ಮೈಸೂರು,ಏ.23-ಮೈಸೂರು ಜಿಲ್ಲೆಯ ವಿವಿಧೆಡೆ ಪಾನಿಪುರಿ, ಬೇಲ್‍ಪುರಿ, ಮೇವಾಡ್ ಐಸ್ ಕ್ರೀಂ ವ್ಯಾಪಾರ ಮಾಡಿ ಬದುಕು ಸಾಗಿ ಸುತ್ತಿದ್ದ 170 ರಾಜಸ್ತಾನಿ ಕುಟುಂಬಗಳು, ಲಾಕ್‍ಡೌನ್‍ನಿಂದಾಗಿ ಈಗ ಮೈಸೂರಿನ ಸಿದ್ದಾರ್ಥನಗರದ ಸಿಐಟಿಬಿ ಛತ್ರದಲ್ಲಿ 24 ದಿನಗಳಿಂದ ಲಾಕ್ ಆಗಿದ್ದಾರೆ. ದೂರದ ರಾಜಸ್ತಾನದಲ್ಲಿರುವ ತಮ್ಮ ಕುಟುಂಬದೊಂ ದಿಗೆ ಬೆರೆಯಲಾಗದೆ ಪರಿತಪಿಸುತ್ತಿದ್ದಾರೆ.
ಕೋವಿಡ್-19 ವೈರಾಣು ಹರಡುವು ದನ್ನು ತಡೆಯಲು ಇಡೀ ದೇಶದಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧೆಡೆ ವ್ಯಾಪಾರ ಮಾಡಿಕೊಂಡಿದ್ದ ಇವರೆಲ್ಲರೂ 2 ಲಾರಿಗಳಲ್ಲಿ ಮಾ.30ರಂದು ರಾಜಸ್ತಾನದ ಕಡೆಗೆ ಹೊರಟಿದ್ದರು. ಕರ್ನಾಟಕದ ಗಡಿ ದಾಟಿದ್ದ ಇವರ ಲಾರಿಯನ್ನು ಶಹಾಪುರ ಬಳಿ ಮಹಾರಾಷ್ಟ್ರ ಪೊಲೀಸರು ತಡೆದರು.
`ರಾಜಸ್ತಾನಕ್ಕೆ ಹೋಗುತ್ತಿದ್ದೇವೆಂದು ಪರಿಪರಿಯಾಗಿ ಬೇಡಿದರೂ ಮುಂದೆ ಹೋಗಲು ಬಿಡಲಿಲ್ಲ. ಬಂದಲ್ಲಿಗೇ ಹಿಂದಿ ರುಗಿ ಎಂದರು. ಹಾಗಾಗಿ ನಾವು ಏ.1ರಂದು ಮೈಸೂರಿಗೆ ಮರಳಿದೆವು. ಆಲನಹಳ್ಳಿ ರಿಂಗ್ ರಸ್ತೆ ಬಳಿ ಪೊಲೀಸರು ನಮ್ಮನ್ನು ತಡೆದು ಸಿಐಟಿಬಿ ಛತ್ರದಲ್ಲಿ ಆಶ್ರಯ ನೀಡಿದರು. ಎಲ್ಲರೂ ಅವರ ಮನೆಗಳಲ್ಲಿ ಕುಟುಂಬ ಗಳೊಂದಿಗೆ ಇದ್ದಾರೆ. ನಮಗೆ ಇರಲಾಗು ತ್ತಿಲ್ಲವಲ್ಲ ಎಂಬುದೇ ಚಿಂತೆ’ ಎಂದು ಪಾನಿ ಪುರಿ ವ್ಯಾಪಾರಿ ರೆಹಮಾನ್‍ಖಾನ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.
