3 `ಕೋವಿಡ್-ಮಿತ್ರ’ ಕೇಂದ್ರಗಳ ಸಿದ್ಧತೆ  ಪರಿಶೀಲಿಸಿದ ಡಿಸಿ, ಪಾಲಿಕೆ ಆಯುಕ್ತೆ
ಮೈಸೂರು

3 `ಕೋವಿಡ್-ಮಿತ್ರ’ ಕೇಂದ್ರಗಳ ಸಿದ್ಧತೆ ಪರಿಶೀಲಿಸಿದ ಡಿಸಿ, ಪಾಲಿಕೆ ಆಯುಕ್ತೆ

May 3, 2021
  • ಕೋವಿಡ್ ವಾರ್ ರೂಂ ಸಹಾಯವಾಣಿಗೆ ಈವರೆಗೆ 2 ಸಾವಿರ ಕರೆ
  • ನಗರದ 3 ವಿಧಾನಸಭೆ ಕ್ಷೇತ್ರಗಳಿಗೂ ಪ್ರತ್ಯೇಕ ಕೋವಿಡ್-ಮಿತ್ರ ಸಂಖ್ಯೆ

ಮೈಸೂರು, ಮೇ 2(ವೈಡಿಎಸ್)- ಕೋವಿಡ್ ಕುರಿತು ಜನರಲ್ಲಿರುವ ಆತಂಕ, ಗೊಂದಲ ನಿವಾರಣೆಗೆ ಮೈಸೂರಿನ 3 ಕಡೆ ಜಿಲ್ಲಾಡಳಿತ ಆರಂಭಿಸುತ್ತಿರುವ `ಕೋವಿಡ್-ಮಿತ್ರ’ ಟ್ರಯೇಜ್ (ಚಿಕಿತ್ಸಾ ಸರದಿ ನಿರ್ಧಾರ) ಮತ್ತು ಸಲಹಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್ ಭಾನುವಾರ ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.

ಈ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾ ಧಿಕಾರಿ ರೋಹಿಣಿ ಸಿಂಧೂರಿ, ಕೋವಿಡ್ ವಾರ್ ರೂಂ ಆರಂಭಿಸಿ 0821-2424111 ಸಹಾಯವಾಣಿ ಸಂಖ್ಯೆ ಪ್ರಕಟಿಸಿದ ಕೆಲ ದಿನಗಳಲ್ಲಿಯೇ ಎರಡು ಸಾವಿರ ದೂರವಾಣಿ ಕರೆ ಬಂದಿವೆ. ಕರೆ ಮಾಡಿದವರು, `ಪಾಸಿಟಿವ್ ಇಲ್ಲದಿದ್ದರೂ ಸೋಂಕಿನ ಲಕ್ಷಣಗಳಿವೆ, ಏನು ಮಾಡುವುದು ಎಂಬ ಗೊಂದಲದಲ್ಲಿದ್ದೇವೆ’ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದರು. ಅವರಲ್ಲಿನ ಗೊಂದಲ, ಆತಂಕ ನಿವಾರಣೆಗೆ `ಕೋವಿಡ್ ಮಿತ್ರ’ ಆರಂಭಿಸಲಾಗಿದೆ.

ಮೈಸೂರಿನ ಜೆಎಲ್‍ಬಿ ರಸ್ತೆಯ ಸೇಟ್ ಮೋಹನದಾಸ್ ತುಳಸಿದಾಸ್ ಆಸ್ಪತ್ರೆ, ಎನ್‍ಆರ್ ಮೊಹಲ್ಲಾದ ಬೀಡಿ ಕಾರ್ಮಿಕರ ಆಸ್ಪತ್ರೆ ಮತ್ತು ಕೆಆರ್‍ಎಸ್ ರಸ್ತೆಯಲ್ಲಿನ ಪಂಚ ಕರ್ಮ ಹೈಟೆಕ್ ಆಸ್ಪತ್ರೆಯಲ್ಲಿ ಈ ಸಲಹಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ ಎಂದು ವಿವರಿಸಿದರು.
`ಕೋವಿಡ್-ಮಿತ್ರ’ ಸಂಪರ್ಕಿಸಲು ಚಾಮರಾಜ ಕ್ಷೇತ್ರದವರು ದೂ.ಸಂ. 0821-2519922, ಕೃಷ್ಣರಾಜ ಕ್ಷೇತ್ರದವರು ದೂ.ಸಂ. 0821-2517922, ನರಸಿಂಹರಾಜ ಕ್ಷೇತ್ರದವರು ದೂ.ಸಂ. 0821-2517422 ಸಹಾಯವಾಣಿಗೆ ಕರೆ ಮಾಡಬಹುದು ಎಂದರು. ಈ ವೇಳೆ ಡಾ.ಸಂತೃಪ್ತ್, ಪಾಲಿಕೆ ಆರೋಗ್ಯ ಅಧಿಕಾರಿ ಡಾ.ನಾಗರಾಜು, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸಿರಾಜ್ ಅಹಮ್ಮದ್ ಮತ್ತಿತರರು ಹಾಜರಿದ್ದರು.

Translate »