ಸ್ಥಳೀಯ ಸಂಸ್ಥೆ ಚುನಾವಣೆ  ಕಾಂಗ್ರೆಸ್ ಪಾಲಿಗೆ ಮಹತ್ವದ್ದು
ಮಂಡ್ಯ

ಸ್ಥಳೀಯ ಸಂಸ್ಥೆ ಚುನಾವಣೆ  ಕಾಂಗ್ರೆಸ್ ಪಾಲಿಗೆ ಮಹತ್ವದ್ದು

August 25, 2018

ಮಂಡ್ಯ:  ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆ ಕಾಂಗ್ರೆಸ್ ಪಾಲಿಗೆ ಮಹತ್ವದ್ದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಎ.ಸಿ. ಮಾದೇಗೌಡ ಕಲ್ಯಾಣ ಮಂಟಪದಲ್ಲಿಂದು ಕಾಂಗ್ರೆಸ್ ಅಭ್ಯರ್ಥಿಗಳ ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲ ವರ್ಗದವರಿಗೂ ನ್ಯಾಯ ನೀಡುವ ಮೂಲಕ ಗಮನ ಸೆಳೆದಿತ್ತು.

ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿತ್ತು. ಆದರೂ ಸಹ ಚುನಾವಣೆಯಲ್ಲಿ ಸೋಲು ಅನುಭವಿಸ ಬೇಕಾಯಿತು. ಇದಕ್ಕೆ ಕಾರಣ ಎಲ್ಲರಿಗೂ ಈಗಾಗಲೇ ಗೊತ್ತಿದೆ. ವಿರೋಧಿಗಳು ನಡೆಸಿದ ಜಾತಿ ರಾಜಕಾರಣ, ಜನರಿಗೆ ಸುಳ್ಳು ಭರವಸೆಗಳೇ ವಿನಃ ಬೇರೇನೂ ಅಲ್ಲ ಎಂದರು.

ಜಿಲ್ಲೆಯ ಕಾಂಗ್ರೆಸ್‍ನೊಳಗೆ ಒಗ್ಗಟ್ಟಿನ ಕೊರತೆ ಇದೆ ಎಂಬುದು ಗೊತ್ತಿದೆ. ನಮ್ಮೊಳಗೆ ಏನೇ ವೈಮನಸ್ಸಿದ್ದರೂ ಎಲ್ಲವನ್ನೂ ಬದಿಗಿಟ್ಟು ಕಾಂಗ್ರೆಸ್ ಕೈ ಬಲಪಡಿಸಬೇಕು. ರಾಜ್ಯದ ಜನರ ಹಿತದೃಷ್ಠಿಯಿಂದ ಜೆಡಿಎಸ್ ಸೋಲಿಸಬೇಕು. ದೇಶ ರಕ್ಷಣೆಯ ದೃಷ್ಠಿಯಿಂದ ಬಿಜೆಪಿ ತೊಲಗಿಸಬೇಕು. ಸರ್ವ ಜನಾಂಗದ ಅಭಿವೃದ್ಧಿಯ ಪಕ್ಷವಾಗಿರುವ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.

ಈ ಬಾರಿಯ ಮಂಡ್ಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಭುತ್ವ ಸಾಧಿಸಿದರೆ ಇಡೀ ರಾಜ್ಯವನ್ನೇಗೆದ್ದಂತೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದಕ್ಕೂ ದಿಕ್ಸೂಚಿಯಾಗಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ನಗರಸಭೆಯಲ್ಲಿ ಹೆಚ್ಚು ಬಾರಿ ಕಾಂಗ್ರೆಸ್ ಆಡಳಿತ ನಡೆ ಸಿದೆ. ನಾನು ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಜೆಡಿಎಸ್ ಅಧಿಕಾರ ಪಡೆದಿತ್ತು. ಉಳಿದಂತೆ ಕಾಂಗ್ರೆಸ್ ಅಧಿಕಾರ ನಡೆಸಿದೆ. ಪಕ್ಷದ ಕಾರ್ಯಕರ್ತರು ಹಿಂದಿನ ಸರ್ಕಾರದ ಸಾಧನೆಗಳು, ಸಿದ್ದರಾಮಯ್ಯನವರ ಅಭಿವೃದ್ಧಿ ಕೆಲಸಗಳ ಬಗ್ಗೆ ಜನತೆಗೆ ತಿಳಿಸಿ, ಚುನಾವಣೆ ಎದುರಿಸ ಬೇಕು ಎಂದು ಕಿವಿಮಾತು ಹೇಳಿದರು.

ವಿಧಾನಸಭಾ ಚುನಾವಣೆಯೇ ಬೇರೆ ಸ್ಥಳೀಯ ಸಂಸ್ಥೆ ಚುನಾವಣೆಯೇ ಬೇರೆ. ಕಾರ್ಯಕರ್ತರು ಆತ್ಮಸ್ಥೈರ್ಯ ದಿಂದ ಚುನಾವಣೆ ಎದುರಿಸಿ, ವಾರ್ಡ್‍ಗಳ ಸಮಸ್ಯೆಗೆ ಸ್ಪಂದಿ ಸುವ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಸಹಕರಿಸಿ ಎಂದು ತಿಳಿಸಿದರು. ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳಲ್ಲಿ ಚುನಾ ವಣೆ ನಡೆಯುತ್ತಿದ್ದು, 168ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಂತೆ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವಂತೆ ಕರೆ ನೀಡಿದರು. ವೇದಿಕೆಯಲ್ಲಿ ಮಾಜಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇ ಗೌಡ, ಮಧು ಮಾದೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಅಮರಾವತಿ ಚಂದ್ರಶೇಖರ್, ಎಂ. ಎಸ್.ಆತ್ಮಾನಂದ, ಸಂಪಂಗಿ, ಮನ್ಸೂರ್ ಅಲಿಖಾನ್, ಸಿದ್ದರಾಜು, ರಾಮಲಿಂಗಯ್ಯ, ಎಂ.ಎಸ್. ಚಿದಂಬರ್, ಜಬೀವುಲ್ಲಾ, ಕದಲೂರು ರಾಮಕೃಷ್ಣ, ಅಂಜನಾ ಶ್ರೀಕಾಂತ್, ಮಲ್ಲಾಜಮ್ಮ, ಗಣಿಗ ರವಿಕುಮಾರ್ ಇತರರಿದ್ದರು.

Translate »