ಕೊಡಗಿನ ಪ್ರಕೃತಿ ವಿಕೋಪದಲ್ಲಿ 10 ಮಂದಿ ಸಾವು: 9 ಮಂದಿ ನಾಪತ್ತೆ ಅವರಲ್ಲಿ ನಾಲ್ವರು ಬದುಕಿರುವ ಸಾಧ್ಯತೆ ಕಡಿಮೆ: ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು
ಕೊಡಗು

ಕೊಡಗಿನ ಪ್ರಕೃತಿ ವಿಕೋಪದಲ್ಲಿ 10 ಮಂದಿ ಸಾವು: 9 ಮಂದಿ ನಾಪತ್ತೆ ಅವರಲ್ಲಿ ನಾಲ್ವರು ಬದುಕಿರುವ ಸಾಧ್ಯತೆ ಕಡಿಮೆ: ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು

August 25, 2018

ಮಡಿಕೇರಿ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಲ್ಲಿ ಇದುವರೆಗೆ ಒಟ್ಟು 10 ಮಂದಿ ಸಾವಿಗೀಡಾಗಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ ನಾಲ್ವರು ಬದುಕಿ ಉಳಿದಿರುವ ಸಾಧ್ಯತೆ ತೀರಾ ಕಡಿಮೆ ಇದೆ. ನಾಪತ್ತೆಯಾಗಿರುವವರ ಶೋಧ ಕಾರ್ಯವನ್ನು ತೀವ್ರಗೊಳಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇ ಶಕಿ ನೀಲಮಣಿ ರಾಜು ತಿಳಿಸಿದರು.

ಮಡಿಕೇರಿಯ ಪೊಲೀಸ್ ವರಿಷ್ಠಾಧಿಕಾರಿ ಗಳ ಕಚೇರಿಯಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪ್ರಕೃತಿ ವಿಕೋಪಕ್ಕೆ ತುತ್ತಾದವರ ನೆರವಿಗಾಗಿ ಪೊಲೀಸ್ ಇಲಾಖೆ ವತಿಯಿಂದ ಸಿಬ್ಬಂದಿಗಳ ಒಂದು ದಿನದ ವೇತನವಾದ ಸುಮಾರು 5.85 ಕೋಟಿ ರೂಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು ಎಂದು ಘೋಷಿಸಿದರು.
ಜಿಲ್ಲೆಯಲ್ಲಿ ಆ.15ರ ಬಳಿಕ ಸುರಿದ ಮಹಾಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂ ಕುಸಿತದಲ್ಲಿ ಸಿಲುಕಿದವರ ರಕ್ಷಣೆಗೆ ಪೊಲೀಸ್ ಇಲಾಖೆ ಆ.16 ರಿಂದಲೇ ತಕ್ಷಣದಿಂದಲೇ ಕಾರ್ಯ ಪ್ರವೃತ್ತವಾಗಿದ್ದು, ಸೇನೆ ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಹಾಗೂ ಸ್ಥಳೀಯರ ನೆರವಿನಿಂದ ಸುಮಾರು 1738 ಮಂದಿ ಯನ್ನು ರಕ್ಷಿಸಿ ಪರಿಹಾರ ಕೇಂದ್ರಗಳಿಗೆ ರವಾನಿಸಲಾಗಿದೆ.

