ಮೈಸೂರು,ಮೇ 24(ಎಂಟಿವೈ)- ವಾರಾಂತ್ಯ ದಿನ ಭಾನುವಾರದಂದು ಜನಸಂದಣಿ ಯಿಂದ ಕೂಡಿರುತ್ತಿದ್ದ ಸಾಂಸ್ಕøತಿಕ ನಗರಿ ಮೈಸೂರು ಇಂದು ಅಕ್ಷರಶಃ ಬಿಕೋ ಎನ್ನುತ್ತಿತ್ತು. ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದ ಸಂಪೂರ್ಣ ಲಾಕ್‍ಡೌನ್‍ಗೆ ಇಂದು ಮೈಸೂರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೆಳಗ್ಗಿನಿಂದ ಜನ ಹಾಗೂ ವಾಹನ ಸಂಚಾರವಿಲ್ಲದೆ ಕಫ್ರ್ಯೂನಂತಹ ವಾತಾವರಣ ನಿರ್ಮಾಣವಾಗಿತ್ತು.
ಸ್ವಯಂಪ್ರೇರಣೆಯಿಂದ ಜನರು ಮನೆ ಯಲ್ಲಿಯೇ ಇದ್ದುದ್ದರಿಂದ ಪೊಲೀಸರಿಗೆ ಭದ್ರತಾ ಕಾರ್ಯ ಸುಗಮವಾಗಿ ಸಾಗಿತು. ಯಾವುದೇ ಅಹಿತಕರ ಘಟನೆ, ಅಡ ಚಣೆಯಿಲ್ಲದೆ ಸಂಪೂರ್ಣ ಲಾಕ್‍ಡೌನ್ ಯಶಸ್ವಿಯಾಗಿ ನೆರವೇರಿತು.
ಅಗತ್ಯ ವಸ್ತುಗಳ ಮಾರಾಟಕ್ಕೆ ವಿನಾ ಯಿತಿಯಿದ್ದರೂ ಬಂದ್: ನಾಲ್ಕನೇ ಅವಧಿಯ ಲಾಕ್‍ಡೌನ್‍ನಲ್ಲಿ ವಾಣಿಜ್ಯ ವಹಿವಾಟಿಗೆ ವಿನಾಯಿತಿ ನೀಡಲಾಗಿತ್ತಾದರೂ ಬಹು ತೇಕ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ದಿನಸಿ ಅಂಗಡಿಗಳು ಬಾಗಿಲು ಬಂದ್ ಆಗಿದ್ದ ರಿಂದ ಮೈಸೂರಿನ ಹೃದಯ ಭಾಗ ಬಿಕೋ ಎನ್ನುತ್ತಿತ್ತು. ಮೆಡಿಕಲ್ ಶಾಪ್, ಹಣ್ಣು-ತರಕಾರಿ ಮಳಿಗೆಗಳಿಗೂ ಗ್ರಾಹಕರ ಸಂಖ್ಯೆ ಕ್ಷೀಣಿಸಿತ್ತು. ಹೋಟೆಲ್‍ನಲ್ಲಿ ಪಾರ್ಸೆಲ್ ವ್ಯವಸ್ಥೆಗೆ ವಿನಾಯಿತಿ ನೀಡಿದ್ದರೂ ಬಹು ತೇಕ ಹೋಟೆಲ್‍ಗಳು ಬಾಗಿಲು ತೆರೆದಿರ ಲಿಲ್ಲ. ಇದರಿಂದ ವಿನಾಯಿತಿ ನೀಡಿದ್ದರೂ ಗ್ರಾಹಕರ ಕೊರತೆಯಿಂದಾಗಿ ಲಾಕ್‍ಡೌನ್‍ಗೆ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳು ಬಂದ್ ಮಾಡಿ ಸಹಕರಿಸಿದ್ದ ಪರಿಣಾಮ ಜನ ಸಂಚಾರಕ್ಕೆ ಕಡಿವಾಣ ಹಾಕಿದಂತಾಗಿತ್ತು.
