ಆದಿವಾಸಿಗಳಿಗೆ ಮಧ್ಯವರ್ತಿಗಳೇ ತಡೆಗೋಡೆ: ದೇವನೂರು ವಿಷಾದ
ಮೈಸೂರು

ಆದಿವಾಸಿಗಳಿಗೆ ಮಧ್ಯವರ್ತಿಗಳೇ ತಡೆಗೋಡೆ: ದೇವನೂರು ವಿಷಾದ

February 5, 2019

ಹುಣಸೂರು: ಸ್ವತಂತ್ರ್ಯ, ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ ಎನ್ನುವ ಭಾರತದ ಎಲ್ಲಾ ಪ್ರಜೆಗಳಿಗೂ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸಿಕೊಡಲು ವಿವಿಧ ಹಂತಗಳಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಿಂದ ಗ್ರಾಮ ಸ್ವರಾಜ್ಯದವರೆಗೆ ಅಧಿಕಾರ ವಿಕೇಂದ್ರೀಕರಣಗೊಂಡಿದ್ದರೂ ಆದಿವಾಸಿ, ಬುಡಕಟ್ಟು, ಅಲೆಮಾರಿ ಸಮುದಾಯಗಳು ಶಕ್ತಿ ಕೇಂದ್ರದ ಕಡೆಗೆ ಮುಖ ಮಾಡಲು ಸಾಧ್ಯವಾಗದಂತೆ ಮಧ್ಯವರ್ತಿಗಳು ತಡೆಗೋಡೆ ನಿರ್ಮಿಸಿದ್ದಾರೆ ಎಂದು ಹಿರಿಯ ಸಾಹಿತಿ ದೇವನೂರು ಮಹದೇವು ವಿಷಾದ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ದಲಿತ ಮಹಿಳಾ ಒಕ್ಕೂಟದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ 69ನೇ ಸಂವಿಧಾನ ಜಾರಿ ದಿನದ ಅಂಗವಾಗಿ “ಸ್ವಾವಲಂಬನೆಗಾಗಿ ಸಹಕಾರ-ಸಮಾನತೆಗಾಗಿ ಅದಿವಾಸಿ ನಡಿಗೆ” ಜಾಗೃತಿ ಸಮಾವೇಶ ಉದ್ಘಾಟಿಸಿದ ಅವರು, ಕಾಡಿನಿಂದ ನಾಡಿಗೆ ಕರೆದು ತಂದರಿಂದ ಆದಿವಾಸಿಗಳಿಗೆ ದಿಕ್ಕು ಕೆಟ್ಟಂತೆ ಆಗಿದೆ. ಅವರ ಹೆಸರನ್ನು ಮೂಲನಿವಾಸಿಗಳ ಬದಲಿಗೆ ವನವಾಸಿಗಳು ಎಂದು ಸಂಘ ಪರಿವಾರ ಬದಲಿಸಿದೆ. ಇದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಆದಿವಾಸಿಗಳನ್ನು ಕಾಡಿನಿಂದ ಎತ್ತಂಗಡಿ ಮಾಡಿದ್ದರಿಂದಲೇ ಕಾಡು ನಾಶವಾಗುತ್ತಿದೆ, ಕಾಡಿನ ಜೀವ ಸಂಕುಲ ಕ್ಷೀಣಿಸುತ್ತಿದೆ, ಕಾಡಿನಜನ ನಾಡಿನ ಜನದ ಜೊತ್ತೆ ಬದುಕಲು ಕಷ್ಟವಾಗುತ್ತಿದೆ. ಈ ಸ್ಥಿತಿಯನ್ನು ನಾವು ಅರಿಯಬೇಕು ಎಂದರು.
ಜಿಲ್ಲೆಯ 54 ಹಾಡಿಗಳಲ್ಲಿ 20 ಸಾವಿರ ಆದಿವಾಸಿಗಳಿದ್ದು ಇವರ ಮೂಲ ಸಮಸ್ಯೆ ಸ್ಮಶಾನಕ್ಕೆ ಸಂಬಂಧಿಸಿದ್ದಾಗಿದೆ. ಕಾಡಿನಲ್ಲಿ ಸತ್ತವರನ್ನು ಅಲ್ಲೇ ಶವ ಸಂಸ್ಕಾರ ಮಾಡಿ ಗಿಡ ನೆಡುತ್ತಿದ್ದರು. ತಮ್ಮ ಹೆತ್ತಯ್ಯ ಇಲ್ಲೇ ಇದ್ದಾನೆಂದು ಪೊಜಿಸುತ್ತಿದ್ದರು ಎಂದು ಹೇಳಿದರು. ಆದಿವಾಸಿಗಳ ಎರಡು ಸಾವಿರ ಕುಟುಂಬಗಳಿಗೆ ಮನೆ ಇಲ್ಲ ಕ್ಷೇತ್ರದ ಶಾಸಕರು ಗಮನಹರಿಸಿ ಎಲ್ಲರಿಗೂ ಶಾಸ್ವತ ಸೂರಿನ ಬಗ್ಗೆ ಚಿಂತಿಸಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದರು.

