ಅಭಿಮಾನಿ ಸಾಗರದ ಅಶ್ರುತರ್ಪಣದ ನಡುವೆ ಅಂಬರೀಶ್ ಲೀನ
ಮೈಸೂರು

ಅಭಿಮಾನಿ ಸಾಗರದ ಅಶ್ರುತರ್ಪಣದ ನಡುವೆ ಅಂಬರೀಶ್ ಲೀನ

November 27, 2018

ಬೆಂಗಳೂರು: ಶನಿವಾರ ರಾತ್ರಿ ನಿಧನರಾದ ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜ್‍ಕುಮಾರ್ ಸ್ಮಾರಕದ ಬಳಿ ಇಂದು ಸಂಜೆ ನೆರವೇರಿತು.

ಭಾನುವಾರ ಸಂಜೆ ಅಂಬರೀಶ್ ಅವರ ಪಾರ್ಥಿವ ಶರೀರ ವನ್ನು ಮಂಡ್ಯಕ್ಕೆ ಕೊಂಡೊಯ್ದು, ಅಲ್ಲಿನ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಇಂದು ಬೆಳಿಗ್ಗೆ 9 ಗಂಟೆ ವೇಳೆಗೆ ಪಾರ್ಥಿವ ಶರೀರವನ್ನು ಸೇನಾ ಹೆಲಿಕಾಪ್ಟರ್‍ನಲ್ಲಿ ಬೆಂಗಳೂರಿಗೆ ತರಬೇಕು ಎಂದು ಯೋಜನೆ ರೂಪಿಸಲಾಗಿತ್ತಾದರೂ, ತಡವಾಗಿ ಬೆಳಿಗ್ಗೆ 10.45ಕ್ಕೆ ಮಂಡ್ಯದಿಂದ ಅಂಬರೀಶ್ ಪಾರ್ಥಿವ ಶರೀರ ಹೊತ್ತಿದ್ದ ಸೇನಾ ಹೆಲಿಕಾಪ್ಟರ್ ಹಾರಾಟ ಆರಂಭಿಸಿತು.

ಇದಕ್ಕೂ ಮುನ್ನ ಅಂಬರೀಶ್ ಅವರ ಪುತ್ರ ಅಭಿಷೇಕ್ ಕ್ರೀಡಾಂಗಣದ ಸುತ್ತ ಕೈ ಮುಗಿಯುತ್ತಾ, ಪ್ರದಕ್ಷಿಣೆ ಹಾಕಿ ನೆರೆದಿದ್ದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ನಂತರ ಅಂಬರೀಶ್ ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಕ್ರೀಡಾಂಗಣದ ಮಣ್ಣನ್ನು ತೆಗೆದು ಅಂಬರೀಶ್ ಅವರ ಪಾರ್ಥಿವ ಶರೀರದ ಹಣೆ ಹಾಗೂ ಕೆನ್ನೆಗೆ ಲೇಪಿಸಿದರು. ಈ ದೃಶ್ಯ ಮನ ಕಲಕುವಂತಿತ್ತು.

ಪಾರ್ಥಿವ ಶರೀರವನ್ನು ಹೆಲಿಕಾಪ್ಟರ್‍ನಲ್ಲಿ ಇರಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಚಿವರುಗಳಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್ ಹಾಗೂ ಮಂಡ್ಯದ ಎಲ್ಲಾ ಶಾಸಕರು ಕ್ರೀಡಾಂಗಣದಿಂದ ನಿರ್ಗಮಿಸಿ, ರಸ್ತೆ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಅಂಬರೀಶ್ ಪಾರ್ಥಿವ ಶರೀರ ಹೊತ್ತಿದ್ದ ಹೆಲಿಕಾಪ್ಟರ್‍ನಲ್ಲಿ ಪತ್ನಿ ಸುಮಲತಾ, ಪುತ್ರ ಅಭಿಷೇಕ್, ಚಿತ್ರನಟ ಯಶ್ ಬೆಂಗಳೂರಿನತ್ತ ಹೊರಟರು. ಬೆಂಗಳೂರಿನ ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆದ ನಂತರ ಆಂಬುಲೆನ್ಸ್‍ನಲ್ಲಿ ಕಂಠೀರವ ಸ್ಟೇಡಿಯಂಗೆ ಪಾರ್ಥಿವ ಶರೀರ ಕೊಂಡೊಯ್ಯಲಾಯಿತು. ಅದಾಗಲೇ ಸಿದ್ಧವಾಗಿದ್ದ ಅಲಂಕೃತ ತೆರೆದ ವಾಹನದಲ್ಲಿ ಅಂಬರೀಶ್ ಪಾರ್ಥಿವ ಶರೀರವನ್ನಿಟ್ಟು ಅಂತಿಮ ಯಾತ್ರೆ ಆರಂಭವಾಯಿತು. ಕಂಠೀರವ ಸ್ಟೇಡಿಯಂಗೆ ಪಾರ್ಥಿವ ಶರೀರ ತಲುಪುವ ಮುನ್ನವೇ ಸಾವಿರಾರು ಅಭಿಮಾನಿಗಳು ನೆರೆದಿದ್ದರು.

