ಮಳವಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ ಪ್ರಕರಣ; ವೈದ್ಯಕೀಯ ವರದಿ ಆಧರಿಸಿ ಟ್ಯೂಷನ್ ಟೀಚರ್ ಕಾಂತರಾಜು ಬಂಧನ
ಮಂಡ್ಯ

ಮಳವಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ ಪ್ರಕರಣ; ವೈದ್ಯಕೀಯ ವರದಿ ಆಧರಿಸಿ ಟ್ಯೂಷನ್ ಟೀಚರ್ ಕಾಂತರಾಜು ಬಂಧನ

October 14, 2022

ಮಳವಳ್ಳಿ, ಅ.13-ನಾಪತ್ತೆಯಾಗಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ನಿರ್ಮಾಣ ಹಂತದ ಕಟ್ಟಡದಲ್ಲಿರುವ ಸಂಪ್ ನಲ್ಲಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ತಿರುವು ದೊರೆತಿದ್ದು, ಟ್ಯೂಷನ್ ಟೀಚರ್, ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಟ್ಯೂಷನ್ ಟೀಚರ್ ಕಾಂತರಾಜು, 10 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ವೆಸಗಿ, ಹತ್ಯೆ ಮಾಡಿದ ಕಾಮುಕನಾಗಿದ್ದು, ಈತನನ್ನು ಬಂಧಿಸಿರುವ ಮಳವಳ್ಳಿ ಟೌನ್ ಠಾಣೆ ಪೊಲೀಸರು ಕೊಲೆ, ಸಾಕ್ಷ್ಯ ನಾಶ, ಅತ್ಯಾಚಾರ ಮತ್ತು ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.

ವಿವರ: ಮಳವಳ್ಳಿ ಪಟ್ಟಣದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡು ತ್ತಿರುವ 10 ವರ್ಷದ ವಿದ್ಯಾರ್ಥಿನಿ ಅ.11ರಂದು ಬೆಳಗ್ಗೆ 10.30ರ ವೇಳೆ ಯಲ್ಲಿ ಟ್ಯೂಷನ್ ಸೆಂಟರ್ ಹತ್ತಿರ ಹೋಗಿ ಎಷ್ಟು ಗಂಟೆಗೆ ಟ್ಯೂಷನ್ ಇದೆ ಎಂದು ಕೇಳಿಕೊಂಡು ಬರುವುದಾಗಿ ತಿಳಿಸಿ ಮನೆಯಿಂದ ಹೋದ ವಳು ಮಧ್ಯಾಹ್ನ 1 ಗಂಟೆಯಾದರೂ ವಾಪಸ್ಸಾಗಿರಲಿಲ್ಲ. ಈಕೆಯ ತಾತ ಟ್ಯೂಷನ್ ಸೆಂಟರ್ ಬಳಿ ತೆರಳಿ ಟ್ಯೂಷನ್ ಟೀಚರ್ ಕಾಂತರಾಜು ಅವರನ್ನು ವಿಚಾರಿಸಿದಾಗ ಅವರು ನಿಮ್ಮ ಮೊಮ್ಮಗಳು ಸೆಂಟರ್‍ಗೆ ಬಂದಿದ್ದಳು. ಆದರೆ ಪುಸ್ತಕ ತಂದಿರಲಿಲ್ಲ. ಹೀಗಾಗಿ ಪುಸ್ತಕ ತರುವಂತೆ ಹೇಳಿ ಕಳುಹಿ ಸಿದೆ ಎಂದು ತಿಳಿಸಿದ್ದಲ್ಲದೇ, ಇನ್ನೂ ನಿಮ್ಮ
ಮೊಮ್ಮಗಳು ಬಂದಿಲ್ಲವೇ? ಎಂದು ಪ್ರಶ್ನಿಸಿ, ವಿದ್ಯಾರ್ಥಿನಿಗಾಗಿ ತಾನೂ ಹುಡು ಕಾಡುವ ನಾಟಕ ಮಾಡಿದ್ದಾನೆ. ಮೊಮ್ಮಗಳು ಕಾಣೆಯಾಗಿರುವ ಬಗ್ಗೆ ಆಕೆಯ ತಾತ ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಟ್ಯೂಷನ್ ಸೆಂಟರ್ ಬಳಿ ಇರುವ ಬೇಕರಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಪರಿಶೀಲಿಸುತ್ತಿದ್ದರು. ಅದೇ ವೇಳೆ ಮಳವಳ್ಳಿ-ಮೈಸೂರು ರಸ್ತೆಯಲ್ಲಿರುವ ಲಿಂಗೇಗೌಡ ಬಿಲ್ಡಿಂಗ್ ಸಮೀಪದ ನಾಗರಾಜು ಎಂಬುವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದ ಸಂಪ್‍ನಲ್ಲಿ ಹೆಣ್ಣು ಮಗು ಬಿದ್ದಿದೆ ಎಂಬ ವಿಚಾರ ತಿಳಿದು ಅಲ್ಲಿಗೆ ಹೋಗಿ ನೋಡಿದಾಗ ನಾಪತ್ತೆಯಾಗಿದ್ದ ತಮ್ಮ ಮೊಮ್ಮಗಳೇ ಸಂಪ್‍ನಲ್ಲಿ ಶವವಾಗಿ ಬಿದ್ದಿದ್ದಾಳೆ ಎಂಬುದು ತಾತನಿಗೆ ತಿಳಿದಿದೆ.

