ಫೆ.21ಕ್ಕೆ ಕಲಾಪ ಮುಂದೂಡಿಕೆ
News

ಫೆ.21ಕ್ಕೆ ಕಲಾಪ ಮುಂದೂಡಿಕೆ

February 19, 2022

ಬೆಂಗಳೂರು, ಫೆ. 18(ಕೆಎಂಶಿ)- ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ವಿಧಾನಮಂಡಲದ ಉಭಯ ಸದನಗಳಲ್ಲಿ ನಡೆಸುತ್ತಿರುವ ಧರಣಿ 3ನೇ ದಿನದ ಕಲಾಪವನ್ನೂ ಬಲಿ ತೆಗೆದುಕೊಂಡಿತು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಸದಸ್ಯರ ಮನವೊಲಿಸುವಲ್ಲಿ ವಿಫಲವಾದ ನಂತರ ಪ್ರಶ್ನೋತ್ತರ ಅವಧಿ ಪೂರ್ಣಗೊಳಿಸಿ ಸದನವನ್ನು ಸೋಮವಾರಕ್ಕೆ ಮುಂದೂಡಿದರು. ಅಹೋರಾತ್ರಿ ಧರಣಿಯನ್ನು ಇಂದೂ ಕೂಡ ಕಾಂಗ್ರೆಸ್ ಸದಸ್ಯರು ಮುಂದುವರೆಸಿದರು. ಈಶ್ವರಪ್ಪ ರಾಜೀನಾಮೆ ನೀಡ ಬೇಕೆಂದು ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದ ರಿಂದ ವಿಧಿಯಿಲ್ಲದೆ ಸಭಾಧ್ಯಕ್ಷ ಕಾಗೇರಿ ಅವರು ಕಲಾಪವನ್ನು ಮುಂದೂಡಿದರು. ಸುಗಮವಾಗಿ ಸದನ ನಡೆಸಬೇಕೆಂದು ಸಭಾಧ್ಯಕ್ಷ ಕಾಗೇರಿ ಅವರು ಪದೇ ಪದೆ ಮಾಡಿಕೊಂಡ ಮನವಿ ಪ್ರಯೋಜನವಾಗಲಿಲ್ಲ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್À ಸೇರಿದಂತೆ ಕಾಂಗ್ರೆಸ್‍ನ ಎಲ್ಲ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರೆಸಿದರು. ಬೇಕೇ ಬೇಕು, ನ್ಯಾಯ ಬೇಕು. ನ್ಯಾಯ ಕೊಡಿ, ನ್ಯಾಯ ಕೊಡಿ, ಸ್ಪೀಕರ್ ಅವರೇ ನ್ಯಾಯ ಕೊಡಿ, ವಜಾ ಮಾಡಿ, ವಜಾ ಮಾಡಿ ಈಶ್ವರಪ್ಪರನ್ನು ವಜಾ ಮಾಡಿ, ನಮ್ಮ ಧ್ವಜ ನಮ್ಮ ಹಕ್ಕು. ದೇಶದ್ರೋಹಿ ಕೆ.ಎಸ್.ಈಶ್ವರಪ್ಪ ಅವರನ್ನು ವಜಾ ಮಾಡಿ ಎಂದು ಆಗ್ರಹಿಸಿದರು. ಪ್ರತಿಪಕ್ಷ ಸದಸ್ಯರ ಗದ್ದಲ, ಕೋಲಾಹಲ, ಧರಣಿಯ ನಡುವೆಯೇ ಸಭಾ ಧ್ಯಕ್ಷರು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಂಡರು.

