24 ಗಂಟೆಯಲ್ಲಿ 24 ಮಂದಿ ಬಲಿ
ಚಾಮರಾಜನಗರ

24 ಗಂಟೆಯಲ್ಲಿ 24 ಮಂದಿ ಬಲಿ

May 4, 2021

ಚಾಮರಾಜನಗರ, ಮೇ 3(ಎಸ್‍ಎಸ್)- ಚಾಮರಾಜನಗರ ಜಿಲ್ಲೆಯಲ್ಲಿ 24 ಗಂಟೆ ಅವಧಿಯಲ್ಲಿ 24 ಮಂದಿ ಕೋವಿಡ್ ಸೋಂಕಿತರು ಸಾವಿಗೀಡಾಗಿದ್ದಾರೆ. ಭಾನುವಾರ ಬೆಳಗ್ಗೆ 7 ಗಂಟೆ ಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೆ ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 23 ಮಂದಿ ಹಾಗೂ ಹನೂರು ತಾಲೂಕು ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಆದರೆ, ಇವರೆಲ್ಲರೂ ಆಕ್ಸಿಜನ್ ಕೊರತೆಯಿಂದ ಸಾವಿಗೀಡಾಗಿದ್ದಾರೆ ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ. ಕಳೆದ ರಾತ್ರಿಯೇ ಸಾವುಗಳು ಸಂಭವಿಸಿವೆ ಎಂದು ಹೇಳಲಾಗುತ್ತಿದೆ. ರಾತ್ರಿ 11 ಗಂಟೆ ನಂತರ ಕೋವಿಡ್ ಆಸ್ಪತ್ರೆ ಮುಂದೆ ಸೋಂಕಿ ತರ ಸಂಬಂಧಿಕರು ಜಮಾಯಿಸತೊಡಗಿದರು. ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ ರೋಗಿಗಳು ತೊಂದರೆ ಗೊಳಗಾಗಿದ್ದಾರೆ ಎಂದು ಕೆಲವರು ಸ್ಥಳೀಯ ಮಾಧ್ಯಮ ದವರಿಗೂ ಕರೆ ಮಾಡಿದರು. ಮಾಧ್ಯಮ ವರದಿಗಾರರು ಆಸ್ಪತ್ರೆ ಬಳಿ ತೆರಳಿದಾಗ, ಆಕ್ಸಿಜನ್ ಕೊರತೆಯಿಂದ ಸೋಂಕಿತರು ತೊಂದರೆಗೀಡಾಗಿರುವುದು ಕಂಡು ಬಂದಿದೆ. ಅಲ್ಲದೆ, ಮೈಸೂರಿನಿಂದ ಆಕ್ಸಿಜನ್ ಸಿಲಿಂಡರ್‍ಗಳನ್ನು ತರಲು ಬಿಡುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಕೆಲ ಮಾಧ್ಯಮದ ಮಂದಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದಾಗ ಸಂಸದರು ಮೈಸೂರಿ ನಿಂದ ಆಕ್ಸಿಜನ್ ಸಿಲಿಂಡರ್ ಚಾಮರಾಜನಗರಕ್ಕೆ ಕಳುಹಿಸಿಕೊಡುವುದಾಗಿ

ಭರವಸೆ ನೀಡಿದ್ದಾರೆನ್ನಲಾಗಿದೆ. ರಾತ್ರಿ 12 ಗಂಟೆಯಾಗುತ್ತಲೇ ಆಸ್ಪತ್ರೆಯಲ್ಲಿ ಆಕ್ಸಿಜನ್ ಡ್ರೈ ಆಗಿ, ವೈದ್ಯಕೀಯ ಸಿಬ್ಬಂದಿಯೇ ಪರದಾಡಲಾರಂಭಿಸಿದರು. ಮುಂಜಾನೆ 3 ಗಂಟೆ ಸುಮಾರಿಗೆ ಮೈಸೂರಿನಿಂದ ಆಕ್ಸಿಜನ್ ಸಿಲಿಂಡರ್ ಹೊತ್ತ ವಾಹನಗಳು ಚಾಮರಾಜನಗರ ಕೋವಿಡ್ ಆಸ್ಪತ್ರೆಗೆ ತಲುಪಿದಾಗ ವೈದ್ಯಕೀಯ ಸಿಬ್ಬಂದಿ, ಸೋಂಕಿತರಿಗೆ ಆಕ್ಸಿಜನ್ ನೀಡಿ ಪ್ರಾಣ ಉಳಿಸಲು ಪ್ರಯತ್ನಪಟ್ಟರು.