ಭೂಕುಸಿತದಿಂದ ಮಣ್ಣಿನಡಿ ಸಿಲುಕಿ ಸುಮಾರು 10 ಮಂದಿ ಸಾವಿಗೀಡಾಗಿದ್ದು, ಅವರುಗಳ ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ 9 ಮಂದಿ ನಾಪತ್ತೆಯಾಗಿದ್ದು, ನಾಪತ್ತೆಯಾಗಿದ್ದ ಮಹಿಳೆಯೊಬ್ಬರನ್ನು ಗುರುವಾರ ಪತ್ತೆ ಮಾಡಲಾಗಿದ್ದರೂ, ಅಂದು ಸಂಜೆ ಕಾಲೂರು ಗ್ರಾಮದಲ್ಲಿ ತಾಯಿ- ಮಗ ಹೊಳೆ ದಾಟುತ್ತಿದ್ದ ಸಂದರ್ಭ ಸುಮಾರು 7 ವರ್ಷದ ಗಗನ್ ಗಣಪತಿ ಎಂಬ ಬಾಲಕ ತಾಯಿಯ ಕೈಜಾರಿ ನೀರು ಪಾಲಾಗಿದ್ದಾನೆ. ಆತನ ಮೃತದೇಹಕ್ಕಾಗಿ ಶುಕ್ರವಾರ ಶೋಧ ಕಾರ್ಯ ನಡೆಸ ಲಾಗಿದೆ ಎಂದು ವಿವರಿಸಿದರು.

ಇನ್ನುಳಿದ 8 ಮಂದಿ ಯ ಪೈಕಿ ಕಾಟಗೇರಿ ಯ ಗಿಲ್ಬರ್ಟ್ ಮೆಂಡೋನ್ಸ (59) ಜೋಡು ಪಾಲದ ಗೌರಮ್ಮ (53) ಮಂಜುಳಾ (15) ಅವರುಗಳು ಬದುಕಿ ಉಳಿದಿರುವ ಸಾಧ್ಯತೆ ತೀರಾ ಕಡಿಮೆ ಇದ್ದು, ಅವರುಗಳು ಮಣ್ಣಿನಡಿ ಸಿಲುಕಿ ಇಲ್ಲವೇ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಹೆಚ್ಚಿರುವುದರಿಂದ ಅವರುಗಳ ಮೃತದೇಹ ಕ್ಕಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಕೃತಿ ವಿಕೋಪದಿಂದ ಸಾವಿಗೀಡಾದ ವರಲ್ಲಿ ಕಾಟಗೇರಿಯ ಅಮ್ಮವ್ವ (79) ಅವರು ವಿದ್ಯುತ್ ಕಂಬ ಬಿದ್ದು ವಿದ್ಯುತ್ ಪ್ರವಹಿಸಿ ಸಾವಿಗೀ ಡಾದರೆ, ಮಣ್ಣಿನಡಿ ಸಿಲುಕಿ ಸಾವಿಗೀಡಾದ ಅದೇ ಗ್ರಾಮದ ವೆಂಕಟರಮಣ (49)ಹಾಗೂ ಕೆಎಸ್ ಆರ್‍ಪಿ ಸಿಬ್ಬಂದಿ ಯಶ ವಂತ್ ಅವರುಗಳ ಮೃತದೇಹವನ್ನು ಆ.16ರಂದು ಪತ್ತೆ ಮಾಡಲಾಗಿದ್ದು, ಪವನ್ (36) ಎಂಬ ವರ ಮೃತದೇಹವನ್ನು ಆ.22 ರಂದು ಹೊರ ತೆಗೆಯಲಾಗಿದೆ. ಇದ ರೊಂದಿಗೆ ಮುಕ್ಕೋಡ್ಲು ಗ್ರಾಮದ ಪಣಿ ಯರವರ ಮುತ್ತ ಎಂಬವರ ಮೂರು ವಾರದ ಮಗು ಭೂಕುಸಿತದ ಸಂದರ್ಭ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಅನಾ ರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದೆ ಎಂದರು.

