ವೀಕೆಂಡ್ ಕರ್ಫ್ಯೂಗೆ ಕುಶಾಲನಗರ ಸಂಪೂರ್ಣ ಸ್ತಬ್ಧ
ಕೊಡಗು

ವೀಕೆಂಡ್ ಕರ್ಫ್ಯೂಗೆ ಕುಶಾಲನಗರ ಸಂಪೂರ್ಣ ಸ್ತಬ್ಧ

April 25, 2021

ಕುಶಾಲನಗರ, ಏ.24- ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ವೀಕೆಂಡ್ ಕರ್ಫ್ಯೂಗೆ ಕುಶಾಲನಗರ ಪಟ್ಟಣ ಸಂಪೂರ್ಣ ಸ್ತಬ್ಧಗೊಂಡಿತು.

ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಿರುವ ಹಿನ್ನೆಲೆ ಯಲ್ಲಿ ಪಟ್ಟಣದ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರ ವಹಿ ವಾಟು ಸ್ಥಗಿತಗೊಳಿಸಿ ಬೆಂಬಲ ಸೂಚಿಸಿದರು.

ಪ್ರತಿ ನಿತ್ಯ ಜನಜಂಗುಳಿಯಿಂದ ಹಾಗೂ ವಾಹನ ಸಂಚಾರದಿಂದ ಕೂಡಿರುತ್ತಿದ್ದ ಕುಶಾಲ ನಗರ ಇಂದು ಬೆಳಗ್ಗೆಯಿಂದಲೇ ಎಲ್ಲಾ ರಸ್ತೆಗಳು ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿದ್ದವು. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.

ಜನರ ಓಡಾಟ ಕೂಡ ಸಂಪೂರ್ಣ ಕ್ಷೀಣಿಸಿತು. ಸರ್ಕಾರಿ ಕಚೇರಿಗಳು, ಶಾಲಾ, ಕಾಲೇಜುಗಳು ಸಂಪೂರ್ಣ ಬಂದ್ ಆಗಿದ್ದವು. ಕೆಎಸ್‍ಆರ್‍ಟಿಸಿ, ಖಾಸಗಿ ಬಸ್ಸು, ಟೆಂಪೆÇೀ, ಆಟೋರೀಕ್ಷಾ ಸೇರಿದಂತೆ ಎಲ್ಲ ವಾಹನಗಳ ಓಡಾಟ ಸ್ಥಗಿತಗೊಂಡಿತು. ಪಟ್ಟಣದ ಸುತ್ತಲೂ ಇರುವ ಕಾವೇರಿ ನಿಸರ್ಗಧಾಮ, ಹಾರಂಗಿ, ದುಬಾರೆ, ಚಿಕ್ಲಿಹೊಳೆ, ಗೋಲ್ಡನ್ ಟೆಂಪಲ್ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳು ಬಂದ್ ಆಗಿದ್ದವು. ಅಗತ್ಯ ಸೇವೆಗಳಾದ ಔಷಧ ಅಂಗಡಿ,ಆಸ್ಪತ್ರೆಗಳು ತೆರೆದಿದ್ದವು. ಡಿವೈಎಸ್ಪಿ ಶೈಲೇಂದ್ರ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಮಹೇಶ್, ಠಾಣಾಧಿಕಾರಿಗಳಾದ ಗಣೇಶ್, ಶಿವಶಂಕರ್ ಹಾಗೂ ಸಿಬ್ಬಂದಿ ಗಳು ಭದ್ರತಾ ವ್ಯವಸ್ಥೆ ಸಲ್ಲಿಸಿದ್ದರು.

ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಗುಡ್ಡೆಹೊಸೂರು, ನಂಜರಾಯಪಟ್ಟಣ ಭಾಗಗಳಲ್ಲಿಯೂ ವೀಕೆಂಡ್ ಕರ್ಫ್ಯೂ ಉತ್ತಮ ಸ್ಪಂದನೆ ಕಂಡುಬಂದಿತು.

Translate »