ರಾಜ್ಯದಲ್ಲಿ ಸೂರಿಲ್ಲದವರಿಗೆ 10 ಲಕ್ಷ ಮನೆ ನಿರ್ಮಾಣ ಗುರಿ
ಮೈಸೂರು

ರಾಜ್ಯದಲ್ಲಿ ಸೂರಿಲ್ಲದವರಿಗೆ 10 ಲಕ್ಷ ಮನೆ ನಿರ್ಮಾಣ ಗುರಿ

July 18, 2021

ಪಿರಿಯಾಪಟ್ಟಣ, ಜು.17(ವೀರೇಶ್) ರಾಜ ಕೀಯ ನಿಂತ ನೀರಲ್ಲ. ಶಾಸಕ ಕೆ.ಮಹದೇವ್ ತಾಲೂಕಿನಾದ್ಯಂತ ಪಕ್ಷಭೇದ ಮರೆತು ಸಂಸದ ಪ್ರತಾಪ್ ಸಿಂಹ ಜೊತೆಗೂಡಿ ಜೋಡೆತ್ತಿನ ರೀತಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ರಾಜೀವ್ ಗಾಂಧಿ ವಸತಿ ನಿಗಮದ ವತಿ ಯಿಂದ ಪಟ್ಟಣದಲ್ಲಿ ನಡೆದ 2020-21ನೇ ಸಾಲಿನ ದೇವರಾಜ ಅರಸು ವಸತಿ ಯೋಜನೆ ಯಡಿ ವಿಧವೆಯರು ಮತ್ತು ಅಂಗವಿಕಲರಿಗೆ ಮನೆ ಮಂಜೂರಾತಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಅರ್ಹತೆ ಇದ್ದರೂ ಕೆಲವರು ಸರ್ಕಾರಿ ಸವಲತ್ತಿನಿಂದ ವಂಚಿತರಾಗಿ ದ್ದಾರೆ. ಅಂತಹ ವಂಚಿತ ಅರ್ಹ ಫಲಾನು ಭವಿಗಳನ್ನು ಗುರುತಿಸುವ ಕಾರ್ಯ ಸ್ಥಳೀಯ ಮಟ್ಟದಿಂದ ಆಗಬೇಕು ಎಂದರು.

ರಾಜ್ಯದಲ್ಲಿ ಸೂರು ಇಲ್ಲದವರಿಗೆ 10 ಲಕ್ಷ ಮನೆ ನಿರ್ಮಾಣ ಗುರಿ ಹೊಂದಿದ್ದು, ಈಗಾ ಗಲೇ 2 ಲಕ್ಷ ಮನೆ ನಿರ್ಮಾಣ ಕಾರ್ಯ ಮುಗಿದಿದೆ. ಉಳಿದವು ಚಾಲನೆ ಹಂತ ದಲ್ಲಿವೆ. ಇದಕ್ಕಾಗಿ 9 ಸಾವಿರ ಕೋಟಿ ಹಣ ವಿನಿಯೋಗಿಸಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ವಸತಿ ಯೋಜನೆಯಡಿ ನಡೆದಿದ್ದ ಎಡವಟ್ಟುಗಳನ್ನು ಸರಿಪಡಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆ ನೀಡಲಾಗಿದೆ. ಅರ್ಹರನ್ನು ಗುರುತಿಸುವಲ್ಲಿ ಪಿಡಿಓಗಳ ಪಾತ್ರ ಮಹತ್ವವಾಗಿದೆ ಎಂದರು.

ಈ ಹಿಂದೆ ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭ ತಾಪಂ ಇಓ ಸಿ.ಆರ್ ಕೃಷ್ಣಕುಮಾರ್ ಅವರು, ಚಾಮುಂಡಿಬೆಟ್ಟದ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಸಹಕಾರ ನೀಡಿದ್ದರು. ಅವರ ಉತ್ತಮ ಸೇವೆಯನ್ನು ತಾಲೂಕಿನ ಜನತೆ ಸದ್ಬಳಕೆ ಮಾಡಿಕೊಳ್ಳಲಿ ಎಂದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಸ್ವಾತಂತ್ರ್ಯೋತ್ಸವದ ವಜ್ರಮಹೋತ್ಸವ ಆಚರಣೆ ಸಂದರ್ಭ ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ಉದ್ದೇಶ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿದ್ದು ರಾಜ್ಯದಲ್ಲಿ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವಸತಿ ಸಚಿವ ವಿ.ಸೋಮಣ್ಣ ಅವರ ಕಾರ್ಯ ಶ್ಲಾಘನೀಯ ಎಂದರು.