24 ಗಂಟೆ ಅವಧಿಯಲ್ಲಿ ಮೃತಪಟ್ಟ ಎಲ್ಲರೂ ಆಕ್ಸಿಜನ್ ಕೊರತೆಯಿಂದಲೇ ಸಾವಿಗೀಡಾಗಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಡಿಸಿ ನಿರಾಕರಣೆ: ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಅದನ್ನು ಅಲ್ಲಗಳೆದಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 12 ಗಂಟೆವರೆಗೆ 14 ಮಂದಿ ಮೃತಪಟ್ಟಿದ್ದಾರೆ. 12ರಿಂದ 2 ಗಂಟೆವರೆಗೆ ಮೂವರು ಹಾಗೂ ಬೆಳಗ್ಗೆ 7 ಗಂಟೆವರೆಗೆ 7 ಮಂದಿ ಸೇರಿದಂತೆ ಒಟ್ಟು 13 ಮಂದಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದರು. ಅವರೆಲ್ಲರೂ ಕಳೆದ 17 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಸೋಂಕು ಉಲ್ಬಣಗೊಂಡಿದ್ದು, ವೆಂಟಿಲೇಟರ್ ನಲ್ಲಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಇವರೆಲ್ಲರೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ ಎಂಬುದು ಸರಿಯಲ್ಲ ಎಂದರು. ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗುತ್ತಿದ್ದು, ಮುಂಜಾನೆ 2 ಗಂಟೆವರೆಗೆ ಡ್ರೈ ಆಗುತ್ತದೆ ಎಂಬ ಮಾಹಿತಿ ನನಗೆ ದೊರೆಯಿತು. ತಕ್ಷಣವೇ ಮೈಸೂರಿನ ಆಕ್ಸಿಜನ್ ವಿತರಕರನ್ನು ಸಂಪರ್ಕಿಸಿ ಸಿಲಿಂಡರ್ ತರಿಸಲು ಕಾರ್ಯ ಪ್ರವೃತ್ತನಾದೆ. ಮುಂಜಾನೆ 2.30ಕ್ಕೆ 60ರಿಂದ 70 ಸಿಲಿಂಡರ್ ಹಾಗೂ ಬೆಳಗ್ಗೆ 7 ಗಂಟೆಗೆ ಮತ್ತೆ 70 ಸಿಲಿಂಡರ್‍ಗಳು ಬಂದಿವೆ. ಸೋಂಕಿತರನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇವೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಭಾನುವಾರ ರಾತ್ರಿಯಿಂದಲೇ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸುವ ಕಾರ್ಯ ಜಿಲ್ಲಾಡಳಿತದಿಂದ ನಡೆದಿದೆ. ಸೋಮವಾರ ಮಧ್ಯಾಹ್ನದವರೆವಿಗೂ ಮೃತದೇಹಗಳ ಹಸ್ತಾಂತರ ಕಾರ್ಯ ಮುಂದುವರೆದಿದ್ದು, ಆಸ್ಪತ್ರೆ ಮುಂದೆ ಜಮಾಯಿಸಿದ್ದ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಆಕ್ಸಿಜನ್ ಕೊರತೆಯಿಂದಲೇ ಸಾವುಗಳು ಸಂಭವಿಸಿವೆ ಎಂಬ ವಿಚಾರ ಹರಡುತ್ತಿದ್ದಂತೆಯೇ ಆಸ್ಪತ್ರೆ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Translate »