ಮತದಾರರ ಋಣ ತೀರಿಸಲು ಮನೆ ಬಾಗಿಲಿಗೇ ಸರ್ಕಾರ
ಮೈಸೂರು

ಮತದಾರರ ಋಣ ತೀರಿಸಲು ಮನೆ ಬಾಗಿಲಿಗೇ ಸರ್ಕಾರ

February 5, 2019

ಕೆ.ಆರ್.ನಗರ: ನಿಮ್ಮ ಸಮಸ್ಯೆಗಳನ್ನು ನಿಮ್ಮ ಮನೆಯ ಬಳಿಯೇ ಪರಿಹರಿಸಿಕೊಡಬೇಕೆಂಬ ಉದ್ದೇಶದಿಂದ ಸರ್ಕಾರವನ್ನೇ ನಿಮ್ಮ ಗ್ರಾಮಕ್ಕೆ ಕರೆತಂದು ನಿಮ್ಮಗಳ ಕೆಲಸವನ್ನು ಮಾಡಿಸುತ್ತಿದ್ದೇನೆ ಎಂದು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು.

ಸಿದ್ಧಾಪುರ ಗ್ರಾಮ ಪಂಚಾಯ್ತಿ ಮುಂಭಾಗ ಜನಸ್ಪಂದನ ಕಾರ್ಯಕ್ರಮವನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ನಿನ್ನೆ ರಾತ್ರಿ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಜತೆಗೂಡಿ, ಶ್ರೀರಾಮಪುರ, ಡಿ.ಕೆ.ಕೊಪ್ಪಲು, ಹೊಸಕೊಪ್ಪಲು ಗ್ರಾಮಗಳಲ್ಲಿ ಜನರ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದರು.

ಕಂಚುಗಾರಕೊಪ್ಪಲು ಗ್ರಾಮದ ರಂಗಪ್ಪ ಅವರ ಮನೆಯಲ್ಲಿ ರಾತ್ರಿ ತಂಗಿದ್ದ ಸಚಿವರು, ಸೋಮವಾರ ಬೆಳಿಗ್ಗೆ ಸಿದ್ಧಾಪುರದಲ್ಲಿ ಜನಸ್ಪಂದನ ಸಭೆ ನಡೆಸಿದರು. ನೀವು ನೀಡಿದ ಮತದ ಋಣವನ್ನು ತೀರಿಸುವ ಉದ್ದೇಶದಿಂದ ಅಧಿಕಾರಿಗಳನ್ನು ನಿಮ್ಮೆದುರಲ್ಲಿ ನಿಲ್ಲಿಸಿ ನಿಮ್ಮಗಳ ಕೆಲಸ ಮಾಡಿಸುತ್ತಿದ್ದೇನೆ ಎಂದರು.

ಈ ಭಾಗದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ 60 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಏತ ನೀರಾವರಿ ಮೂಲಕ ಹಾರಂಗಿ ಕಾಲುವೆಗೆ ನೀರು ಹರಿಸುವ ಕೆಲಸ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈಗಾಗಲೇ ರಸ್ತೆಗಳ ಅಭಿವೃದ್ಧಿಗೆ ನೂರು ಕೋಟಿ ಅನುದಾನವನ್ನು ನೀಡಿದ್ದು, ಕಾಮಗಾರಿಗಳು ಪ್ರಾರಂಭವಾಗಿವೆ ಎಂದು ತಿಳಿಸಿದರು.

ಉದ್ಯೋಗ, ವರ್ಗಾವಣೆ ಈ ಎರಡು ಕೆಲಸಗಳನ್ನು ಬಿಟ್ಟು ಉಳಿದಂತೆ ಅಶ್ರಯ ಮನೆ ನಿವೇಶನ, ಆರ್ಥಿಕ ಸಹಾಯ, ಗ್ರಾಮಗಳ ಅಭಿವೃದ್ದಿ ಮಾಸಾಶನದಂತಹ ಸೌಲಭ್ಯಗಳನ್ನು ದೊರಕಿಸಿಕೊಡಲು ಸದಾ ನಿಮ್ಮೊಂದಿಗೆ ಇರುತ್ತೇನೆ. ಪ್ರತಿ ಸೋಮವಾರ ಮೈಸೂರಿನ ಕಚೇರಿಯಲ್ಲಿ. ಪ್ರತಿ ಶುಕ್ರವಾರ ತಾಲೂಕು ಪಂಚಾಯಿತಿಯಲ್ಲಿ ಸಿಗುತ್ತೇನೆ. ನೀವು ಯಾವಾಗ ಬೇಕಾದರೂ ಸಂಪರ್ಕಿಸಬಹುದು ಎಂದರು.