ಅಂತಿಮ ಯಾತ್ರೆಯು ಅಭಿಮಾನಿಗಳ ಸಾಗರದ ನಡುವೆ ಕಂಠೀರವ ಸ್ಟೇಡಿಯಂನಿಂದ ಹೊರಟು ಹಲಸೂರು ಗೇಟ್ ಪೊಲೀಸ್ ಠಾಣೆ, ಕೆ.ಜಿ. ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಬಳ್ಳಾರಿ ರಸ್ತೆ, ಕಾವೇರಿ ಜಂಕ್ಷನ್, ಭಾಷ್ಯಂ ಸರ್ಕಲ್, ಸ್ಯಾಂಕಿ ರಸ್ತೆ, ಮಾರಮ್ಮ ಸರ್ಕಲ್, ಯಶವಂತಪುರ ಫ್ಲೈಓವರ್, ಆರ್‍ಎಂಸಿ ಯಾರ್ಡ್, ಗೊರಗುಂಟೆ ಪಾಳ್ಯದಿಂದ ಸಿಎಂಐಟಿ, ಎಫ್‍ಐಟಿ ರಸ್ತೆ ಮೂಲಕ ಸಂಜೆ ವೇಳೆಗೆ ಕಂಠೀರವ ಸ್ಟುಡಿಯೋ ತಲುಪಿತು. ಸ್ಟುಡಿಯೋ ಆವರಣದಲ್ಲಿ ಸಶಸ್ತ್ರ ಪಡೆ ಪೊಲೀಸರು ಸರ್ಕಾರಿ ಗೌರವವನ್ನು ಸಲ್ಲಿಸಿದರು.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಮಹಾರಾಷ್ಟ್ರ ಮಾಜಿ ಸಿಎಂ ಸುಶೀಲ್‍ಕುಮಾರ್ ಶಿಂಧೆ, ಕರ್ನಾಟಕ ಸಚಿವರುಗಳಾದ ಹೆಚ್.ಡಿ. ರೇವಣ್ಣ, ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್, ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಜಯಮಾಲಾ, ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ಹೆಚ್.ಸಿ. ಮಹದೇವಪ್ಪ, ಆಂಜನೇಯ, ಎನ್. ಚಲುವರಾಯಸ್ವಾಮಿ, ಎಂ.ಬಿ. ಪಾಟೀಲ್, ಎಸ್.ಎಸ್. ಮಲ್ಲಿಕಾರ್ಜುನ, ಗೋವಿಂದ ಕಾರಜೋಳ, ಮಾಜಿ ಡಿಸಿಎಂ ಆರ್. ಅಶೋಕ್, ಸಂಸದರಾದ ಎಲ್.ಆರ್. ಶಿವರಾಮೇಗೌಡ, ಡಿ.ಕೆ. ಸುರೇಶ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದ ಸ್ವಾಮೀಜಿ, ಬೆಂಗಳೂರು ಮೇಯರ್ ಗಂಗಾಂಬಿಕೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕರುಗಳಾದ ಎಸ್.ಟಿ. ಸೋಮಶೇಖರ್, ಶರವಣ, ಕುಮಾರ್ ಬಂಗಾರಪ್ಪ, ಹ್ಯಾರಿಸ್, ಚಿತ್ರರಂಗದ ಗಣ್ಯರುಗಳಾದ ಮೋಹನ್‍ಬಾಬು, ಬಿ. ಸರೋಜಾದೇವಿ, ಜಯಪ್ರದಾ, ರವಿಚಂದ್ರನ್, ಶಿವರಾಜ್‍ಕುಮಾರ್, ರಾಜೇಂದ್ರ ಸಿಂಗ್ ಬಾಬು, ಮುನಿರತ್ನ, ನಿಖಿಲ್ ಕುಮಾರಸ್ವಾಮಿ, ಯಶ್, ಪುನೀತ್ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ಜಗ್ಗೇಶ್, ದೊಡ್ಡಣ್ಣ, ಸಾಧು ಕೋಕಿಲ, ಗುರುಕಿರಣ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಅವರುಗಳು ಅಂಬರೀಶ್ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿಟ್ಟು ಗೌರವ ಸಲ್ಲಿಸಿದ ನಂತರ ಅಂತಿಮವಾಗಿ ಪೊಲೀಸ್ ಇಲಾಖೆ ಪರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ಅವರು ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿ, ಪಾರ್ಥಿವ ಶರೀರದ ಮೇಲಿದ್ದ ರಾಷ್ಟ್ರ ಧ್ವಜವನ್ನು ಅಂಬರೀಶ್ ಅವರ ಪತ್ನಿ ಸುಮಲತಾ ಅವರಿಗೆ ಒಪ್ಪಿಸಿದರು.

