ಮೈಸೂರಲ್ಲಿ ಇಂದಿನಿಂದ 6ರಿಂದ 8ನೇ ತರಗತಿ ಆರಂಭ
ಮೈಸೂರು

ಮೈಸೂರಲ್ಲಿ ಇಂದಿನಿಂದ 6ರಿಂದ 8ನೇ ತರಗತಿ ಆರಂಭ

September 6, 2021

ಮೈಸೂರು, ಸೆ.5(ಎಂಟಿವೈ)-ಕೊರೊನಾ ಹಾವಳಿಯಿಂದಾಗಿ ಕಳೆದ ಒಂದೂವರೆ ವರ್ಷದ ಸುದೀರ್ಘ ಅವಧಿಯ ನಂತರ ರಾಜ್ಯಾದ್ಯಂತ ನಾಳೆಯಿಂದ (ಸೆ.6) 6ರಿಂದ 8ನೇ ತರಗತಿ ಆರಂಭವಾಗುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ 1,617 ಶಾಲೆಗಳಲ್ಲಿ 1,33,669 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲಿದ್ದಾರೆ.

ಕೊರೊನಾ ಸೋಂಕಿನ ಹಾವಳಿಯಿಂದಾಗಿ 2020ರ ಫೆಬ್ರವರಿಯಿಂದ ಶಾಲೆಯ ಮುಖ ವನ್ನೇ ಕಾಣದಿದ್ದ 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಸುದೀರ್ಘ ಅವಧಿಯ ಬಳಿಕ ತರಗತಿಗೆ ಹಾಜರಾಗುತ್ತಿದ್ದಾರೆ. ಕೊರೊನಾ 3ನೇ ಅಲೆಯ ಆತಂಕದ ನಡುವೆಯೂ ಅಗತ್ಯ ಸುರಕ್ಷತಾ ಕ್ರಮದೊಂದಿಗೆ ತರಗತಿ ನಡೆಸುವುದಕ್ಕೆ ಸಾಕಷ್ಟು ಒತ್ತಡ ಉಂಟಾಗಿತ್ತು.

ಈ ಹಿನ್ನೆಲೆಯಲ್ಲಿ 15 ದಿನದ ಹಿಂದಷ್ಟೇ 9ನೇ ತರಗತಿ ಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಲಾಗಿತ್ತು. ಇದೀಗ ಮಕ್ಕಳ ಶೈಕ್ಷಣಿಕ ಪ್ರಗತಿ ಹಿನ್ನಡೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ತಜ್ಞರ ಸಲಹೆ-ಸೂಚನೆ ಮೇರೆಗೆ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗುತ್ತಿದೆ.

ಮೈಸೂರು ಜಿಲ್ಲೆಯಲ್ಲಿ 978 ಸರ್ಕಾರಿ ಶಾಲೆ, 124 ಅನುದಾನಿತ ಶಾಲೆ, 507 ಅನುದಾನ ರಹಿತ ಶಾಲೆ ಹಾಗೂ 8 ಕೇಂದ್ರೀಯ ಶಾಲೆ ಸೇರಿದಂತೆ ಜಿಲ್ಲೆಯಲ್ಲಿ 1,617 ಶಾಲೆಗಳಿದ್ದು, ಅದರಲ್ಲಿ 6ರಿಂದ 8ನೇ ತರಗತಿಯ 1,33, 669 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಒಟ್ಟು 12,931 ಶಿಕ್ಷಕರು ಕರ್ತವ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಎಲ್ಲಾ ಶಾಲೆಗಳಲ್ಲೂ ಸ್ಯಾನಿಟೈಸ್ ಮಾಡುವ ಮೂಲಕ ವಿದ್ಯಾರ್ಥಿ ಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ನಾಳೆಯಿಂದ ಯಾವುದೇ ಆತಂಕವಿಲ್ಲದೇ ವಿದ್ಯಾರ್ಥಿ ಗಳು ತರಗತಿಗೆ ಹಾಜರಾಗಬಹುದಾಗಿದೆ.

ಅರ್ಧ ದಿನಕ್ಕೆ ಸೀಮಿತ: ಸೋಮವಾರದಿಂದ 6ರಿಂದ 8ನೇ ತರಗತಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಗಳ ಸುರಕ್ಷತೆ ದೃಷ್ಟಿಯಿಂದ ತರಗತಿಯನ್ನು ಅರ್ಧ ದಿನಕ್ಕಷ್ಟೇ ಸೀಮಿತಗೊಳಿಸಲಾಗಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ತರಗತಿ ನಡೆಯಲಿದೆ. ಪ್ರತೀ ಅವಧಿಗೂ 40 ನಿಮಿಷವನ್ನು ನಿಗದಿ ಮಾಡಲಾಗಿದ್ದು, ತರಗತಿಯಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿ ಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಕಡ್ಡಾಯವಾಗಿ ವಿದ್ಯಾರ್ಥಿಗಳು ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ.

ಒಪ್ಪಿಗೆ ಪತ್ರ ಕಡ್ಡಾಯ: 9ನೇ ತರಗತಿಯಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗಲು ಪೋಷಕ ರಿಂದ ಒಪ್ಪಿಗೆ ಪತ್ರ ತರುವಂತೆ ಸೂಚಿಸಲಾಗಿದೆ. 6ರಿಂದ 8ನೇ ತರಗತಿ ವಿದ್ಯಾರ್ಥಿಗಳ ಪೋಷಕರನ್ನು ಸಂಪರ್ಕಿಸಿ ಒಪ್ಪಿಗೆ ಪಡೆಯುವ ಕೆಲಸವನ್ನು ಶಾಲಾ ಶಿಕ್ಷಕರು ಮಾಡಲಿದ್ದಾರೆ.

ಸ್ಥಳೀಯ ಸಂಸ್ಥೆಗಳಿಗೆ ಹೊಣೆ: ನಾಳೆಯಿಂದ ತರಗತಿ ಆರಂಭವಾದರೂ, ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ತರಗತಿ ನಡೆಸಲಾಗುತ್ತದೆ. ಶನಿವಾರ ತರಗತಿಗೆ ಪೂರ್ಣ ಪ್ರಮಾಣದ ರಜೆ ಘೋಷಿಸಲಾಗಿದೆ. 5 ದಿನ ತರಗತಿ ನಡೆದ ಬಳಿಕ ಪ್ರತೀ ಶನಿವಾರ ಶಾಲಾ ತರಗತಿಯ ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವ ಜವಾಬ್ದಾರಿ ಯನ್ನು ಆಯಾ ಶಾಲೆಗಳ ವ್ಯಾಪ್ತಿಗೊಳಪಡುವ ಸ್ಥಳೀಯ ಸಂಸ್ಥೆಗಳಿಗೆ ಜವಾಬ್ದಾರಿ ನೀಡಲಾಗಿದೆ. ನಗರ ಪ್ರದೇಶ ದಲ್ಲಿ ಪಾಲಿಕೆ, ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂ, ತಾಪಂ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳು ಸ್ಯಾನಿಟೈಸ್ ಮಾಡುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗಿದೆ.

Translate »