ಸಿದ್ಧಾಪುರ ಗ್ರಾಮ ಪಂಚಾಯಿತಿಗೆ ಸೇರಿರುವ ಎಲ್ಲಾ ಗ್ರಾಮಗಳಿಗೂ ಶುದ್ದ ಕುಡಿಯುವ ನೀರು, ದೇವಸ್ಥಾನಗಳ ಅಭಿವೃದ್ಧಿ, ಕಂಚುಗಾರಕೊಪ್ಪಲು ಗ್ರಾಮ ಸುವರ್ಣ ಗ್ರಾಮ ಯೋಜನೆಗೆ ಸೇರ್ಪಡೆಯಾಗಿದ್ದು, ಈ ಪಂಚಾಯಿತಿಯ ಗ್ರಾಮಗಳ ಅನುಕೂಲಕ್ಕಾಗಿ 50 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ವಿವರಿಸಿದರು. ಇತಿಹಾಸ ಪ್ರಸಿದ್ದ ಆರ್ಕೇಶ್ವರ ಸ್ವಾಮಿ ರಥೋತ್ಸವ ಪ್ರಯುಕ್ತ ಫೆ.9, 10, 11 ಎಡತೊರೆ ಉತ್ಸವ ಮಾಡುತ್ತಿದ್ದು, ಈ ಕಾರ್ಯಕ್ರಮಕ್ಕೆ ಪ್ರಖ್ಯಾತ ಚಲನಚಿತ್ರ ನಟರು ಹಾಗೂ ಹಿನ್ನೆಲೆ ಗಾಯಕರು ಆಗಮಿಸುವರು. ಈ ಕಾರ್ಯಕ್ರಮಕ್ಕೆ ತಾವುಗಳು ಆಗಮಿಸಿ ಎಂದು ಗ್ರಾಮಸ್ಥರನ್ನು ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಗ್ರಾ,ಪಂ ಅಧ್ಯಕ್ಷೆ ಸರಸಮ್ಮ ರಾಮಯ್ಯ, ಅಪರ ಜಿಲ್ಲಾಧಿಕಾರಿ ಪೂರ್ಣಿಮ, ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ಸ್ನೇಹಾ, ಜಿ.ಪಂ.ಉಪ ಕಾರ್ಯದರ್ಶಿ ಶಿವಶಂಕರ್, ಉಪ ವಿಭಾಗಾಧಿಕಾರಿ ವೀಣಾ, ತಹಸಿಲ್ದಾರ್ ಮಂಜುಳಾ, ಗ್ರಾ.ಪಂ ಸದಸ್ಯರಾದ ರಾಚಯ್ಯ, ಮಹೇಶ್, ಶೃತಿ, ಕೆ.ಪಿ.ನಿಂಗರಾಜ್, ಕೃಷ್ಣೇಗೌಡ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಎಸ್.ಹರಿಚಿದಂಬರ, ದಲಿತ ಮುಖಂಡರಾದ ಸಿದ್ದಾಪುರ ಕಾಳಯ್ಯ, ಕಂಚುಗಾರಕೊಪ್ಪಲು ಕೆ.ಸ್ವಾಮಿ,ಇಓ ಲಕ್ಷ್ಮಿಮೋಹನ್, ಎಇಇಗಳಾದ ಮಂಜುನಾಥ್, ಟಿ.ಡಿ.ಪ್ರಸಾದ್, ಚಂದ್ರಶೇಖರ್, ರಮೇಶ್, ಸಿಡಿಪಿಓ ಸುಮಿತ್ರ, ಬಿಇಓ ಎಂ.ರಾಜು, ಸಿಪಿಐ ಪಿ.ಕೆ.ರಾಜು, ಪಿಡಿಓ ಶಲ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

Translate »