ಕೇರ್ಗಳ್ಳಿ ಸರ್ವೆ ನಂ.115ರಲ್ಲಿ ಇಲ್ಲದ 7 ಎಕರೆ  ಭೂಮಿಗೆ ಪರಿಹಾರ ನೀಡಿರುವ ಮುಡಾ!
ಮೈಸೂರು

ಕೇರ್ಗಳ್ಳಿ ಸರ್ವೆ ನಂ.115ರಲ್ಲಿ ಇಲ್ಲದ 7 ಎಕರೆ ಭೂಮಿಗೆ ಪರಿಹಾರ ನೀಡಿರುವ ಮುಡಾ!

June 18, 2021

ಮೈಸೂರು, ಜೂ.17(ಆರ್‍ಕೆ)- ಆರ್.ಟಿ.ನಗರ ವಸತಿ ಬಡಾವಣೆಗಾಗಿ ಈ ಹಿಂದೆ ಸ್ವಾಧೀನ ಪಡಿಸಿಕೊಂಡಿರುವ ಮೈಸೂರು ತಾಲೂಕು, ಕೇರ್ಗಳ್ಳಿ ಸರ್ವೆ ನಂಬರ್ 115ರಲ್ಲಿ ಭೌತಿಕವಾಗಿ ಲಭ್ಯವಿಲ್ಲದ 7 ಎಕರೆ ಭೂಮಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪರಿಹಾರ ನೀಡಲಾಗಿದೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ.

ಪ್ರಾಧಿಕಾರದ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಅವರು, ಮೂಲ ಸರ್ವೆ ನಂ.115ರಲ್ಲಿ 166.20 ಎಕರೆ ಮತ್ತು ದುರಸ್ತಿಯಾಗಿರುವ ಹೊಸ ಸರ್ವೆ ನಂಬರ್‍ಗಳಲ್ಲಿ 63.25 ಎಕರೆ ಸೇರಿ ಒಟ್ಟು 230.05 ಎಕರೆಗೆ ಅಂತಿಮ ಅಧಿಸೂಚನೆ ಹೊರ ಡಿಸಲಾಗಿದ್ದು, ಆ ಪೈಕಿ 44.20 ಎಕರೆ ಭೂಮಿಯನ್ನು ಡಿ-ನೋಟಿಫೈ ಮಾಡಲಾಗಿದೆ ಎಂದರು.

ಉಳಿದ 185.25 ಎಕರೆ ಪೈಕಿ 140.18 ಎಕರೆ ಪ್ರದೇಶಕ್ಕೆ ಭೂ ಪರಿಹಾರ ವಿತರಿಸಿದ್ದು, ಭೌತಿಕವಾಗಿ ಲಭ್ಯವಿಲ್ಲದಿ ದ್ದರೂ (ಭೂಮಿಯೇ ಇಲ್ಲದಿದ್ದರೂ) 12.20 ಎಕರೆ ವಿಸ್ತೀರ್ಣ ವನ್ನು ಅಧಿಸೂಚನೆಯಲ್ಲಿ ಸೇರಿಸಲಾಗಿದೆ. ಅದರಲ್ಲಿ 7 ಎಕರೆಗೆ ಭೂಪರಿಹಾರವನ್ನು ಪಾವತಿಸಿರುವುದು ಸರ್ವೆ ಮಾಡಿಸಿದಾಗ ಕಂಡುಬಂದಿತು ಎಂದು ತಿಳಿಸಿದರು.

