`ಅಂಬಾರಿ’ ಅರ್ಜುನನ ವೈಭೋಗ ಮರೆಯಲಾದೀತೆ…
ಮೈಸೂರು

`ಅಂಬಾರಿ’ ಅರ್ಜುನನ ವೈಭೋಗ ಮರೆಯಲಾದೀತೆ…

September 15, 2020

ಮೈಸೂರು, ಸೆ.14(ಎಸ್‍ಬಿಡಿ)- ಪಾರಂಪರಿಕ ಮೈಸೂರು ದಸರಾ ಮಹೋತ್ಸವದಲ್ಲಿ ಸತತ 8 ಬಾರಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಬಾಯಿಸಿದ್ದ ಅರ್ಜುನ, ಈ ಬಾರಿ ಬರುತ್ತಿಲ್ಲ ಎನ್ನುವುದೇ ಜನ ರಿಗೆ ಅತ್ಯಂತ ಬೇಸರದ ಸಂಗತಿ. ವಿಜಯದಶಮಿ ಮೆರವಣಿಗೆಯಲ್ಲಿ ತಾಯಿ ಚಾಮುಂಡೇಶ್ವರಿ ಪ್ರತಿಷ್ಠಾಪಿತ 750 ಕೆಜಿ ಚಿನ್ನದ ಅಂಬಾರಿ ಯನ್ನು ಹೊತ್ತು, ಅರಮನೆ ಅಂಗಳದಿಂದ ಬನ್ನಿಮಂಟಪ ದವರೆಗೆ ಗಾಂಭೀರ್ಯದಿಂದ ಸಾಗುವ ಅರ್ಜುನನನ್ನು ನೋಡುವುದೇ ಒಂದು ಚಂದ ವಾಗಿತ್ತು. 2012ರಿಂದ 2019 ರವರೆಗೆ ಸತತವಾಗಿ 8 ಬಾರಿ ಕಿಂಚಿತ್ತೂ ಲೋಪವಾಗದಂತೆ ವೈಭವದ ಮೆರ ವಣಿಗೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅರ್ಜುನ, ಈ ಬಾರಿ ಕಾಡಿನಲ್ಲೇ ಉಳಿಯಲಿದ್ದಾನೆ.

ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಪ್ರಕಾರ 60 ವರ್ಷ ತುಂಬಿದ ಆನೆಗಳ ಮೇಲೆ ಹೆಚ್ಚು ಒತ್ತಡ ಹೇರಲು ಅವಕಾಶವಿಲ್ಲ. ಹಾಗಾಗಿ 20 ವರ್ಷ ದಸರೆ ಯಲ್ಲಿ ಭಾಗವಹಿಸಿ, ಅದರಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ಬದಲು ಈ ಬಾರಿ ಅಭಿಮನ್ಯು ಅಂಬಾರಿ ಹೊರಲು ಸಜ್ಜಾಗಿದ್ದಾನೆ. ಕಾಕನ ಕೋಟೆ ಅರಣ್ಯ ಪ್ರದೇಶದಲ್ಲಿ 1968ರಲ್ಲಿ ಅರ್ಜುನನನ್ನು ಸೆರೆ ಹಿಡಿದು, ಪಳಗಿಸಲಾಯಿತು. ಈಗ ಬಳ್ಳೆ ಆನೆ ಶಿಬಿರದಲ್ಲಿರುವ ಈತ ಸುಮಾರು 6 ಸಾವಿರ ಕೆಜಿ ತೂಕವಿದ್ದಾನೆ. ಅರ್ಜುನನಿಗೆ 60 ತುಂಬಿದ್ದರೂ  ಆತನ ಶಕ್ತಿ, ಸಾಮಥ್ರ್ಯವೇನೂ ಕಡಿಮೆಯಾಗಿಲ್ಲ. ಆದರೆ ನ್ಯಾಯಾಲಯದ ಆದೇಶ ಮೀರುವಂತಿಲ್ಲ.

ಮೊದಲು ಅಂಬಾರಿ ಹೊರುತ್ತಿದ್ದ ದ್ರೋಣ ಅರಣ್ಯದಲ್ಲಿ ಸೊಪ್ಪು ಕೀಳುವಾಗ ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿ ಮೃತಪಟ್ಟ ನಂತರ, ಒಮ್ಮೆ ಅರ್ಜುನನಿಗೆ ಅವಕಾಶವಿತ್ತು. ಆದರೆ ಮಾವುತನ ಸಾವಿಗೆ ಕಾರಣನಾದ ಎಂಬ ಕಾರಣಕ್ಕೆ ಅಂಬಾರಿ ಜವಾಬ್ದಾರಿ ಬಲರಾಮನ ಹೆಗಲೇರಿತು. ಸತತವಾಗಿ 14 ವರ್ಷ ಅಂಬಾರಿ ಹೊತ್ತಿದ್ದ ಬಲರಾಮನಿಗೆ ವಯಸ್ಸಾಗಿದ್ದರಿಂದ ಮತ್ತೆ ಅರ್ಜುನ ಜಂಬೂಸವಾರಿಯ ನೇತೃತ್ವ ವಹಿಸಿದ.

ಅರ್ಜುನ ಹಾಗೂ ಮಾವುತ ಮಾಸ್ತಿಗೆ ಅವಿನಾಭಾವ ನಂಟಿತ್ತು. 4 ದಸರೆಯಲ್ಲಿ ಅರ್ಜುನನ ಮುನ್ನಡೆಸಿದ್ದ ಮಾಸ್ತಿ 2016ರಲ್ಲಿ ಅನಾರೋಗ್ಯದಿಂದ ಮೃತಪಟ್ಟ ನಂತರ ಅವರ ಪುತ್ರ ಮಹೇಶ್ ಹಾಗೂ ವಿನೂ ಅಂಬಾರಿ ಅರ್ಜುನನ ನಿಬಾಯಿಸಿದ್ದರು.

ಲಕ್ಷಾಂತರ ಜನರ ಹರ್ಷೋಧ್ಘಾರದ ನಡುವೆ ಚಿನ್ನದ ಅಂಬಾರಿ ಹೊತ್ತು   ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದ ಅರ್ಜುನ, ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾನೆ. ಈ ಬಾರಿ ಅರ್ಜುನನಿಲ್ಲದ ದಸರೆ ಎಂದು ಜನರಲ್ಲಿ ಬೇಸರವಿದೆ.

ಹಾಗೆಯೇ ಕಾಡಿನಲ್ಲಿರುವ ಅರ್ಜುನನೂ ಮೈಸೂರಿನ ವೈಭವದ ದಸರೆಯನ್ನು ನೆನೆದು, ಬಾವುಕನಾಗಿರಬಹುದು.

 

 

Translate »