ವಯಸ್ಸಾದ ತಂದೆ-ತಾಯಿ, ಸೋದರರ ಕುಟುಂಬ ಎಲ್ಲವೂ ರಾಜಾಸ್ತಾನದಲ್ಲಿವೆ. ವ್ಯವಹಾರಕ್ಕಾಗಿ ಮೈಸೂರಿನಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದೇವೆ. ಲಾಕ್‍ಡೌನ್ ಸಂದರ್ಭ ಊರಿಗೆ ಹೋಗಲಾಗದೆ ಇಲ್ಲಿ ಸಿಕ್ಕಿಕೊಂಡೆವು. ಕುಟುಂಬದವರು ವಿಡಿಯೋ ಕಾಲ್ ಮಾಡಿ, ಹೇಗಾದರೂ ಊರಿಗೆ ಬನ್ನಿ ಎಂದು ಕಣ್ಣೀರಿಡುತ್ತಿದ್ದಾರೆ. ಆದರೆ ನಮಗೆ ಹೋಗಲಾಗುತ್ತಿಲ್ಲ ಎಂದು ರೆಹಮಾನ್‍ಖಾನ್ ಗದ್ಗದಿತರಾದರು.
ಬೀದಿಬದಿ ವ್ಯಾಪಾರಿಗಳಾದ ಇವರೆಲ್ಲ ರಮ್ಮನಹಳ್ಳಿ, ನಂಜನಗೂಡು, ಹುಲ್ಲಹಳ್ಳಿ, ಕುದೇರು, ಮೂಗೂರು, ಮೈಸೂರು ನಗರ ಸೇರಿದಂತೆ ವಿವಿಧೆಡೆ ಬಾಡಿಗೆ ಮನೆ ಮಾಡಿ ಕೊಂಡು ವಾಸವಿದ್ದಾರೆ. ಈ ಗುಂಪಿನಲ್ಲಿ 5 ತಿಂಗಳ ಗರ್ಭಿಣಿ, 3 ತಿಂಗಳ ಹಸುಗೂಸು ಮತ್ತು ಬಾಣಂತಿ ಸೇರಿದಂತೆ 23 ಮಹಿಳೆ ಯರು, 22 ಮಕ್ಕಳು ಇದ್ದಾರೆ. ಹುಟ್ಟೂರು ತಲುಪಲಾಗದ್ದಕ್ಕೆ ಚಡಪಡಿಸುತ್ತಿದ್ದಾರೆ.
ಊಟದ್ದೇ ಸಮಸ್ಯೆ: ರಾಜಸ್ತಾನದ ಗಾದ್ರಿ ಪಟೇಲ್, ವೈಷ್ಣವ್, ರಜಪೂತ್, ರಾವತ್, ಡಾಂಗಿ ಸಮಾಜದವರು, ಕೆಲವು ಮುಸ್ಲಿಂ ಕುಟುಂಬಗಳು ಇಲ್ಲಿವೆ. ಇವರ ಆಹಾರ ಎಂದರೆ ರೋಟಿ, ಸಬ್ಜಿ, ದಾಲ್, ಸಂಜೆಗೆ ಸ್ವಲ್ಪ ಅನ್ನ. ಆದರೆ ಪ್ರತಿದಿನ ದಾನಿಗಳಿಂದ ಟೊಮೆಟೊ ಬಾತ್, ರೈಸ್‍ಬಾತ್ ಎಂದು ಬರೀ ಅನ್ನದ ಪದಾರ್ಥಗಳೇ ಬರುತ್ತಿರುವುದು ಇವರಿಗೆ ಸರಿ ಹೋಗುತ್ತಿಲ್ಲವಂತೆ. ಹಾಗಾಗಿ ಹೊಟ್ಟೆ ತುಂಬಾ ಊಟ ಮಾಡಲಾಗದೇ ಕೆಲವರ ಹೊಟ್ಟೆಯೂ ಕೆಟ್ಟಿದೆ ಎನ್ನುತ್ತಾರೆ.
