್ ಪಂದ್ಯ ನೋಡುವುದೆಂದರೆ ಅವರಿಗೆ ತುಂಬಾ ಇಷ್ಟ ಎಂದು ಎಂಆರ್‍ಸಿ ಕಾರ್ಯದರ್ಶಿ ಕೆ.ಜಿ.ಅನಂತರಾಜ್ ಅರಸ್ ತಿಳಿಸಿದ್ದಾರೆ. ಪ್ರತೀ ಜನರಲ್ ಬಾಡಿ ಮೀಟಿಂಗ್‍ಗೂ ಬರುತ್ತಿದ್ದರು, ಆಗಿಂದಾಗ್ಗೆ ಕ್ಲಬ್‍ನ ಚಟುವಟಿಕೆಗಳ ಬಗ್ಗೆ ಸಲಹೆ-ಮಾರ್ಗದರ್ಶನ ನೀಡುತ್ತಿದ್ದರು. ಅದೇ ರೀತಿಯಲ್ಲಿ ಕ್ಲಬ್‍ನ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ಇತರ ಸದಸ್ಯರೊಂದಿಗೆ ಲೋಕಾಭಿರಾಮವಾಗಿ ಮಾತನಾಡಿಕೊಂಡು ಹಾಯಾಗಿ ರುತ್ತಿದ್ದರು ಎಂದು ಅನಂತರಾಜ್ ಅರಸ್ ಹೇಳಿದ್ದಾರೆ. ಅವರು ಮೈಸೂರಲ್ಲಿ ‘ನಾಗರ ಹಾವು’ ಚಿತ್ರದ ಶೂಟಿಂಗ್ ಮಾಡುತ್ತಿದ್ದಾಗ ಸಯ್ಯಾಜಿರಾವ್ ರಸ್ತೆಯಲ್ಲಿರುವ ದೇವರಾಜ ಮಾರುಕಟ್ಟೆ ಕಟ್ಟಡದಲ್ಲಿದ್ದ ಫೋನೋ ಅಂಡ್ ಜನರಲ್ ಸ್ಟೋರ್ಸ್(ಈಗ ಆ ಅಂಗಡಿ ಇಲ್ಲ)ನ ಮಾಲೀಕ ಎಲ್.ಟಿ.ಪ್ರಕಾಶ್, ಮುಖೇಶ್ ಮತ್ತು ಲೀಲಾರಾಂ ಅವರನ್ನು ನೋಡ ಲೆಂದು ಅಂಬರೀಶ್ ಬರುತ್ತಿದ್ದರು. ನಾನೂ ಸಹ ಅಲ್ಲಿಗೆ ಹೋಗುತ್ತಿದ್ದರಿಂದ ಅವರ ಪರಿಚಯವಾಗಿತ್ತು ಎಂದು ಅನಂತರಾಜ್ ಅರಸ್ ತಮ್ಮ ಪರಿಚಯವನ್ನು ಹಂಚಿಕೊಂಡರು.

1978ರಿಂದಲೇ ಅಂಬರೀಶ್ ಎಂಆರ್‍ಸಿ ಮೆಂಬರ್ ಆಗಿದ್ದರು. ಅವರ ನಿಧನದಿಂದಾಗಿ ಒಬ್ಬ ಸಹೃದಯಿ ಗೆಳೆಯನನ್ನು ಕಳೆದುಕೊಂಡಂತಾಗಿದೆಯಲ್ಲದೆ ಇಡೀ ನಾಡಿಗೇ ತುಂಬಲಾರದ ನಷ್ಟವಾಗಿದೆ. ಅಂಬರೀಶ್ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದಷ್ಟೇ ನಾವು ದೇವರಲ್ಲಿ ಪ್ರಾರ್ಥಿಸಬೇಕಾಗುತ್ತದೆ ಎಂದು ಅವರು ನೊಂದು ನುಡಿದರು. ಈಗಿನ ಶೃಂಗಾರ್ ಹೋಟೆಲ್ ಸರ್ಕಲ್‍ನ ನಂಜ ರಾಜ ಬಹದ್ದೂರ್ ಛತ್ರದ ಕಾರ್ನರ್‍ನಲ್ಲಿದ್ದ ಫೌಂಟನ್ ಕೆಫೆ ಟೀ ಅಂಗಡಿಯಲ್ಲಿ ಅಂಬರೀಶ್ ತಮ್ಮ ವಿದ್ಯಾರ್ಥಿ ದಿಸೆಯಲ್ಲಿ ಸ್ನೇಹಿತರೊಂದಿಗೆ ಸದಾ ಟೀ ಕುಡಿದು ಸಿಗರೇಟ್ ಸೇದುತ್ತಿದ್ದರು. ಆದರೆ ಆ ಟೀ ಶಾಪ್ ಅನ್ನು ಬೇರೆಡೆ ಸ್ಥಳಾಂತರಿಸಲಾಗಿದೆಯಾದರೂ ಅಂಬರೀಶ್ ಅವರ ಹಳೆಯ ಖದರ್ ಅನ್ನು ಸ್ಥಳೀಯರು ಮರೆತಿಲ್ಲ.

Translate »