ಭೂಮಿ ಇಲ್ಲದಿದ್ದರೂ ಆರ್‍ಟಿಸಿಯಲ್ಲಿ ನಮೂದಿಸಿ 7 ಎಕರೆ ಭೂಮಿಗೆ ಪರಿಹಾರ ಹಣ ನೀಡಿರುವುದು ಕ್ರಮ ಬದ್ಧವಾಗಿಲ್ಲ. ಈ ಲೋಪದ ಬಗ್ಗೆ ಮುಂದಿನ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಕೈಗೊಳ್ಳಬೇಕಾದ ಕಾನೂನು ರೀತಿಯ ಕ್ರಮ ಕುರಿತು ನಿರ್ಧಾರ ಮಾಡಲಾಗುವುದು ಎಂದರು.
ಕಳೆದ 2 ತಿಂಗಳಿಂದ ನಾವು ಕೇರ್ಗಳ್ಳಿ ಸರ್ವೆ ನಂಬರ್ 115ರ ವ್ಯಾಪ್ತಿಯ ಒಟ್ಟು ವಿಸ್ತೀರ್ಣದ ಬಗ್ಗೆ ದಾಖಲಾತಿ ತರಿಸಿ ಕೊಂಡು ಸರ್ವೆ ಮಾಡಿಸಿ ನಕ್ಷೆ ತಯಾರಿಸಿದ್ದರಿಂದ ನಿಖರ ಮಾಹಿತಿಯ ಚಿತ್ರಣ ದೊರೆತಿದೆ. ಅದು ಮೂಲತಃ ಸರ್ಕಾರಿ ಗೋಮಾಳವಾಗಿದ್ದು, ಆಕಾರಬಂದ್‍ನಂತೆ ಒಟ್ಟು 202.14 ಎಕರೆ ಪ್ರದೇಶವಿದೆ. ನಂತರ ಹೊಸ ಸರ್ವೆ ನಂಬರ್‍ಗಳಾಗಿ ದುರಸ್ತಿಯಾಗಿರುವ 129.22 ಎಕರೆ ಸೇರಿ ಒಟ್ಟಾರ 230.05 ಎಕರೆ ಭೂಮಿಯನ್ನು ಆರ್.ಟಿ.ನಗರ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿ ಸೂಚನೆ ಮಾಡಲಾಗಿದೆ. ಆ ಪೈಕಿ 44.20 ಎಕರೆ ಭೂಮಿ ಯನ್ನು ಅಧಿಸೂಚನೆಯಿಂದ ಕೈಬಿಟ್ಟಿದ್ದು, ಉಳಿದ 185.25 ಎಕರೆಯನ್ನು ಸ್ವಾಧೀನಕ್ಕೊಳಪಡಿಸಲಾಗಿದೆ ಎಂದು ತಿಳಿಸಿದರು.
ಅಧಿಸೂಚನೆ ವೇಳೆ ಕೆಲ ಮಂಜೂರಾತಿದಾರರ ಭೂಮಿ ದುರಸ್ತಿಯಾಗಿ ಹೊಸ ಸರ್ವೆ ನಂಬರ್‍ಗಳಾಗಿದ್ದರೂ ಮೂಲ 115 ಸರ್ವೆ ನಂಬರ್‍ನಲ್ಲೇ ಹೆಸರು ಮುಂದುವರೆಸಿದ್ದು, ಈಗಲೂ ಪಹಣಿಯಲ್ಲಿ 193 ಎಕರೆ ಎಂದೇ ಇದೆ. ಈ ಲೋಪದೋಷ ಗಳನ್ನು ಪರಿಶೀಲಿಸದೇ ಅಧಿಸೂಚನೆ ಹೊರಡಿಸಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದ ಅವರು,