ಮಾಂಸ ಮಾರಾಟವೂ ಡಲ್: ಭಾನು ವಾರ ಮಾಂಸಾಹಾರ ಸೇವನೆಗೆ ಮುಗಿಬೀಳು ತ್ತಿದ್ದ ಜನತೆ ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆ ಇಂದು ಮಾಂಸ ಖರೀದಿಗೂ ಹಿಂದೇಟು ಹಾಕಿದರು. ಮೈಸೂರಲ್ಲಿ ಸುಮಾರು 500 ಮಾಂಸ ಮಾರಾಟ
ಮಳಿಗೆಗಳಿಗೆ ಮಾಂಸ ಪೂರೈಸಲು ಪ್ರತಿ ಭಾನುವಾರ ಹಳೆ ಕೆಸರೆ ಕುರಿಮಂಡಿಯಲ್ಲಿರುವ ಖಸಾಯಿಖಾನೆಯಲ್ಲಿ 800 ಕುರಿ ವಧೆ ಮಾಡಲಾಗಿದೆ. ರಂಜಾನ್ ಹಿನ್ನೆಲೆಯಲ್ಲಿ 1400 ಕುರಿ, ಮೇಕೆ ವದೆ ಮಾಡಬೇಕಾಗಿತ್ತಾದರೂ ಲಾಕ್‍ಡೌನ್ ಹಿನ್ನೆಲೆ ಮಳಿಗೆಗಳಲ್ಲಿ ಮಾರಾಟ ಡಲ್ ಆಗಿತ್ತು. ರಂಜಾನ್ ಆಚರಣೆಗೆ ಮಾಂಸ ಖರೀದಿಸಿದ್ದವರನ್ನು ಬಿಟ್ಟರೆ ಪ್ರತಿ ಭಾನುವಾರ ರೆಗ್ಯುಲರ್ ಆಗಿ ಖರೀದಿಸುತ್ತಿದ್ದ ಗ್ರಾಹಕರಲ್ಲಿ ಶೇ.50ರಷ್ಟು ಗ್ರಾಹಕರು ಅಂಗಡಿ ಗಳತ್ತ ಸುಳಿಯಲಿಲ್ಲ. ಇದರಿಂದ ಬಹುತೇಕ ಎಲ್ಲಾ ಸ್ಟಾಲ್‍ಗಳಲ್ಲೂ ಸಂಜೆವರೆಗೂ ಶೇ.30ರಷ್ಟು ಮಾಂಸ ಉಳಿದಿತ್ತು. ಹೋಟೆಲ್, ಫಾಟ್‍ಫುಡ್ ಇಲ್ಲದ ಕಾರಣ ಉಳಿಕೆ ಮಾಂಸ ಮಾರಾಟ ಮಾಡಲು ಮಳಿಗೆಗಳ ಮಾಲೀಕರು ಪರದಾಡುವಂತಾಗಿತ್ತು.
ಬಣ ಗುಟ್ಟ ಮಾರುಕಟ್ಟೆ: ದೇವರಾಜ ಮಾರುಕಟ್ಟೆ, ವಾಣಿವಿಲಾಸ, ಮಂಡಿ ಮಾರುಕಟ್ಟೆ ಸೇರಿದಂತೆ ಎಲ್ಲಾ ಮಾರುಕಟ್ಟೆಯಲ್ಲಿ ವ್ಯಾಪಾರಿಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಬಹುತೇಕ ಎಲ್ಲಾ ಮಳಿಗೆಗಳನ್ನು ಬಂದ್ ಮಾಡಿದ್ದ ವ್ಯಾಪಾರಿಗಳು ವಿಶ್ರಾಂತಿಗೆ ಮೊರೆ ಹೋಗಿದ್ದರು. ಜನರು ಮನೆಯಿಂದ ಹೊರ ಬರದೇ ಇದ್ದ ಕಾರಣ ವ್ಯಾಪಾರ ನಡೆಯುವುದಿಲ್ಲ ಎನ್ನುವುದನ್ನು ಅರಿತ ವ್ಯಾಪಾರಿಗಳು ಮಳಿಗೆ ತೆರೆಯದೇ ಇರುವುದೇ ಲೇಸೆಂದು ನಿರ್ಧರಿಸಿದ್ದರಿಂದ ಮಾರುಕಟ್ಟೆಗೂ ಲಾಕ್‍ಡೌನ್ ಬಿಸಿ ತಟ್ಟಿತ್ತು.