`ಅಮ್ಮನಿಗೆ ಆರೋಗ್ಯ ಸರಿಯಿಲ್ಲ’ ಎಂದು ಒಬ್ಬರು ಹೇಳಿದರೆ, `ನಮ್ಮ ಕಡೆಯವರೊಬ್ಬರು ಮೃತಪಟ್ಟರೂ ಹೋಗಲಾಗಿಲ್ಲ’ ಎಂದು ಇನ್ನೊ ಬ್ಬರು ಕಣ್ಣೀರಿಟ್ಟರು. ಆಗಾಗ್ಗೆ ವಿಡಿಯೋ ಕಾಲ್ ಮಾಡಿ ಮುಖ ನೋಡಿಕೊಳ್ಳುತ್ತೇವೆ. ಹಾಗೇ ಕುಟುಂಬದವರನ್ನು ಸಮಾಧಾನ ಪಡಿಸು ತ್ತಿದ್ದೇವೆ ಎಂದು ಸೋಹಲ್‍ಲಾಲ್ ಡಾಂಗಿ ನೋವು ತೋಡಿಕೊಂಡರು. `ಸಾರ್, ನಮ್ಮ ಕುಟುಂಬ ನಮ್ಮನ್ನು ಕಾಣದೇ ಕಣ್ಣೀರು ಹಾಕು ತ್ತಿದೆ. ಹೇಗಾದರೂ ಮಾಡಿ ಊರಿಗೆ ಕಳಿಸಿ ಕೊಡಿ’ ಎಂದು ಬೇಡಿಕೊಂಡರು.
ವಯಸ್ಸಾದ ತಂದೆ-ತಾಯಿ ಮಾತ್ರವೇ ಊರಲ್ಲಿದ್ದಾರೆ. ನಮಗಾಗಿ ಕಾಯುತ್ತಿದ್ದಾರೆ. ಅವರನ್ನು ಬೇಗ ನೋಡಬೇಕು. ಹೇಗಾ ದರೂ ಮಾಡಿ ನಮ್ಮ ಊರಿಗೆ ಕಳಿಸಿಕೊಡಿ ಎಂದು ಕಾಲುಸಿಂಗ್ ಮನವಿ ಮಾಡಿದರು.
ತಸ್ಲೀಂಖಾನ್ ಎಂಬಾತನ ಪತ್ನಿ 5 ತಿಂಗಳ ಗರ್ಭಿಣಿ. ಆಕೆಯ ತಂದೆ-ತಾಯಿ ಬೇಗ ಊರಿಗೆ ಬರುವಂತೆ ಕರೆಯುತ್ತಿದ್ದಾರೆ. ಹೋಗುವು ದಾದರೂ ಹೇಗೆ? ಎಂಬುದು ಪತಿಯ ಚಿಂತೆ.
ಮೈಸೂರಿನ ಕರ್ನಾಟಕ ಸೀರ್ವಿ ಸಮಾ ಜದ ಅಧ್ಯಕ್ಷ ದುರ್ಗಾರಾಂ ನೇತೃತ್ವದಲ್ಲಿ ಪದಾಧಿಕಾರಿಗಳು ಸಿಐಟಿಬಿ ಛತ್ರದ ನಿರಾಶ್ರಿ ತರ ಕೇಂದ್ರಕ್ಕೆ ಬಂದು ರೋಟಿ, ಸಬ್ಜಿ, ದಾಲ್ ಮಾಡಿಕೊಂಡು ತಿನ್ನಿ ಎಂದು ದಿನಸಿ ನೀಡಿ ದರು. ಅಡುಗೆ ಮಾಡಲು ಗ್ಯಾಸ್ ಸ್ಟೌವ್, ಗ್ಯಾಸ್ ಸಿಲಿಂಡರ್, ಪಾತ್ರೆಗಳನ್ನು ನೀಡಿದರು.
ರಾಜಕುಮಾರ್ ಭಾವಸಾರ್