ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸ್ಮಾರಕ ಶತಃಸಿದ್ಧ
ಮೈಸೂರು

ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸ್ಮಾರಕ ಶತಃಸಿದ್ಧ

November 27, 2018

ಮಂಡ್ಯ: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಟ, ಮಾಜಿ ಸಚಿವ ಅಂಬರೀಶ್ ಸ್ಮಾರಕ ನಿರ್ಮಾಣ ಶತಃಸಿದ್ಧ. ಅವರ ಅಂತ್ಯಕ್ರಿಯೆ ಸ್ಥಳದ ಬಗ್ಗೆ ಪ್ರಶ್ನೆ ಎತ್ತಿ ಹೈ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ ವಕೀಲರಿಗೆ ದೇವರು ಸದ್ಬುದ್ಧಿ ಕೊಡಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ನಗರದ ಸರ್‍ಎಂವಿ ಕ್ರೀಡಾಂಗಣದಲ್ಲಿ ಅಂಬಿ ಅಂತಿಮ ದರ್ಶನದ ವೇಳೆ ಮಾತನಾಡಿದ ಅವರು, ಒಬ್ಬ ಕಲಾವಿದ ತಾನು ಬದುಕಿ ರುವವರೆಗೂ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಾನೆ. ಕಲೆಗೆ ಅಂಬರೀಶ್ ನೀಡಿರುವ ಕೊಡುಗೆ ಅಪಾರ. ಅವರ ಸ್ಮಾರಕವನ್ನು ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸುವುದು ಒಂದು ಗೌರವ ಎಂದು ಕುಮಾರ ಸ್ವಾಮಿ ಹೇಳಿದರು. ಅಂಬಿ ನನ್ನ ಆಪ್ತ ಸ್ನೇಹಿತರಲ್ಲಿ ಒಬ್ಬರೂ ಹೌದು. ಆಗಾಗ್ಗೆ ಕರೆ ಮಾಡಿ ಹುಷಾರಾಗಿರು, ಆರೋಗ್ಯ ನೋಡಿಕೊ. ನಿನ್ನ ಅವಶ್ಯಕತೆ ರಾಜ್ಯಕ್ಕಿದೆ ಎಂದು ಹೇಳುತ್ತಿದ್ದರು.

ನಿಜಕ್ಕೂ ಅವರನ್ನು ಕಳೆದುಕೊಂಡು ನನಗೆ ವೈಯಕ್ತಿಕವಾಗಿಯೂ ನಷ್ಟವಾಗಿದೆ ಶೋಕ ವ್ಯಕ್ತಪಡಿಸಿದರು. ಅವರ ನೆನಪಿಗಾಗಿ ಕೆಲವೊಂದು ಕಾರ್ಯಕ್ರಮ ಮಾಡುವ ಚಿಂತನೆ ಇದೆ ಎಂದು ಸಿಎಂ ತಿಳಿಸಿದರು. ಎಳನೀರು ಮಾರುತ್ತಿದ್ದ ಅಂಬಿ ಅಭಿಮಾನಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ನೋವಿನ ಸಂಗತಿ, ಈ ಅಹಿತಕರ ಸಂಗತಿಯನ್ನು ಬಿಟ್ಟರೆ ಮತ್ತೆ ಯಾವ ದುರ್ಘಟನೆ ನಡೆದಿಲ್ಲ. ಅವರ ಎಲ್ಲಾ ಅಭಿಮಾನಿಗಳು ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ ಎಂದು ಮನವಿ ಮಾಡಿದರು.

ನಿನ್ನೆ ನಿಧನರಾದ ಕೇಂದ್ರ ಮಾಜಿ ಸಚಿನ ಜಾಫರ್ ಷರೀಪ್ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ ಕುಮಾರಸ್ವಾಮಿ, ನವೆಂಬರ್ ತಿಂಗಳಲ್ಲಿ ಅತ್ಯಂತ ನೋವಿನ ದಿನಗಳೇ ಎದುರಾಗುತ್ತಿವೆ ಎಂದು ವಿಷಾದಿಸಿದರು. ಖಾಸಗಿ ಬಸ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ತಲಾ 5ಲಕ್ಷ ರೂ. ಪರಿಹಾರ ನೀಡಲು 1.50 ಕೋಟಿ ರೂ. ವ್ಯವಸ್ಥೆ ಮಾಡಲಾಗಿದೆ ಎಂದರು.

Translate »