ಬಸ್ ನಿಲ್ದಾಣದಲ್ಲೂ ನೀರವ ಮೌನ: ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಇದರಿಂದ ಮೈಸೂರಿಂದ ಬೆಂಗಳೂರು, ಕೊಡಗು, ಮಂಡ್ಯ, ಚಾಮರಾಜನಗರ, ಮಂಗ ಳೂರು ಸೇರಿದಂತೆ ವಿವಿಧೆಡೆ ಕಳೆದ ಐದು ದಿನಗಳಿಂದ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಸಂಚಾರ ಆರಂಭಿಸಲಾಗಿತ್ತು. ಭಾನುವಾರ ಸಂಪೂರ್ಣ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಪ್ರಯಾಣಿಕರು ಬಸ್ ನಿಲ್ದಾಣದತ್ತ ಸುಳಿಯಲ್ಲಿಲ್ಲ.
ಬಿಗಿ ಬಂದೋಬಸ್ತ್: ಬಹುತೇಕ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ವಾಹನ ಸಂಚಾರಕ್ಕೆ ಕಡಿವಾಣ ಹಾಕಿ ಹೊರ ಜಿಲ್ಲೆಯಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲೂ ಬಿಗಿ ತಪಾಸಣೆ ವ್ಯವಸ್ಥೆ ಮಾಡಲಾಗಿತ್ತು. ಅನಗತ್ಯವಾಗಿ ಬಂದ ವಾಹನಗಳನ್ನು ವಾಪಸ್ಸು ಕಳುಹಿಸುತ್ತಿದ್ದರು. ಇದರಿಂದ ಮೈಸೂರಿಗೆ ಬರುವ ವಾಹನಗಳ ಸಂಖ್ಯೆ ಕ್ಷೀಣಿಸಿದಂತಾಗಿತ್ತು. ಮೈಸೂರಿನ ವಿವಿಧ ರಸ್ತೆಗಳಲ್ಲೂ ಪೊಲೀಸರು ತಪಾಸಣೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಕಡಿವಾಣ ಹಾಕಿದಂತಾಗಿತ್ತು.
ಮೀನಾ ಬಜಾರ್ ಬಂದ್: ರಂಜಾನ್ ವೇಳೆ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಮೀನಾ ಬಜಾರ್‍ನ ಸಾಡೆ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ರಂಜಾನ್ ಸಂದರ್ಭದಲ್ಲಿ ಬಟ್ಟೆ, ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮೀನಾ ಬಜಾರ್ ಹೆಸರುವಾಸಿಯಾದ ಸ್ಥಳ. ರಂಜಾನ್ ಹಿಂದಿನ ದಿನ ಈ ರಸ್ತೆಯಲ್ಲಿ ಸಾವಿರಾರು ಮಂದಿ ಖರೀದಿ ಮಾಡಲು ಮುಗಿಬೀಳುತ್ತಿದ್ದರು. ವ್ಯಾಪಾರ ವಹಿವಾಟಿಗಾಗಿ ಮಿಲಾದ್ ಪಾರ್ಕ್ ರಸ್ತೆಯಿಂದ ಹಳೇ ಎಪಿಎಂಸಿವರೆಗೂ ವಾಹನ ಸಂಚಾರ ನಿಷೇಧಿಸಲಾಗುತ್ತಿತ್ತು. ಆದರೆ ಲಾಕ್‍ಡೌನ್ ಪರಿಣಾಮ ಇಡೀ ಮೀನಾ ಬಜಾರ್ ವಾಹನ ಸಂಚಾರ ಮತ್ತು ಜನ ಸಂಚಾರವಿಲ್ಲದೆ ಬಣ ಗುಡು ತಿತ್ತು. ಮುಂಜಾಗ್ರತ ಕ್ರಮವಾಗಿ ರಸ್ತೆಯ 2 ತುದಿಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರು.
