ಫೆ.9ರಿಂದ 3 ದಿನ ‘ಎಡತೊರೆ ಉತ್ಸವ’
ಮೈಸೂರು

ಫೆ.9ರಿಂದ 3 ದಿನ ‘ಎಡತೊರೆ ಉತ್ಸವ’

January 30, 2019

ಕೆ.ಆರ್.ನಗರ: ಪಟ್ಟಣದ ಹೊರವಲಯದ ಹಳೆ ಎಡತೊರೆಯಲ್ಲಿ ಫೆ.9ರಿಂದ 3ದಿನ ನಡೆಯಲಿರುವ ‘ಎಡತೊರೆ ಉತ್ಸವ’ಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರು ಮಂಗಳವಾರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ಶ್ರೀ ಅರ್ಕೇಶ್ವರಸ್ವಾಮಿ ದೇವಸ್ಥಾನದಲ್ಲಿ ಫೆ.12ರಂದು ನಡೆಯಲಿರುವ ಜಾತ್ರಾ ಮಹೋ ತ್ಸವದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ 3ದಿನ ಎಡತೊರೆ ಉತ್ಸವ ಹಮ್ಮಿ ಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದ ಸುತ್ತಾ ಸಚಿವರು ಪರಿಶೀಲಿಸಿದರು. ಪಕ್ಕದಲ್ಲಿರುವ ಕಾವೇರಿ ನದಿಯ ಪಕ್ಕ ನಿರ್ಮಿಸಲು ಉದ್ದೇಶಿಸಿದ್ದ ಕಾರ್ಯಕ್ರಮದ ವೇದಿಕೆ ಸ್ಥಳವನ್ನು ವೀಕ್ಷಿಸಿ, ಸ್ಥಳೀಯ ಅಧಿ ಕಾರಿಗಳಿಂದ ಮಾಹಿತಿ ಪಡೆದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆ.ಆರ್.ನಗರದ ಪುರಾಣ ಪ್ರಸಿದ್ಧ ಶ್ರೀ ಅರ್ಕೇಶ್ವರ ಸ್ವಾಮಿ ದೇವಸ್ಥಾನವನ್ನು ದೇಶದ ಪ್ರವಾಸಿ ತಾಣಗಳಲ್ಲಿ ಒಂದಾಗಿ ಮಾಡುವ ಉದ್ದೇಶದಿಂದ ಎಡತೊರೆ ಉತ್ಸವ ನಡೆಸಲಾಗುವುದು ಹಳೆ ಎಡತೊರೆ ಜಾತ್ರೆ ಅಂಗವಾಗಿ ಫೆ.9, 10 ಮತ್ತು 11 ರಂದು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದ್ಧೂರಿಯಾಗಿ ಎಡತೊರೆ ಉತ್ಸವ ಮಾಡಲಾಗುತ್ತಿದೆ. ನಂತರ ಜ.12ರಂದು ರಥಸಪ್ತಮಿಯ ಅಂಗವಾಗಿ ಶ್ರೀ ಮೀನಾಕ್ಷಿ ಸಮೇತ ಶ್ರೀ ಅರ್ಕೇಶ್ವರಸ್ವಾಮಿ ಬ್ರಹ್ಮರಥೋತ್ಸವ ಜರುಗಲಿದೆ ಎಂದು ಹೇಳಿದರು.

ಚುಂಚನಕಟ್ಟೆಯ ಜಲಪಾತೋತ್ಸವ ಕಾರ್ಯಕ್ರಮದಂತೆ ಸರ್ಕಾರದ ವತಿಯಿಂದಲೇ ಎಡತೊರೆ ಉತ್ಸವವನ್ನು ಮುಂದುವರೆಸಿಕೊಂಡು ಹೋಗಲಾಗುವುದು. ಇದರಿಂದಾಗಿ ನಮ್ಮ ಪ್ರವಾಸಿ ಸ್ಥಳಗಳ ಬಗ್ಗೆ ದೇಶದಲ್ಲಿ ಪ್ರಚಾರವಾಗಲಿದೆ. ಆ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿ ಉತ್ತಮ ಪ್ರವಾಸಿ ತಾಣಗಳಾಗಿ ಮಾರ್ಪಡಾಗಲಿವೆ ಎಂದು ತಿಳಿಸಿದರು.

ದೇವಸ್ಥಾನದ ನವೀಕರಣ ಮತ್ತು ದೇವಸ್ಥಾನದ ಆವರಣದ ಅಭಿವೃದ್ಧಿ ಕಾಮಗಾರಿಯನ್ನೂ ನಡೆಸಲಾಗುವುದು. ಜತೆಗೆ ಹಳೆ ಎಡತೊರೆಯ ಇತಿಹಾಸ ಮತ್ತು ವಿಶೇಷತೆಗಳ ಬಗ್ಗೆ ಸಾಕ್ಷ್ಯಚಿತ್ರವನ್ನು ಸಹ ಬಿಡುಗಡೆ ಮಾಡಲಾಗುವುದು ಎಂದು ಸಾ.ರಾ.ಮಹೇಶ್ ವಿವರಿಸಿದರು.

3ದಿನಗಳ ಉತ್ಸವದ ಮನರಂಜನಾ ಕಾರ್ಯಕ್ರಮಗಳಲ್ಲಿ ಚಲನಚಿತ್ರ ನಟ-ನಟಿಯರು ಭಾಗವಹಿಸುವರು. ಸ್ಥಳೀಯರು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು. ಸಾರ್ವಜನಿಕರಿಗೆ ಯಾವುದೇ ಅನಾನುಕೂಲವಾಗದಂತೆ ಎಚ್ಚರ ವಹಿಸಿ ಎಲ್ಲಾ ಇಲಾಖೆ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಬೇಕು. ಎಲ್ಲಾ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಜಾತ್ರಾ ಮಹೋತ್ಸವ ಮತ್ತು ಎಡತೊರೆ ಉತ್ಸವ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

Translate »