ಶಾಸಕ ಕೆ.ಮಹದೇವ್ ಮಾತನಾಡಿ, ವಿವಿಧ ಯೋಜನೆಗಳಡಿ ರದ್ದಾಗಿದ್ದ ವಸತಿ ವಿತರಣಾ ಕಾರ್ಯಕ್ಕೆ ಮರುಜೀವ ನೀಡಿದ ಸಚಿವ ಸೋಮಣ್ಣನವರು ಸೂರಿಲ್ಲದ ಬಡವರಿಗೆ ಮನೆ ನೀಡುವ ಕಾರ್ಯಕ್ರಮಕ್ಕೆ ತಾಲೂಕಿನಲ್ಲಿಯೇ ಪ್ರಥಮ ವಾಗಿ ಚಾಲನೆ ನೀಡಿದ್ದಾರೆ. ವಿರೋಧ ಪಕ್ಷದ ಶಾಸಕನಾಗಿದ್ದರೂ ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಸಚಿವರು ಹಾಗೂ ಸಂಸದರ ಸಹಕಾರದಿಂದ ಸಾಕಷ್ಟು ಯೋಜನೆ ಗಳನ್ನು ಜಾರಿಗೆ ತರಲಾಗುತ್ತಿದೆ ಎಂದರು.

ಈ ವೇಳೆ ತಾಲೂಕಿನ 34 ಗ್ರಾ.ಪಂ ಗಳ 1611 ಮಂದಿ ಅರ್ಹ ಫಲಾನುಭವಿ ಗಳಿಗೆ ಆದೇಶ ಪತ್ರ ವಿತರಿಸಲಾಯಿತು.
ಜಿಪಂ ಸಿಇಓ ಯೋಗೀಶ್, ರಾಜೀವ್ ಗಾಂಧಿ ವಸತಿ ನಿಗಮದ ಜನರಲ್ ಮ್ಯಾನೇ ಜರ್ ಪರಶುರಾಮೇಗೌಡ, ತಹಸೀಲ್ದಾರ್ ಕೆ.ಚಂದ್ರಮೌಳಿ, ತಾಪಂ ಇಓ ಸಿ.ಆರ್.ಕೃಷ್ಣ ಕುಮಾರ್, ಸಹಾಯಕ ನಿರ್ದೇಶಕರಾದ ರಘುನಾಥ್, ಜಿ.ಸಿ ಮಹದೇವ್, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಪುರಸಭೆ, ಕೆಡಬ್ಲ್ಯುಎಸ್‍ಎಸ್ ಬಿ ನಿರ್ದೇಶಕ ಆರ್. ಟಿ.ಸತೀಶ್, ಬಿಜೆಪಿ ತಾಲೂಕು ಅಧ್ಯಕ್ಷ ರಾಜೇಗೌಡ, ತಾಪಂ ಮಾಜಿ ಸದಸ್ಯರಾದ ಎಸ್.ರಾಮು, ಈರಯ್ಯ, ಮಲ್ಲಿಕಾರ್ಜುನ್, ಮೋಹನ್ ರಾಜ್, ರಂಗಸ್ವಾಮಿ, ಜೆಡಿಎಸ್ ತಾಲೂಕು ಮಾಜಿ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ವಿವಿಧ ಇಲಾಖೆ ಅಧಿಕಾರಿಗಳು, ಜನ ಪ್ರತಿನಿಧಿಗಳು, ತಾಲೂಕಿನ ಗ್ರಾ.ಪಂಗಳ ಪಿಡಿಒ ಹಾಜರಿದ್ದರು.

Translate »