ಮೈಸೂರಲ್ಲಿ ರಾಷ್ಟ್ರಕವಿ ಕುವೆಂಪು ಸ್ಮರಣೆ
ಮೈಸೂರು

ಮೈಸೂರಲ್ಲಿ ರಾಷ್ಟ್ರಕವಿ ಕುವೆಂಪು ಸ್ಮರಣೆ

December 30, 2021

ಮೈಸೂರು,ಡಿ.29(ಪಿಎಂ)-ರಾಷ್ಟ್ರಕವಿ ಕುವೆಂಪು ತಮ್ಮ ಸಾಹಿತ್ಯ ಕ್ರಾಂತಿಯ ಮೂಲಕ ಕನ್ನಡ ಭಾಷೆಯನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡಿದರು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಮರಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶ್ರೀ ಕುವೆಂಪು ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚರಣೆಯನ್ನು ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತ ನಾಡಿದರು. ಸಾಹಿತ್ಯದ ಮೂಲಕ ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಇದೇ ಮೈಸೂರಿನಲ್ಲಿ ನಡೆದಾಡಿದ ಅವರು ಇಲ್ಲಿಯೇ ತಮ್ಮ ಸಾಹಿತ್ಯ ಕೃಷಿಗೆ ಸ್ಫೂರ್ತಿ ಪಡೆದರು. ಅವರ ಅಗಾಧ ಸಾಹಿತ್ಯ ಕೃಷಿಗೆ ವಿಶ್ವ ಮಟ್ಟದಲ್ಲಿ ಮನ್ನಣೆ ದೊರಕಿದೆ. ಈಗಾಗಲೇ ಶಾಲಾ-ಕಾಲೇಜುಗಳ ಪಠ್ಯದಲ್ಲಿ ಕುವೆಂಪು ಅವರ ಸಾಹಿತ್ಯ ಇರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ಕುವೆಂಪು ಎಂಬ ಮೇರು ವ್ಯಕ್ತಿತ್ವ ಚಿರಪರಿಚಿತವೇ ಆಗಿದೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣದ ಭರಾಟೆಯಲ್ಲಿ ಇಂದು ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ.ಆದರೆ ನಾವು ಪುಸ್ತಕ ಓದುವ ಹವ್ಯಾಸ ಉಳಿಸಿ ಬೆಳೆಸಿಕೊಳ್ಳಬೇಕು. ಅದರಲ್ಲೂ ವಿದ್ಯಾರ್ಥಿ ಸಮುದಾಯ ಪುಸ್ತಕ ಓದುವ ಸಂಸ್ಕøತಿ ಬೆಳೆಸಿಕೊಂಡು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ವಿಶೇಷವಾಗಿ ಕುವೆಂಪು ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಇಟ್ಟುಕೊಳ್ಳಬೇಕು ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮುಖ್ಯ ಭಾಷಣ ಮಾಡಿದ ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ಮಾಜಿ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ, ಇಂದು ಇಡೀ ರಾಜ್ಯಾದ್ಯಂತ ಕುವೆಂಪು ಜನ್ಮದಿನದ ಸಂಭ್ರಮ ಮನೆ ಮಾಡಿದೆ. ಅವರ ಜನ್ಮದಿನಾಚರಣೆ ನಮ್ಮ ನಾಡಿನ ಹೆಮ್ಮೆ. ಆದರೆ ಕುವೆಂಪು ಅವರು ಬದುಕಿದ್ದರೆ, ವಿಜೃಂಭಣೆಯ ತಮ್ಮ ಜನ್ಮದಿನಾಚರಣೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಏಕೆಂದರೆ ಅವರು ವ್ಯಕ್ತಿ ಪೂಜೆ ವಿರೋಧಿಸುತ್ತಿದ್ದರು. ಬದಲಿಗೆ ಸಮಾಜಕ್ಕೆ ಅಗತ್ಯವಾದ ಉನ್ನತ ತತ್ವ-ಸಿದ್ಧಾಂತ ಪಾಲನೆಯಲ್ಲಿ ಅವರು ನಂಬಿಕೆ ಇಟ್ಟಿದ್ದರು ಎಂದು ಸ್ಮರಿಸಿದರು.

ಕುವೆಂಪು ಕನ್ನಡ ಸಾರಸ್ವತ ಲೋಕದ ಧ್ರುವತಾರೆ. ಅವರಿಗೆ ಪ್ರಶಸ್ತಿಗಳ ಸರಮಾಲೆಯೇ ಸಂದಿದೆ. ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದವರಲ್ಲಿ ಅವರು ಮೊದಲಿಗರು. ಇಡೀ ಕನ್ನಡಿಗರ ಹೃದಯ ಗೆದ್ದವರು. ವರ್ತಮಾನಕ್ಕೆ ಪ್ರಸ್ತುತವಾದ ಚಿಂತನೆಗಳನ್ನು ಸಾಹಿತ್ಯದ ಮೂಲಕ ನೀಡಿದ ಜ್ಞಾನಕವಿ ಕುವೆಂಪು ಎಂದು ನುಡಿದರು. ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎನ್.ವಿ.ಫಣೀಶ್, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಅಪರ ಜಿಲ್ಲಾಧಿಕಾರಿ ಡಾ.ಮಂಜುನಾಥಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಮುಖಂಡ ಸುರೇಶ್‍ಗೌಡ, ಕನ್ನಡಪರ ಹೋರಾಟಗಾರರಾದ ತಾಯೂರು ವಿಠ್ಠಲಮೂರ್ತಿ, ಶಿವಶಂಕರ್ ಮತ್ತಿತರರು ವೇದಿಕೆಯ ಲ್ಲಿದ್ದರು. ವಿವಿಧ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Translate »