ಪ್ರೀತಿಯ ಮೊಮ್ಮಗನನ್ನು `ಕೂಸೆ’  ಎನ್ನುತ್ತಿದ್ದರು ಪಿಟೀಲು ಚೌಡಯ್ಯ!
ಮೈಸೂರು

ಪ್ರೀತಿಯ ಮೊಮ್ಮಗನನ್ನು `ಕೂಸೆ’ ಎನ್ನುತ್ತಿದ್ದರು ಪಿಟೀಲು ಚೌಡಯ್ಯ!

November 27, 2018

ಮೈಸೂರು:  ಒರಟು ತನದಿಂದಲೇ ಲಕ್ಷಾಂತರ ಹೃದಯಗಳನ್ನು ಗೆದ್ದ `ಒಂಟಿ ಸಲಗ’ ಅಂಬರೀಶ್. ರಾಜನಂತೆ ಬೆಳೆದು, ರಾಜನಂತೆಯೇ ಬದುಕು ಮುಗಿಸಿದ ಎಂದು ಅವರ ಗೆಳೆಯ ರಜನಿಕಾಂತ್ ಹೇಳಿದ್ದು ಅಕ್ಷರಶಃ ಸತ್ಯ. ಅಂಬರೀಶ್ ಅವರ ನೇರಾನೇರ ಕಟುವಾದ ಮಾತುಗಳು ಯಾರ ಮನಸ್ಸನ್ನೂ ನೋಯಿಸಲಿಲ್ಲ. ಬದಲಾಗಿ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದವು.

ಅರಮನೆ ವಿದ್ವಾನರಾಗಿದ್ದ ಪಿಟೀಲು ಚೌಡಯ್ಯ ಅವರು, ತಮ್ಮ ಪ್ರೀತಿಯ ಮೊಮ್ಮಗ ಅಮರ್‍ನಾಥ್ (ಅಂಬರೀಶ್)ರನ್ನು `ಕೂಸೆ’ ಎಂದು ಕರೆಯುತ್ತಿದ್ದರಂತೆ. ಮುಂದೆ ರಾಜ ನಂತೆ ಬದುಕುತ್ತಾನೆಂಬ ನಂಬಿಕೆಯಿಂ ದಲೋ ಏನೋ ಅಂಬರೀಶ್ ಅವರಿಗೆ ಜಯಚಾಮರಾಜ ಒಡೆಯರ್ ಧಿರಿಸಿನ ಮಾದರಿ ಬಟ್ಟೆ ಹೊಲಿಸಿದ್ದರಂತೆ. ಆಗಾಗ ಆ ಬಟ್ಟೆ ತೊಡಿಸಿ, ಖುಷಿ ಪಡುತ್ತಿದ್ದರಂತೆ.

ಮರೆಯಾದ ದಿಗ್ಗಜರು: `ದಿಗ್ಗಜರು’ ಚಿತ್ರದಲ್ಲಿ ಸ್ನೇಹಿತರಾಗಿ ನಟಿಸಿರುವ ಮೈಸೂರಿನ ಮಗ ವಿಷ್ಣುವರ್ದನ್ ಹಾಗೂ ಮೊಮ್ಮಗ ಅಂಬರೀಶ್ ನಿಜಕ್ಕೂ ಕುಚುಕು ಗೆಳೆಯ ರಾಗಿದ್ದರೆಂದು ಎಲ್ಲರಿಗೂ ಗೊತ್ತು. ಎರಡು ದೇಹ ಒಂದೇ ಮನಸ್ಸಿನಂತಿದ್ದ ಇವರಿಬ್ಬರೂ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ, ಮಾನಸಗಂಗೋತ್ರಿ ಕ್ಯಾಂಪಸ್, ಬಲಮುರಿ, ಎಡಮುರಿ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಓಡಾಡುತ್ತಿದ್ದರಂತೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ `ನಾಗರ ಹಾವು’ ಚಿತ್ರದ ಮೂಲಕ ಈ ದಿಗ್ಗಜರು ಒಟ್ಟಿಗೆ ಚಿತ್ರರಂಗ ಪ್ರವೇಶಿಸಿ, ಮೈಲಿಗಲ್ಲಾದರು.

ಊಟ ಮಾಡಿಸುವುದೆಂದರೆ ಖುಷಿ: ಅಂಬರೀಶ್ ಅವರನ್ನು ಭೇಟಿಯಾದವರು ಊಟ ಮಾಡಿಕೊಂಡೇ ಬರಬೇಕಿತ್ತು. ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಅಲ್ಲಿಗೆ ಬರುತ್ತಿದ್ದ ಸ್ನೇಹಿತರಿಗೆ ಅಲ್ಲಿಯೇ ಊಟ ಮಾಡಿಸುತ್ತಿದ್ದರು. ಕೆಲವೊಮ್ಮೆ ಹೋಟೆಲ್‍ಗೆ ಕರೆದುಕೊಂಡು ಹೋಗುತ್ತಿದ್ದರು. ಮೈಸೂರಿಗೆ ತಮಿಳುನಾಡಿನಿಂದ ಶೂಟಿಂಗ್‍ಗೆ ಬಂದಿದ್ದ ಸುಮಾರು 25 ಜನರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ, ಊಟ ಮಾಡಿಸಿ, ಕಳುಹಿಸಿದ್ದರಂತೆ.

ಕಾರು ಓಡಿಸೋ ಕ್ರೇಜ್: ವೇಗವಾಗಿ ಕಾರು ಓಡಿಸುವ ಕ್ರೇಜ್ ಅಂಬರೀಶ್ ಅವರಿ ಗಿತ್ತು. ಈ ಕಾರಣದಿಂದಲೇ ಅನೇಕ ಸ್ನೇಹಿತರು ಅಂಬರೀಶ್ ಅವರೊಂದಿಗೆ ಕಾರಿ ನಲ್ಲಿ ಹೋಗುತ್ತಿರಲಿಲ್ಲ. ಅಂಬರೀಶ್ ಹಾಗೂ ಮಾಜಿ ಸಚಿವ ದಿವಂಗತ ಅಜೀಜ್ ಸೇಠ್ ಆತ್ಮೀಯರಾಗಿದ್ದರು. ಒಮ್ಮೆ ತುರ್ತಾಗಿ ಮೈಸೂರಿಗೆ ಬರಬೇಕಿದ್ದ ಅಜೀಜ್‍ಸೇಠ್ ಅವರನ್ನು ಬೆಂಗಳೂರಿನಿಂದ ಮೈಸೂರಿಗೆ ಕೇವಲ 2 ಗಂಟೆ 10 ನಿಮಿಷದಲ್ಲಿ ಅಂಬರೀಶ್ ಕರೆತಂದಿದ್ದರಂತೆ. ಒಟ್ಟಾರೆ ತಮ್ಮಿಷ್ಟದಂತೆ ಬದುಕುವುದರ ಜೊತೆಗೆ ಎಲ್ಲ ರನ್ನೂ ತಮ್ಮವರನ್ನಾಗಿ ಕಂಡ ಅದ್ವಿತೀಯ ವ್ಯಕ್ತಿತ್ವ ಇದೀಗ ನೆನಪು ಮಾತ್ರ.

Translate »