ಬೆಂಗಳೂರು, ಏ.27- ರಾಜ್ಯದಲ್ಲಿ 23 ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಆದೇಶ ಹೊರಡಿಸಿದ್ದಾರೆ. ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಕೆ. ವಂಟಿಗೋಡಿ ಅವರನ್ನು ಜಿಲ್ಲಾ ನ್ಯಾಯಾಧೀಶರು ಬೆಂಗಳೂರಿನಲ್ಲಿರುವ ಓಓಡಿ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧೀಕರಣದ ರಿಜಿಸ್ಟ್ರಾರ್ ಆಗಿ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅನಿಲ್ ಭೀಮ್‍ಸೇನ್ ಕಟ್ಟಿ ಅವರನ್ನು ವರ್ಗಾಯಿಸಲಾಗಿದೆ.
ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಜಿ. ಕುರುವಟ್ಟಿ ಅವರನ್ನು ಜಿಲ್ಲಾ ನ್ಯಾಯಾಧೀಶರು ಓಓಡಿ ಕರ್ನಾಟಕ ವಕ್ಫ್ ನ್ಯಾಯ ಮಂಡಳಿಯ ಪ್ರಿಸಿಡಿಂಗ್ ಅಧಿಕಾರಿಯಾಗಿ ವರ್ಗಾಯಿಸಲಾಗಿದೆ. ಮೈಸೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್. ಭರತ್‍ಕುಮಾರ್ ಅವರನ್ನು ಕರ್ನಾಟಕ ಹೈಕೋರ್ಟ್‍ನ ರಿಜಿಸ್ಟ್ರಾರ್ (ಸಾಂಖಿಕ ಮತ್ತು ಪರಿಶೀಲನೆ) ಆಗಿ ವರ್ಗಾವಣೆ ಮಾಡಲಾಗಿದೆ.
ಮೈಸೂರಿನ 1ನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರು ಕೌಟುಂಬಿಕ ನ್ಯಾಯಾಧೀಶ ರಾದ ಶ್ರೀಮತಿ ಕೆ.ಜಿ. ಶಾಂತಿ ಅವರನ್ನು ಬೆಂಗಳೂರಿನ 1ನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರು ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಲು ಪ್ರಸ್ತಾಪಿಸಲಾಗಿದೆ.
ಬೆಂಗಳೂರಿನ 78ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮಲ್ಲಿ ಕಾರ್ಜುನಗೌಡ ಅವರನ್ನು ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾಗಿ ವರ್ಗಾವಣೆ ಮಾಡಲಾಗಿದೆ. ವಿರಾಜಪೇಟೆಯಲ್ಲಿರುವ ಕೊಡಗು ಜಿಲ್ಲಾ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ.ಜಿ. ರಮಾ ಅವರನ್ನು ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾಗಿ ವರ್ಗಾವಣೆ ಮಾಡಲಾಗಿದೆ. ಹಾಸನ ಜಿಲ್ಲೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಮರಗೂರು ಅವರನ್ನು ಜಿಲ್ಲಾ ನ್ಯಾಯಾಧೀಶರು ಓಓಡಿ ಬೆಂಗಳೂರಿನಲ್ಲಿರುವ ಹೈಕೋರ್ಟ್ ರಿಜಿಸ್ಟ್ರಾರ್ (ಮೂಲ ಸೌಕರ್ಯ ಮತ್ತು ನಿರ್ವಹಣೆ) ಆಗಿ ವರ್ಗಾಯಿಸಲು ಪ್ರಸ್ತಾಪಿಸಲಾಗಿದೆ.