ತಾಲೂಕು ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಹಾಗೂ ದಸಂಸ ಪುಟ್ಟಸ್ವಾಮಿ, ಅದಿವಾಸಿಗಳಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು. ಆದಿವಾಸಿಗಳ 50 ಮಕ್ಕಳು ಎಸ್‍ಎಸ್‍ಎಲ್‍ಸಿ ಪಾಸಾಗಿ ಮುಂದೆ ಓದುತ್ತಿವೆ. ಆ ಮಕ್ಕಳನ್ನು ಉಳ್ಳವರು ದತ್ತು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಶಾಸಕ ಹೆಚ್.ವಿಶ್ವನಾಥ್ ಮಾತನಾಡಿ, ಆದಿವಾಸಿಗಳ ಸಮಸ್ಯೆ ಅರಿತಿದ್ದು ಅವರ ಜಮೀನು ಒತ್ತುವರಿಯಾಗಿರುವುದನ್ನು ಬಿಡಿಸಿಕೊಡಲು ಪ್ರಯತ್ನಿಸುತ್ತೇನೆ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅಧಿಕಾರಿಗಳನ್ನು ಕಾಡಿಗೆ ಕರೆತಂದು ಆದಿವಾಸಿಗಳ ಮನೆ-ಶಿಕ್ಷಣ-ಅರೋಗ್ಯ-ಸ್ಮಶಾನ ಮೊದಲಾದ ಮೂಲ ಸಮಸ್ಯೆಗಳಿಗೆ ಪರಿಹಾರ ಕಂಡುಕೂಡವೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಮಾತನಾಡಿ, ನಾನು ಶಾಸಕನಾಗಿದ್ದಾಗ ಹಾಡಿ ಜನರಿಗೆ ಜಮೀನು ಹಾಗೂ ಮನೆ ಕೊಡುವ ಕೆಲಸ ಮಾಡಿದ್ದೇನೆ. ಕೊಡಗಿಗೆ ಗುಳೆ ಹೋಗುವುದನ್ನು ತಪ್ಪಿಸಿದ್ದೆ ಎಂದರು ದ.ಸಂ.ಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ದಲಿತ ಸಂಘಟನೆ ಜಿಲ್ಲಾ ಸಂಚಾಲಕ ಶಂಭುಲಿಂಗಸ್ವಾಮಿ, ರತ್ನಪುರಿಪುಟ್ಟಸ್ವಾಮಿ, ಹೆಗ್ಗನೂರು ನಿಂಗರಾಜು, ಬಿ.ಡಿ.ಶಿವಬುದ್ದಿ, ಹಾಗೂ ಡೇವಿಡ್, ಶಿವರಾಜು, ಮಹದೇವ, ಜಯಣ್ಣ, ಶಾಂತಕುಮಾರ್, ಶಾರದಮ್ಮ, ಶಾಂತಿ, ಮಹದೇವಮ್ಮ, ಚಂದ್ರಪ್ರಭ, ಕುಕ್ಕೂರುರಾಜು, ಮಹದೇವಸ್ವಾಮಿ, ಎಸ್.ರಾಜಣ್ಣ, ಜಗದೀಶ್ ಸೇರಿದಂತೆಆನೇಕರು ಭಾಗವಹಿಸಿದ್ದರು.

Translate »