ಜೋಡುಪಾಲದ ನಿವಾಸಿ ಬಸಪ್ಪ (56) ಹಾಗೂ ಅವರ ಪುತ್ರಿ ಮೋನಿಷಾ (24) ಭೂಕುಸಿತಕ್ಕೆ ಸಿಲುಕಿ ಸಾವಿಗೀ ಡಾಗಿದ್ದು, ಅವರುಗಳ ಮೃತದೇಹವನ್ನು ಆ.18ರಂದು ಪತ್ತೆ ಮಾಡಲಾಗಿದ್ದು, ಹೆಮ್ಮೆತ್ತಾಳು ಗ್ರಾಮದ ಚಂದ್ರಾವತಿ(66) ಹಾಗೂ ಅವರ ಪುತ್ರ ಉಮೇಶ್ ರೈ(36) ಎಂಬವರುಗಳು ಕೂಡ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದು, ಅವರುಗಳ ಮೃತದೇಹ ವನ್ನು ಆ.22ರಂದು ಹಾಗೂ ಹೆಬ್ಬೆಟ್ಟ ಗೇರಿಯ ಉಮ್ಮವ್ವ (76) ಎಂಬವರ ಮೃತದೇಹವನ್ನು ಆ.23ರಂದು ಪತ್ತೆಮಾಡಲಾಗಿದೆ ಎಂದು ನೀಲಮಣಿ ರಾಜು ಮಾಹಿತಿ ನೀಡಿದರು.

ಉಳಿದಂತೆ ಹೆಬ್ಬೆಟ್ಟಗೇರಿಯ ಚಂದ್ರಪ್ಪ (58) ಹೆಬ್ಬಾಲೆಯ ಹೆಚ್.ಆರ್. ಹರೀಶ್ ಕುಮಾರ್, ಮೂವತ್ತೊಕ್ಲುವಿನ ಮುಕ್ಕಾ ಟಿರ ಸಾಬು ಉತ್ತಪ್ಪ(62) ಹಾಡಗೇರಿಯ ಫ್ರಾನ್ಸಿಸ್ ಮೊಂತೆರೋ, ಮಕ್ಕಂದೂರು ಉದಯಗಿರಿಯ ಬಾಬು(56) ಎಂಬ ವರುಗಳು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದ್ದು, ಅವರುಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಭೂ ಕುಸಿತಕ್ಕೊಳಗಾಗಿರುವ ಪ್ರದೇಶ ಗಳಲ್ಲಿ ಡ್ರೋಣ್ ಬಳಸಿ ಶೋಧ ಕಾರ್ಯ ವನ್ನು ನಡೆಸಲಾಗುತ್ತಿದ್ದು, ಇನ್ನೂ ಮನುಷ್ಯರು ಹಾಗೂ ಸಾಕುಪ್ರಾಣಿಗಳು ಸಿಲುಕಿಕೊಂಡಿರುವ ಬಗ್ಗೆ ಶೋಧ ನಡೆಸಲಾಗುತ್ತಿದೆ. ಈಗಾಗಲೇ ಭೂ ಕುಸಿತವಾಗಿರುವ ಪ್ರದೇಶಗಳಲ್ಲಿ ಮಣ್ಣು ಸಡಿಲಗೊಂಡಿರುವುದರಿಂದ ಮತ್ತೆ ಕುಸಿತ ಗಳಾಗುವ ಸಾಧ್ಯತೆಗಳಿವೆ. ಕುಸಿತಕ್ಕೊಳ ಗಾಗಿರುವ ಪ್ರದೇಶಗಳಿಗೆ ತೆರಳುತ್ತಿರುವ ಸಂತ್ರಸ್ತರು ಕೂಡ ಏಕಾಂಗಿಗಳಾಗಿ ಹೋಗದೆ ತಂಡವಾಗಿ ಹೋಗುವುದು ಸೂಕ್ತ. ಎಲ್ಲಾ ರಕ್ಷಣಾ ತಂಡಗಳು ಇನ್ನೂ ಇಲ್ಲೇ ಬೀಡು ಬಿಟ್ಟಿದ್ದು, ಯಾವುದೇ ತಂಡಗಳನ್ನು ವಾಪಾಸ್ ಕಳುಹಿಸಿಲ್ಲ. ಈ ಸಂದರ್ಭ ದಕ್ಷಿಣ ವಲಯ ಪೊಲೀಸ್ ಐಜಿಪಿ ಶರತ್‍ಚಂದ್ರ ಹಾಜರಿದ್ದರು.

Translate »