ವಿದ್ಯುತ್ ಗುತ್ತಿಗೆದಾರರ ಸಂಘದಿಂದ ನಾಳೆಯಿಂದ ಆಮರಣಾಂತ ಉಪವಾಸ
ಮೈಸೂರು

ವಿದ್ಯುತ್ ಗುತ್ತಿಗೆದಾರರ ಸಂಘದಿಂದ ನಾಳೆಯಿಂದ ಆಮರಣಾಂತ ಉಪವಾಸ

November 5, 2020

ಮೈಸೂರು, ನ.4(ಎಂಟಿವೈ)- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಹೊರಗಿನ ಗುತ್ತಿಗೆದಾರರಿಗೆ ಮಣೆ ಹಾಕುತ್ತಿದೆ. ಸೆಸ್ಕ್ ಪೂರ್ಣಗುತ್ತಿಗೆ ಆಧಾರದಡಿ ಕರೆದಿರುವ ಟೆಂಡರ್ ರದ್ದು ಮಾಡುವಂತೆ ಆಗ್ರಹಿಸಿ ನ.6ರಿಂದ ಸೆಸ್ಕ್ ಕಚೇರಿಗಳೆದುರು ಆಮರಣಾಂತ ಉಪವಾಸ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ಸಿ.ರಮೇಶ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗೋಷ್ಠಿ ನಡೆಸಿದ ಅವರು, ಚಾಮರಾಜನಗರ, ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ ವೃತ್ತ ವಿಭಾಗ, ಉಪ ವಿಭಾಗಗಳಲ್ಲಿ ಸಮಗ್ರ ನಿರ್ವಹಣೆ ಹಾಗೂ ಸುಧಾರಣೆ ಕಾರ್ಯದಡಿ ಸಣ್ಣ ಕಾಮಗಾರಿಗಳನ್ನು ಒಗ್ಗೂಡಿಸಿ ಬಹುಕೋಟಿ ಮೊತ್ತದ ಬೃಹತ್ ಟೆಂಡರ್ ನಡೆಸಲಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಇಂಧನ ಇಲಾಖೆಯಿಂದ ಕೆಟಿಟಿಪಿ ಕಾಯಿದೆ ಅನ್ವಯ ತಿದ್ದುಪಡಿ ತಂದು ಈ ಟೆಂಡರನ್ನು 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ವರೆಗೆ ತುಂಡು ಗುತ್ತಿಗೆಗಳಾಗಿ ವಿಂಗಡಿಸಿ ಕಾಮಗಾರಿ ವಹಿಸುವಂತೆ ಆದೇಶಿಸಿದ್ದಾರೆ. ಅಧಿಕಾರಿಗಳು ಈ ಆದೇಶ ಉಲ್ಲಂಘಿಸಿ ಪೂರ್ಣಗುತ್ತಿಗೆ ಆಧಾರದ ಟೆಂಡರ್ ಕರೆದಿದ್ದರೆ, ಕೂಡಲೇ ಕೈಬಿಡಬೇಕು. ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಬೇಕು. ಈ ಸಂಬಂಧ ನ.5ರಂದು ಸೆಸ್ಕ್ ವ್ಯಾಪ್ತಿಯ 5 ಜಿಲ್ಲೆಗಳ ಗುತ್ತಿಗೆದಾರರ ಸಂಘ ಸಭೆ ನಡೆಸುತ್ತಿದೆ. ಅಧಿ ಕಾರಿಗಳು ನಮ್ಮ ಮನವಿಗೆ ಸ್ಪಂದಿಸಿದರೆ ಹೋರಾಟ ಕೈ ಬಿಡುತ್ತೇವೆ. ಇಲ್ಲವಾದಲ್ಲಿ ನ.6 ರಂದು ಸೆಸ್ಕ್ ವ್ಯಾಪ್ತಿಯ ಐದೂ ಜಿಲ್ಲೆಗಳ 2 ಸಾವಿರ ವಿದ್ಯುತ್ ಗುತ್ತಿಗೆದಾರರು ಸೆಸ್ಕ್ ಕಚೇರಿ ಎದುರು ಉಪವಾಸ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಂ.ಆರ್.ಧರ್ಮ ವೀರ, ಉಪಾಧ್ಯಕ್ಷ ಹೆಚ್.ಜೆ. ರಾಘವೇಂದ್ರ, ಸಂಘದ ಚಾಮರಾಜನಗರ ಜಿಲ್ಲಾಧ್ಯಕ್ಷ ಅಫ್ಜಲ್ ಷರೀಫ್, ಮಂಡ್ಯ ಜಿಲ್ಲಾಧ್ಯಕ್ಷ ದಿನೇಶ್ ಸುದ್ದಿಗೋಷ್ಠಿಯಲ್ಲಿದ್ದರು.

 

 

Translate »