ಸೈಕ್ಲಿಸ್ಟ್ ಮಾತಿನ ಚಕಮಕಿ: ಮಾಸ್ಕ್ ಧರಿಸದೆ ಬಂದ ಸೈಕ್ಲಿಸ್ಟ್ ಪೆÇಲೀಸರ ಜೊತೆ ಮಾತಿನ ಚಕಮಕಿ ನಡೆಸಿದ ಘಟನೆ ಸಯ್ಯಾಜಿರಾವ್ ರಸ್ತೆಯ ಆಯುರ್ವೇದ ಕಾಲೇಜು ವೃತ್ತದಲ್ಲಿ ನಡೆಯಿತು. ಮಾಸ್ಕ್ ಧರಿಸುವಂತೆ ಪೆÇಲೀಸರು ಸೂಚಿಸಿದಾಗ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸೈಕ್ಲಿಸ್ಟ್, ನಾನೊಬ್ಬ ವೈದ್ಯ, ಮಾಸ್ಕ್ ಅವಶ್ಯಕತೆ ಇಲ್ಲ ಎಂದು ವಾಗ್ವಾದಕ್ಕೆ ಇಳಿದರು. ಅಲ್ಲದೆ ವ್ಯಾಯಾಮ ಮಾಡುವಾಗ ಮಾಸ್ಕ್ ಅವಶ್ಯಕತೆ ಇಲ್ಲವೆಂದು ಹೇಳಿ, ಮೊಬೈಲ್‍ನಲ್ಲಿ ಕಾನೂನು ತೋರಿಸಲು ಮುಂದಾದರು. ಈ ಮಾತಿನ ಚಕಮಕಿಯನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದ ಮಾಧ್ಯಮದವರ ಮೇಲೂ ತಿರುಗಿಬಿದ್ದಿದ್ದಾನೆ. ಈ ವೇಳೆ ಪೆÇಲೀಸರ ಕರ್ತವ್ಯಕ್ಕೆ ಸಹಕರಿಸುವಂತೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಬಳಿಕ ಜಾಗ ಖಾಲಿದರು.
ಓಪಿಡಿ ಸೇವೆ ಬಂದ್: ಕೆ.ಆರ್‍ಆಸ್ಪತ್ರೆ, ಚೆಲುವಾಂಬ, ಮಕ್ಕಳ ಆಸ್ಪತ್ರೆ ಸೇರಿ ನಗರದ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಬಂದ್ ಮಾಡಲಾಗಿತ್ತು. ತುರ್ತು ಸೇವೆಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು, ನರ್ಸ್, ಸಿಬ್ಬಂದಿ ಹೊರತು ಪಡಿಸಿ ಉಳಿದಂತೆ ಎಲ್ಲರಿಗೂ ರಜೆಕೊಡಲಾಗಿತ್ತು. ಸದಾ ಜನಜಂಗುಳಿಯಂತೆ ಇರುತ್ತಿದ್ದ ಕೆ.ಆರ್.ಆಸ್ಪತ್ರೆ ಓಪಿಡಿ ಬಿಕೋ ಅಂದರೆ, ಇಡೀ ಆಸ್ಪತ್ರೆಯ ಕ್ಯಾಂಪಸ್‍ನಲ್ಲಿ ಮೌನದ ಛಾಯೆ ಆವರಿಸಿತು. ಆಗಿಂದಾಗ್ಗೆ ದೂರದೂರಿಂದ ಬರುತ್ತಿದ್ದ ಆಂಬ್ಯುಲೆನ್ಸ್‍ಗಳ ಸದ್ದು ಇಂದು ಕೇಳಿಸದಂತಿತ್ತು.