ಪ್ರಶ್ನೋತ್ತರ ಅವಧಿ ಮುಗಿದ ಮೇಲೆ ಕಾಗೇರಿ ಅವರು ಪ್ರತಿಭಟನಾನಿರತ ಸದಸ್ಯರಿಗೆ ಮನವಿ ಮಾಡಿ, ನಿಮ್ಮ ನಿಮ್ಮ ಆಸನಗಳಿಗೆ ಮರಳಿ, ಅನೇಕ ಸದಸ್ಯರು ಮಾತನಾಡು ವುದಿದೆ, ಚರ್ಚೆಯಲ್ಲಿ ನೀವು ಭಾಗಿಯಾಗಿ, ನಿಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಪ್ರಸ್ತಾಪಿಸಿ, ಸಂಬಂಧಪಟ್ಟ ಸಚಿವರಿಂದ ಉತ್ತರ ಪಡೆಯಿರಿ. ಈ ರೀತಿ ಸದನಕ್ಕೆ ಅಡ್ಡಿ ಪಡಿಸಬೇಡಿ ಎಂದರು. ನಿಮ್ಮ ಪ್ರತಿಭಟನೆಯಿಂದ ಅನೇಕ ಸದಸ್ಯರ ಹಕ್ಕುಗಳು ಮೊಟಕಾಗುತ್ತಿವೆ. ಸಭಾ ಧ್ಯಕ್ಷನಾಗಿ ಅದನ್ನು ಕಾಪಾಡುವುದು ನನ್ನ ಕರ್ತವ್ಯವೂ ಹೌದು. ಕೆಲವರ ಪ್ರತಿಭಟನೆಯಿಂದ ಇನ್ನೊಬ್ಬರ ಹಕ್ಕು ಮೊಟಕಾಗಬಾರದು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆರಂಭಿಸಲಿ ಎಂದು ಸಲಹೆ ಮಾಡಿದರು. ಆಗಲೂ ಬಾವಿಯಲ್ಲಿದ್ದ ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಮನವಿಗೆ ಓಗೊಡದೆ ತಮ್ಮ ಧರಣಿಯನ್ನು ಮುಂದುವರೆಸಿದರು. ಅಂತಿಮವಾಗಿ ಸಭಾಧ್ಯಕ್ಷರು ವಿಧಿಯಿಲ್ಲದೆ ಸದನವನ್ನು ಸೋಮವಾರಕ್ಕೆ ಮುಂದೂಡಿದರು.

ಇತ್ತ ವಿಧಾನ ಪರಿಷತ್ತಿನಲ್ಲೂ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಸದಸ್ಯರು ಇಂದು ಧರಣಿ ಮುಂದುವರಿಸಿದ್ದರಿಂದ ಕಲಾಪ ಅಸ್ತವ್ಯಸ್ತಗೊಂಡಿದ್ದಲ್ಲದೆ, ಯಾವುದೇ ಚರ್ಚೆ ನಡೆಯದೇ ಕಲಾಪ ಸೋಮವಾರಕ್ಕೆ ಮುಂದೂಡಲ್ಪಟ್ಟಿತು.

ಜೀವ ಬೆದರಿಕೆ: ಸದನ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಬಿಜೆಪಿ ನಾಯಕರು ತಮ್ಮ ಶಾಸಕರಿಗೆ ಹರಿಪ್ರಸಾದ್ ವಿರುದ್ಧ ಹೋರಾಟ ನಡೆಸುವಂತೆ ಕರೆ ನೀಡಿದ್ದಾರೆ. ಇದರಿಂದ ತಮಗೆ ಜೀವ ಬೆದರಿಕೆ ಇದೆ. ಆ ಬಗ್ಗೆ ಚರ್ಚೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಈ ಹಂತದಲ್ಲಿ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಹಿಜಾಬ್ ಧರಿಸಿದರೆ ಅತ್ಯಾಚಾರ ಕಡಿಮೆಯಾಗಲಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಹೇಳಿಕೆ ನೀಡಿದ್ದಾರೆ. ಮೊದಲು ಅವರನ್ನು ವಜಾ ಮಾಡಿ, ಅವರನ್ನು ಬಂಧಿಸಲಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯಲ್ಲಿ ನಡೆದುಕೊಂಡ ರೀತಿಯನ್ನು ಪ್ರಶ್ನಿಸಿ ಬಿಜೆಪಿ ಸದಸ್ಯರು ಧಿಕ್ಕಾರ ಕೂಗಿದಾಗ, ಕಾಂಗ್ರೆಸ್‍ನ ಸಲೀಂ ಅಹಮ್ಮದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಗಳ ಹೆಸರು ಪ್ರಸ್ತಾಪಿಸಿ ಧಿಕ್ಕಾರ ಕೂಗಿದರು. ಈ ಸನ್ನಿವೇಶದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ, ಗಲಾಟೆ, ಗದ್ದಲಗಳು ಜೋರಾದವು. ಬಿಜೆಪಿ ಸದಸ್ಯರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಲ್ಲದೆ ಹಿಂದೂ ವಿರೋಧಿ ಕಾಂಗ್ರೆಸ್‍ಗೆ ಧಿಕ್ಕಾರ ಎಂದರು. ಕಾಂಗ್ರೆಸ್ ಸದಸ್ಯರು ಬಿಜೆಪಿ ಸರ್ಕಾರ ಹಾಗೂ ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ರಣರಂಗವಾಯಿತು.

Translate »