ಉದಾಹರಣೆಗೆ ಸರ್ವೆ ನಂ.115/30ರಲ್ಲಿ ಚಾಮಮ್ಮ ಹೆಸರಿಗೆ 4 ಎಕರೆ ಮಂಜೂರಾತಿಯಾಗಿ ಹೊಸ ಸರ್ವೆ ನಂ 299ರಲ್ಲಿ 4 ಎಕರೆ ಎಂದು ದುರಸ್ತಿಯಾಗಿದ್ದರೂ, ಎರಡೂ ಆರ್‍ಟಿಸಿ ಗಳಲ್ಲಿ ಆ ಹೆಸರೇ ಮುಂದುವರಿದಿದೆ ಎಂದರು. ಕೆ.ವಿ.ಕೃಷ್ಣಮೂರ್ತಿ ಎಂಬುವರಿಗೆ ಸರ್ವೆ ನಂ.115/26ರಲ್ಲಿ 3 ಎಕರೆ ಮಂಜೂರಾಗಿ ಹೊಸ ಸರ್ವೆ ನಂ. 273 ಎಂದು ದುರಸ್ತಾಗಿದ್ದು, ಆದರೆ ಪರಿಹಾರವನ್ನು ಹೊಸ ಮತ್ತು ಮೂಲ ಸರ್ವೆ ನಂಬರ್ ಭೂಮಿಗೆ 2003ರಲ್ಲಿ ಪರಿಹಾರ ನೀಡಲಾಗಿದೆ. ಅದೇ ರೀತಿ ಸರ್ವೆ ನಂ.115ರಲ್ಲಿ ಭೋರೇಗೌಡ, ಭೋರಯ್ಯ ಮತ್ತು ರುದ್ರಮೂರ್ತಿ ಎಂಬುವರ ಹೆಸರಲ್ಲಿ ಭೌತಿಕವಾಗಿ ಭೂಮಿ ಲಭ್ಯವಿಲ್ಲ ದಿದ್ದರೂ, ತಲಾ 4 ಎಕರೆಯನ್ನು ನಮೂದಿಸಿ ಕಂದಾಯ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಆರ್.ಟಿ.ನಗರ ಬಡಾವಣೆಗೆ ಅಂತಿಮ ಅಧಿಸೂಚನೆ ಮಾಡಲಾಗಿದೆ ಎಂದ ಅವರು, ಆ ಪೈಕಿ ಕೃಷ್ಣಮೂರ್ತಿಗೆ 2003ರಲ್ಲಿ 9, 13, 311ರೂ. ಹಾಗೂ ರುದ್ರ ಮೂರ್ತಿಗೆ 12,17,748 ರೂ. ಪರಿಹಾರ ವಿತರಿಸಿರುವುದು ಅಕ್ರಮವಾಗಿದೆ ಎಂದರು.

ಸರ್ವೆ ನಂ.115ರಲ್ಲಿ ಅಧಿಸೂಚನೆಗೊಳಪಟ್ಟ 126 ಎಕರೆ ಪೈಕಿ 113.20 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಿ, ಪರಿಹಾರಕ್ಕೆ ಆದೇಶಿಸಿದ್ದು, ಈಗಾಗಲೇ 84.28 ಎಕರೆ ಭೂಮಿಯ 32 ಮಾಲೀಕರಿಗೆ 2,66,25,172 ರೂ ಹಾಗೂ 99.84,45,536 ರೂ.ಗಳ ಹೆಚ್ಚುವರಿ ಪರಿಹಾರ ಹಣವನ್ನು ಮುಡಾದಿಂದ ಪಾವತಿಸಲಾಗಿದೆ. ಅಧಿಸೂಚನೆಯಾಗಿರುವ ಭೂಮಿ ಪೈಕಿ ಪರಿಹಾರ ಪಾವತಿಸಲು ಬಾಕಿ ಇರುವ ಒಟ್ಟು 41.12 ಎಕರೆ ಬಾಬ್ತು ಭೌತಿಕವಾಗಿ ಲಭ್ಯವಿಲ್ಲದ 5020 ಎಕರೆ ಹೊರತುಪಡಿಸಿ ಉಳಿದ 35.32 ಎಕರೆ ಪೈಕಿ 23.20 ಎಕರೆಗೆ ಅಧಿಸೂಚನೆ ಆಗಿರುವ ಮತ್ತು ಅಧಿಸೂಚನೆ ಆಗದಿರುವ 6 ಎಕರೆ ಸೇರಿ ಒಟ್ಟು 29.20 ಎಕರೆ ಭೂಮಿಗೆ ಪರಿಹಾರ ವಿತರಿಸಲು ಬಾಕಿ ಇದೆ ಎಂದು ರಾಜೀವ್ ತಿಳಿಸಿದರು. ಈ ಲೋಪದೋಷಗಳ ಬಗ್ಗೆ ಮುಡಾ ಸಭೆಯಲ್ಲಿ ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಕಾರ್ಯದರ್ಶಿ ಎಂ.ಕೆ. ಸವಿತ, ಸದಸ್ಯರಾದ ಕೆ.ಮಾದೇಶ್, ಲಿಂಗಯ್ಯ, ಲಕ್ಷ್ಮೀದೇವಿ, ನವೀನಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »