6 ತಿಂಗಳ ವಾಹನ ತೆರಿಗೆ ಮನ್ನಾ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಲಾರಿ ಮಾಲೀಕರ ಮನವಿ
ಮೈಸೂರು

6 ತಿಂಗಳ ವಾಹನ ತೆರಿಗೆ ಮನ್ನಾ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಲಾರಿ ಮಾಲೀಕರ ಮನವಿ

May 31, 2020

ಮೈಸೂರು, ಮೇ 30(ಆರ್‍ಕೆ)- ಲಾಕ್‍ಡೌನ್‍ನಿಂದ ಸಾರಿಗೆ ಸ್ಥಗಿತಗೊಂಡಿದ್ದ ಕಾರಣ ಸರಕು ಸಾಗಣೆ ವಾಹನಗಳ 6 ತಿಂಗಳ ತೆರಿಗೆ ಹಾಗೂ ವಿಮೆ ಶುಲ್ಕವನ್ನು ಮನ್ನಾ ಮಾಡಿ ಕೊಡುವಂತೆ ಲಾರಿ ಮಾಲೀಕರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅವರಲ್ಲಿ ಮನವಿ ಮಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಚಿವರನ್ನು ಮೈಸೂರಿನ ತ್ಯಾಗರಾಜ ರಸ್ತೆ ಯಲ್ಲಿರುವ ಜಿಲ್ಲಾ ಪತ್ರಕರ್ತರ ಭವನದಲ್ಲಿ ಭೇಟಿ ಮಾಡಿದ ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಕೋದಂಡರಾಮು ನೇತೃತ್ವದ ಪದಾಧಿಕಾರಿಗಳು, ಕೋವಿಡ್-19 ಲಾಕ್‍ಡೌನ್ ನಿರ್ಬಂಧದಿಂದಾಗಿ ತಾವು ತೀವ್ರ ಸಂಕಷ್ಟದಲ್ಲಿರು ವುದರಿಂದ ಲಾರಿಗಳ ತೆರಿಗೆ ಮತ್ತು ಇನ್ಷೂರೆನ್ಸ್ ಅನ್ನು ಆರು ತಿಂಗಳವರೆಗೆ ಮನ್ನಾ ಮಾಡಿಸುವಂತೆ ಕೋರಿ ಮನವಿ ಪತ್ರ ನೀಡಿದರು.

ಒಕ್ಕೂಟದ ರಾಜ್ಯಾಧ್ಯಕ್ಷ ಷಣ್ಮುಗಪ್ಪ ಅವರ ಮನವಿಗೆ ಸ್ಪಂದಿಸಿ 2 ತಿಂಗಳ ವಿಮೆ ಮತ್ತು ತೆರಿಗೆ ಪಾವತಿಗೆ ವಿನಾಯಿತಿ ನೀಡಿರುವ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಹಾಗೂ ಲಾರಿ ಮಾಲೀಕರು ತೀವ್ರ ಸಮಸ್ಯೆ ಎದುರಿಸುತ್ತಿರುವುದರಿಂದ ಇನ್ನೂ ನಾಲ್ಕು ತಿಂಗಳವರೆಗೆ ಮನ್ನಾ ಮಾಡುವಂತೆ ಅವರು ಮನವಿ ಮಾಡಿದರು.

ಮನವಿ ಆಲಿಸಿದ ಸಚಿವರು, ಪರಿಶೀಲಿಸಿ ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸುತ್ತೇವೆ ಎಂದು ಭರವಸೆ ನೀಡಿದರು ಎಂದು ಕೋದಂಡರಾಮು ತಿಳಿಸಿದರು.

Translate »