ಮೈಸೂರು, ಮೇ 10(ಎಂಟಿವೈ)- ಲಾಕ್‍ಡೌನ್ ವೇಳೆ ಕರ್ತವ್ಯ ನಿರ್ವಹಿಸಿದ ಮೈಸೂರಿನ 107 ಪತ್ರಕರ್ತರ ಸ್ವ್ಯಾಬ್ ಸ್ಯಾಂಪಲ್ ಅನ್ನು 2 ದಿನದ ಹಿಂದೆ ಸಂಗ್ರಹಿಸಿ ಪರೀಕ್ಷಿಸಲಾಗಿದ್ದು, ಎಲ್ಲಾ ಸ್ಯಾಂಪಲ್‍ಗಳ ವರದಿ ನೆಗೆಟಿವ್ ಬಂದಿದೆ. ಪತ್ರ ಕರ್ತರು ಹಾಗೂ ಕುಟುಂಬ ಸದಸ್ಯರು ನಿರಾಳರಾಗಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನ ಮೊದಲ ದಿನ ದಿಂದಲೂ ಮುದ್ರಣ ಹಾಗೂ ಸುದ್ದಿವಾಹಿನಿಗಳ ವರದಿಗಾರರು, ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್‍ಗಳು ಕಾರ್ಯ ನಿರ್ವಹಿಸಿದ್ದರು. ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸುದ್ದಿಗಾಗಿ ತೆರಳಿದ್ದ ಪತ್ರಕರ್ತರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾರ್ಯನಿರತ ಪತ್ರಕರ್ತರಿಗೆ ಸ್ವ್ಯಾಬ್ ಪರೀಕ್ಷೆ ನಡೆಸಿತ್ತು. ರೆಡ್‍ಜೋನ್ ಆಗಿದ್ದ ಮೈಸೂರಲ್ಲಿ ಕಾರ್ಯನಿರ್ವಹಿಸಿದ್ದ ಪತ್ರಕರ್ತರು ಕೊರೊನಾಗೆ ತುತ್ತಾಗಬಹುದೆಂಬ ಆತಂಕ ಮನೆ ಮಾಡಿತ್ತು. 2 ದಿನ ಎರಡು ಬ್ಯಾಚ್‍ಗಳಲ್ಲಿ ಮೈಸೂರಿನ 107 ಪತ್ರಕರ್ತರಿಂದ ಸ್ವ್ಯಾಬ್ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ಭಾನುವಾರ ಬಂದಿದ್ದು, ನೆಗೆಟಿವ್ ಆಗಿದೆ ಎಂದು ಆರೋಗ್ಯಾಧಿಕಾರಿ ಡಾ.ರವಿ ಸ್ಪಷ್ಟಪಡಿಸಿದ್ದಾರೆ.