ನಂತರ ಅಂತಿಮ ವಿಧಿವಿಧಾನಗಳಿಗಾಗಿ ಪಾರ್ಥಿವ ಶರೀರವನ್ನು ಕುಟುಂಬದವರ ವಶಕ್ಕೆ ಒಪ್ಪಿಸಿದರು. ಪುರೋಹಿತರು ಮಂತ್ರ ಪಠಣದೊಂದಿಗೆ ವಿಧಿವಿಧಾನಗಳನ್ನು ಪೂರೈಸಿದರು. ಅಂಬರೀಶ್ ಪುತ್ರ ಅಭಿಷೇಕ್ ಅಂತ್ಯಕ್ರಿಯೆಯ ಅಂತಿಮ ಧಾರ್ಮಿಕ ವಿಧಿವಿಧಾನ ನೆರವೇರಿಸಿ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸಂಜೆ 6 ಗಂಟೆ ವೇಳೆಗೆ ರೆಬಲ್‍ಸ್ಟಾರ್ ಅಂಬರೀಶ್ ಪಂಚಭೂತಗಳಲ್ಲಿ ಲೀನವಾದರು.

ಕುಸಿದ ಸುಮಲತಾ

ಬೆಂಗಳೂರು: ಪತಿ ಅಗಲಿಕೆಯಿಂದ ದುಃಖತಪ್ತ ರಾಗಿದ್ದ ಅಂಬರೀಶ್ ಪತ್ನಿ ಸುಮಲತಾ ಅವರು ಪಾರ್ಥಿವ ಶರೀರ ಕಂಠೀರವ ಸ್ಟುಡಿಯೋ ತಲುಪುತ್ತಿದ್ದಂತೆಯೇ ಕುಸಿದು ಬಿದ್ದರು. ಈ ವೇಳೆ ಅವರ ಹತ್ತಿರದಲ್ಲೇ ಇದ್ದ ಸಚಿವ ಡಿ.ಕೆ. ಶಿವಕುಮಾರ್ ‘ಸರ್ಕಾರಿ ವೈದ್ಯರು ಅಥವಾ ಕುಟುಂಬ ವೈದ್ಯರು ಇದ್ದರೆ ತಕ್ಷಣ ಬನ್ನಿ’ ಎಂದು ಮೈಕ್‍ನಲ್ಲಿ ಕರೆದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ವೈದ್ಯರು ಸುಮಲತಾ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ, ಕುಡಿಯಲು ನೀರು ಕೊಟ್ಟ ನಂತರ ಅವರು ಚೇತರಿಸಿಕೊಂಡರು. ಇದೇ ವೇಳೆ ಅವರ ಜೊತೆಗಿದ್ದ ಕುಟುಂಬದ ಮಹಿಳೆಯೊಬ್ಬರು ಕೂಡ ಅಸ್ವಸ್ಥರಾಗಿದ್ದು, ಅವರಿಗೂ ಕೂಡ ಚಿಕಿತ್ಸೆ ನೀಡಲಾಯಿತು.

ಶನಿವಾರ ರಾತ್ರಿ ಅಂಬರೀಶ್ ನಿಧನರಾದ ಸಮಯದಿಂದಲೂ ಪತ್ನಿ ಸುಮಲತಾ ಪಾರ್ಥಿವ ಶರೀರದ ಜೊತೆಗೇ ಇದ್ದು, ಬಳಲಿದ್ದರು. ಸರಿಯಾಗಿ ಆಹಾರವನ್ನು ಕೂಡ ಸೇವಿಸದ ಕಾರಣ ಅವರು ಸ್ವಲ್ಪ ಮಟ್ಟಿಗೆ ಅಸ್ವಸ್ಥರಾದರೆಂದು ಹೇಳಲಾಗಿದೆ. ಚಿಕಿತ್ಸೆ ನಂತರ ಚೇತರಿಸಿಕೊಂಡ ಸುಮಲತಾ, ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಪಂಚಭೂತಗಳಲ್ಲಿ ಲೀನವಾಗು ವವರೆವಿಗೂ ಪಾರ್ಥಿವ ಶರೀರದ ಜೊತೆಗೇ ಇದ್ದರು.

Translate »