ವರಮಹಾಲಕ್ಷ್ಮಿ ಹಬ್ಬ; ನೋಟುಗಳ ನಡುವೆ ಕಂಗೊಳಿಸಿದ ಧನಲಕ್ಷ್ಮಿ..!
ಮೈಸೂರು

ವರಮಹಾಲಕ್ಷ್ಮಿ ಹಬ್ಬ; ನೋಟುಗಳ ನಡುವೆ ಕಂಗೊಳಿಸಿದ ಧನಲಕ್ಷ್ಮಿ..!

August 25, 2018

ಚಾಮುಂಡೇಶ್ವರಿಗೆ ನೋಟುಗಳಿಂದ ಸಿಂಗಾರ: ನೋಡಲು ಮುಗಿಬಿದ್ದ ಭಕ್ತ ಸಾಗರ
ಮಂಡ್ಯ:  ಜಿಲ್ಲಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ, ಮದ್ದೂರು, ನಾಗಮಂಗಲ ಸೇರಿದಂತೆ ವಿವಿಧೆಡೆ ಲಕ್ಷ್ಮಿ ದೇವಸ್ಥಾನಗಳಲ್ಲಿ ವಿವಿಧ ರೀತಿಯಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದ ಬಗ್ಗೆ ವರದಿಯಾಗಿದೆ.

ಮಂಡ್ಯದ ಆನೆಕರೆ ಬೀದಿಯ ಲಕ್ಷ್ಮಿ ದೇವಸ್ಥಾನ, ಚಾಮುಂಡೇಶ್ವರಿ ನಗರದ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಭಕ್ತರಿಗೆ ಪ್ರಸಾದ ವಿನಿಯೋಗ, ಭಕ್ತಿಗಾಯನ ಕಾರ್ಯಕ್ರಮಗಳೂ ಜರುಗಿದವು.

ಶ್ರೀರಂಗಪಟ್ಟಣ ವರದಿ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ಬೀದಿಯರುವ ಚಾಮುಂಡೇಶ್ವರಿ ದೇವಿಗೆ ನೋಟುಗಳಿಂದ ಧನಲಕ್ಷ್ಮಿ ಅಲಂಕಾರ ಮಾಡಿ ವಿಭಿನ್ನ ರೀತಿಯಲ್ಲಿ ಹಬ್ಬ ಆಚರಣೆ ಮಾಡಲಾಯಿತು. ಅರ್ಚಕ ಲಕ್ಷ್ಮೀಶ್ ಅವರು ಭಕ್ತರು ದೇವಿಗೆ ಸಿಂಗಾರಕ್ಕೆಂದು ನೀಡಲಾಗಿದ್ದ 5 ಲಕ್ಷ ರೂ.ಗಳನ್ನು ಬಗೆ ಬಗೆಯಾಗಿ ಅಲಂಕರಿಸಿ ವಿಶೇಷ ರೀತಿಯಲ್ಲಿ ದೇವಿಯನ್ನು ಆರಾಧಿಸಿದರು. 2000, 500, 200, 100, 50, 20, 10 ಹಾಗೂ 5 ರೂ.ಗಳ ನೋಟುಗಳ ಸಿಂಗಾರ ಭಕ್ತರ ಮನ ಪುಳಕಗೊಳ್ಳುವಂತೆ ಮಾಡಿತು. ಈ ಅಪರೂಪದ ಚಿತ್ರಣವನ್ನು ಕಣ್ತುಂಬಿಕೊಂಡ ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಹಿನ್ನೆಲೆ ದೇವಿಯನ್ನು ನೋಡಲು ಭಕ್ತ ಸಾಗರವೇ ಹರಿದು ಬಂದಿದ್ದಲ್ಲದೆ ದೇವಿಯ ದರ್ಶನಕ್ಕೆ ಮುಗಿ ಬೀಳುತ್ತಿದ್ದುದು ಕಂಡು ಬಂತು.

ಭಾರತೀನಗರ ವರದಿ: ಭಾರತೀನಗರದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಹೆಣ್ಣು ಮಕ್ಕಳು, ಗೃಹಿಣಿಯರು ಹೊಸ ಬಟ್ಟೆ ತೊಡುವ ಮೂಲಕ ಮನೆ ಮುಂದೆ ರಂಗೋಲಿಗಳನ್ನು ಬಿಟ್ಟು ಮನೆಯಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ, ಅಕ್ಕ-ಪಕ್ಕದ ಮನೆಯವರಿಗೆ ಅರಿಶಿಣ-ಕುಂಕುಮ ನೀಡಿ ಹಬ್ಬದ ಶುಭಾಶಯ ಕೋರಿದರು. ಹೂ-ಹಣ್ಣು, ತರಕಾರಿ ಸೇರಿದಂತೆ ದಿನ ಬಳಕೆಯ ಪದಾರ್ಥಗಳ ಬೆಲೆ ಗಗನಕ್ಕೇರಿದ್ದರೂ, ಅದನ್ನು ಲೆಕ್ಕಿಸದೇ ಹಬ್ಬವನ್ನು ಆಚರಿಸಲಾಯಿತು.

ಹಬ್ಬ ಆಚರಿಸದವರು ಇಲ್ಲಿನ ಸುತ್ತಮುತ್ತಲ ಸಣ್ಣಕ್ಕಿರಾಯಸ್ವಾಮಿ, ಆತ್ಮಲಿಂಗೇಶ್ವರಸ್ವಾಮಿ, ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರಸ್ವಾಮಿ, ಶ್ರೀಬೊಮ್ಮಲಿಂಗೇಶ್ವರ, ಮೆಳ್ಳಹಳ್ಳಿ ಶನೇಶ್ವರ, ಕೆ.ಎಂ.ದೊಡ್ಡಿ ಗಣಪತಿ, ಶ್ರೀಚಾಮುಂಡೇಶ್ವರಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.

Translate »