ಭಾರತೀಯ ಸೇನೆಯ `ಸವ್ಯಸಾಚಿ’ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ
ಮೈಸೂರು

ಭಾರತೀಯ ಸೇನೆಯ `ಸವ್ಯಸಾಚಿ’ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ

January 29, 2021

ಮೈಸೂರು, ಜ.28(ಎಂಟಿವೈ)- ಸ್ವತಂತ್ರ ಭಾರತದ ಭಾರತೀಯ ಸೇನೆಯ ಮೊಟ್ಟ ಮೊದಲ ಮಹಾ ದಂಡನಾಯಕರಾಗಿ ಬಲಿಷ್ಠ ಸೇನೆ ಕಟ್ಟಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಭಾರತೀಯ ಸೇನೆಯ `ಸವ್ಯಸಾಚಿ’ ಎನಿಸಿದ್ದಾರೆ ಎಂದು ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದ್ದಾರೆ.

ಮೈಸೂರಿನ ಎನ್.ಆರ್.ಮೊಹಲ್ಲಾದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿ ಷ್ಠಾನ ಹಾಗೂ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜಯಂತಿ ಹಾಗೂ ಸಾಧಕರಿಗೆ ಅಭಿ ನಂದನಾ ಕಾರ್ಯಕ್ರಮವನ್ನು ಉದ್ಘಾ ಟಿಸಿ, ಕಾರ್ಯಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಕೆ.ಎಂ.ಕಾರ್ಯಪ್ಪ ಅವರು ಭಾರತೀಯ ಸೇನೆ ಸೇರಿದ ಕ್ಷಣದಿಂದಲೇ ತಮ್ಮನ್ನು ದೇಶಕ್ಕೆ ಸಮರ್ಪಿಸಿಕೊಂಡ ವೀರಸೇನಾನಿ ಹಾಗೂ ಅಪ್ರತಿಮ ದೇಶಭಕ್ತ ಎನಿಸಿದ್ದರು. ಇಂತಹ ದೇಶೋದ್ಧಾರಕ ಸುಪುತ್ರನನ್ನು ಪಡೆದ ಭಾರತಮಾತೆ ನಿಜಕ್ಕೂ ಧನ್ಯಳು ಎಂದು ನುಡಿದರು.

ಕರ್ನಾಟಕ ಕಲಿ, ಯೋಧರ ನಾಡು ಕೊಡ ಗಿನ ವೀರಕುವರ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಜೀವನದಿ ಕಾವೇರಿಯಷ್ಟೇ ನಿರ್ಮಲವಾದ ಪರಿಶುದ್ಧ ವ್ಯಕ್ತಿತ್ವದವರು. ಶಿಸ್ತಿನ ಸಿಪಾಯಿಯಾಗಿ ಭಾರತೀಯ ಸೇನೆಗೆ ತಮ್ಮ ಜೀವನವನ್ನೇ ಮುಡುಪಿಟ್ಟಿದ್ದರು. ಕನಸು-ಮನಸಲ್ಲೂ ಅವರಿಗೆ ದೇಶ ಸೇವೆ, ಸೇನೆಯೇ ಸರ್ವಸ್ವವಾಗಿತ್ತು. ಇಂತಹ ಮಹಾನ್ ನಾಯಕರನ್ನು ಯುವಜನರು ಆದರ್ಶವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು. ಭಾರತೀಯ ಭೂಸೇನೆ, ವಾಯುಸೇನೆ, ನೌಕಾಪಡೆಗೆ ಪ್ರಪ್ರಥಮ ಮಹಾ ದಂಡನಾಯಕರಾಗಿ ಜಗತ್ತಿಗೆ ಮಾದರಿಯಾಗುವಂತೆ ಸೇನೆ ಕಟ್ಟಿದ್ದಾರೆ. ಜಗತ್ತಿನ ಉದ್ದಗಲಕ್ಕೂ ಸೇನಾ ಸಾರ್ವ ಭೌಮರಾಗಿ ಮಿಂಚಿದ್ದಾರೆ. ಕೊಡವರು ಎಂದೂ ಕೊಡುವವರು. ಯೋಧರನ್ನು ಕೊಡುವುದರಲ್ಲಿ ನಿಸ್ಸೀಮರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಸೇರಿದಂತೆ ಭಾರತೀಯ ಸೇನೆಗೆ ಬಹಳಷ್ಟು ಯೋಧರನ್ನು ಕೊಟ್ಟ ಕೊಡಗು ಭಾರೀ ಗೌರವಕ್ಕೆ ಪಾತ್ರವಾಗಿದೆ ಎಂದು ಪ್ರಶಂಸಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಉತ್ತರ ವಲಯದ ಬಿಇಓ ಬಿ.ಉದಯಕುಮಾರ್ ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಬದುಕು, ಸಾಧನೆ ಹಾಗೂ ಸಾಹಸದ ಹಿನ್ನೆಲೆ ವಿವರಿಸಿದರು.

ಇದೇ ವೇಳೆ ಕಾರ್ಯಪ್ಪ ಅವರ ಗೌರ ವಾರ್ಥ ವೈದ್ಯ ಡಾ.ಕೆ.ಮಹೇಶ್ ಅವರಿಗೆ `ವೈದ್ಯರತ್ನ’ ಪ್ರಶಸ್ತಿ, ಶಿಕ್ಷಕಿಯರಾದ ಎಸ್.ಕಲ್ಪನಾ, ಕೆ.ಸಿ.ಸೀತಮ್ಮ (ಕೋಮಲಾ ಪುರ), ರಾಜಮ್ಮ ಅವರಿಗೆ `ಶಿಕ್ಷಣ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ, ಮುಖ್ಯ ಶಿಕ್ಷಕಿ ಕೆ.ಎಲ್. ಕಾಂಚನಮಾಲಾ, ಚಿತ್ರ ಕಲಾವಿದೆ ಡಾ. ಜಮುನಾರಾಣಿ ಮಿರ್ಲೆ, ಹಿರಣ್ಮಯಿ ಪ್ರತಿ ಷ್ಠಾನದ ಅಧ್ಯಕ್ಷ, ಶಿಕ್ಷಣ ತಜ್ಞ ಎ.ಸಂಗಪ್ಪ, ಶಿಕ್ಷಕರಾದ ಎಂ.ಶಂಕರ್, ಎಂ.ಎನ್. ಸುರೇಶ್, ಪಿ.ಮಹೇಶ್, ಜೆ.ನಿರಂಜನ, ಎಸ್. ರಾಜಮ್ಮ, ಎಂ.ಜೆ.ಭಾಗ್ಯ, ಜೆ.ಗಾಯತ್ರಿ, ಎನ್.ಪವಿತ್ರ, ಎ.ಎಸ್.ಮಮತಾ ಇನ್ನಿತ ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

 

Translate »