ಈ ಹಿನ್ನೆಲೆಯಲ್ಲಿ ಅವರು ಅ.11ರಂದು ಸಂಜೆ 7 ಗಂಟೆಯಲ್ಲಿ ಠಾಣೆಗೆ ತೆರಳಿ ತನ್ನ ಮೊಮ್ಮಗಳನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ನೀರಿನ ಸಂಪ್‍ನಲ್ಲಿ ಹಾಕಿದ್ದಾರೆ ಎಂದು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಹೆಸರಿಸದೇ ಕೊಲೆ ಮತ್ತು ಸಾಕ್ಷ್ಯ ನಾಶ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ವಿದ್ಯಾರ್ಥಿನಿಯ ಶವ ದೊರೆತ ಸಂಪ್ ಬಳಿಗೂ ಟ್ಯೂಷನ್ ಟೀಚರ್ ಕಾಂತರಾಜು ಬಂದು ದುಃಖ ವ್ಯಕ್ತಪಡಿಸಿದ್ದ. ಅಲ್ಲದೇ ಬಾಲಕಿಯನ್ನು ಕೊಂದವರ ಬಗ್ಗೆ ಆಕ್ರೋಶವನ್ನೂ ವ್ಯಕ್ತಪಡಿಸಿ, ನಾಟಕವಾಡಿದ್ದ ಎಂದು ಹೇಳಲಾಗಿದೆ.

ಟ್ಯೂಷನ್ ಟೀಚರ್ ಕಾಂತರಾಜು ವರ್ತನೆ ಮತ್ತು ಬೇಕರಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಕೆಲವು ದೃಶ್ಯಗಳನ್ನಾಧರಿಸಿ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಆತನೇ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ, ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ನಿರ್ಮಾಣ ಹಂತದ ಕಟ್ಟಡದ ಸಂಪ್‍ನಲ್ಲಿ ಶವವನ್ನು ಹಾಕಿದ್ದ. ತನ್ನ ಮೇಲೆ ಅನುಮಾನ ಬಾರದಿರಲಿ ಎಂದು ವಿದ್ಯಾರ್ಥಿನಿಯ ತಾತನ ಜೊತೆ ಸೇರಿ ಆಕೆಯನ್ನು ಹುಡುಕಾಡಿದ್ದ ಎಂಬುದು ಬಯಲಾಗಿದೆ. ಮತ್ತೊಂದೆಡೆ ನಿನ್ನೆ (ಅ.12) ಕಾಂತರಾಜುವೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದಾನೆ ಎಂಬ ವಿಚಾರ ಹರಡಿ, ಪಟ್ಟಣದಲ್ಲಿ ಆತನ ವಿರುದ್ಧ ತೀವ್ರ ಆಕ್ರೋಶ ಭುಗಿಲೆದ್ದಿತ್ತು. ವಿದ್ಯಾರ್ಥಿನಿಯ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿದ್ದಲ್ಲದೇ, ಕಾಂತರಾಜು ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು.

ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಕಾಂತರಾಜುವನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿ ಕೃತ್ಯ ನಡೆದ ಸ್ಥಳ ಹಾಗೂ ವಿದ್ಯಾರ್ಥಿನಿಯ ಶವ ದೊರೆತ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದರು. ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದೆಯೇ ಎಂಬುದರ ಬಗ್ಗೆ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದ ಪೊಲೀಸರು, ವಿದ್ಯಾರ್ಥಿನಿಯ ಹತ್ಯೆಗೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಕಲೆ ಹಾಕುವಲ್ಲಿ ಕಾರ್ಯನಿರತರಾಗಿದ್ದರು. ಈ ನಡುವೆ ಇಂದು ಸಂಜೆ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಂತೆ ಅತ್ಯಾಚಾರ ನಡೆದಿದೆ ಎಂಬ ಅಭಿಪ್ರಾಯವನ್ನು ಪರಿಗಣಿಸಿ, ಪ್ರಕರಣದಲ್ಲಿ ಈಗಾಗಲೇ ದಾಖಲಾಗಿದ್ದ ಕೊಲೆ ಮತ್ತು ಸಾಕ್ಷ್ಯ ನಾಶ ಕಲಂಗಳ ಜೊತೆ ಪೋಕ್ಸೋ ಮತ್ತು ಅತ್ಯಾಚಾರ ಕಲಂಗಳನ್ನು ಸೇರಿಸಿದ್ದಲ್ಲದೇ ಟ್ಯೂಷನ್ ಟೀಚರ್ ಕಾಂತರಾಜುವನ್ನು ಆರೋಪಿ ಎಂದು ನಮೂದಿಸಿ, ಆತನನ್ನು ರಾತ್ರಿ ವೇಳೆಗೆ ಬಂಧಿಸಿದ್ದಾರೆ.

Translate »