ಮೈಸೂರು

ಹಳೆ ಪಿಂಚಣಿ ಪದ್ಧತಿ ಜಾರಿಗೆ ಒತ್ತಾಯಿಸಿ ರಕ್ತದಾನದ ಮೂಲಕ ಪ್ರತಿಭಟನೆ

October 5, 2018

ಕೆ.ಆರ್.ನಗರ:  ನೌಕರರ ಸಂಧ್ಯಾಕಾಲದ ಬದುಕಿನ ಊರು ಗೋಲಾದ ಹಳೆ ಪಿಂಚಿಣಿ ಪದ್ಧತಿಯನ್ನು ಮರುಜಾರಿಯ ಹಕ್ಕೋತ್ತಾಯಕ್ಕಾಗಿ “ರಕ್ತ ಕೊಟ್ಟೆವು ಪಿಂಚಿಣಿ ಬಿಡೆವು” ಎಂಬ ಘೋಷಣೆ ಯೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ಕೆ.ಆರ್.ನಗರ ತಾಲೂಕು ಘಟಕವು ಬೃಹತ್ ರಕ್ತದಾನ ಶಿಬಿರದ ಮೂಲಕ ಪ್ರತಿಭಟಿಸಿದರು.

ತಾಲೂಕು ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ತಾಲೂಕು ಎನ್‍ಪಿಎಸ್ ಶಾಖೆಯ ಅಧ್ಯಕ್ಷ ಸಿ.ಜೆ.ಅರುಣ್‍ಕುಮಾರ್ ಮತ್ತು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಯದುಗಿರೀಶ್ ಅವರ ನೇತೃತ್ವದಲ್ಲಿ ಮೈಸೂರಿನ ಚಂದ್ರ ಕಲಾ ಆಸ್ಪತ್ರೆಯ ಸಹಕಾರದೊಂದಿಗೆ ನೌಕರ ಬಂಧುಗಳು ರಕ್ತದಾನ ಮಾಡುವ ಮೂಲಕ ತಮ್ಮ ಬೇಡಿಕೆಯ ಹೋರಾಟ ವನ್ನು ಬೆಂಬಲಿಸಿದರು.

ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಯದುಗಿರೀಶ್ ಮಾತನಾಡಿ, 2004ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ 2006 ರಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನಿಗದಿತ ಪಿಂಚಿಣಿಯನ್ನು ರದ್ದುಮಾಡಿ ನೂತನ ಪಿಂಚಿಣಿ ಎಂಬ ವಂತಿಕೆಯನ್ನು ಜಾರಿ ಮಾಡಿರುವುದರಿಂದ ಸಂಧ್ಯಾಕಾಲ ದಲ್ಲಿ ನಿವೃತ್ತ ನೌಕರರಿಗೆ ಭದ್ರತೆಯಿಲ್ಲ ದಾಗಿದೆ. ಹಾಗಾಗಿ ಹಳೆಯ ಪದ್ದತಿಯನ್ನು ಜಾರಿಗೆ ತರುವಂತೆ ಸರ್ಕಾರವನ್ನು ಆಗ್ರಹಿಸಿ ರಕ್ತದಾನ ಮಾಡಿ ಬೇರೆಯವರಿಗೆ ನೆರವಾಗುತ್ತಿದ್ದೇವೆ ಎಂದರು. ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಟಿ. ಶಿವಪ್ರಸಾದ್ ಉದ್ಘಾಟಿಸಿ ನೌಕರರಿಗೆ ಬೆಂಬಲ ನೀಡಿದರು. ಪ್ರತಿಭಟನೆಯಲ್ಲಿ ತಾಲೂಕು ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಾಜಶೇಖರ, ಉಪಾಧ್ಯಕ್ಷ ವಿಜಯಕುಮಾರ್, ಬಿ.ಕೆ.ಸುರೇಶ್, ಕಾಲೇಜಿನ ಯೋಗೇಶ್, ಮಂಜುನಾಥ್ ಪ್ರಕಾಶ್, ಕೃಷ್ಣ, ಯಶವಂತ ಕುಮಾರ್, ತೀರ್ಥಗಿರಿಗೌಡ ಮತ್ತು ಮೈಸೂರಿನ ಚಂದ್ರಕಲಾ ಆಸ್ಪತ್ರೆಯ ಡಾ.ದರ್ಶಿನಿ ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

Translate »